
ದೇಶದ ಹೈಕೋರ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ ಪಿಲಾ ಪಹಾನ್ ಅಲಿಯಾಸ್ ಪೀಲಾ ಪಹಾನ್ ಮತ್ತಿತರರು ಹಾಗೂ ಜಾರ್ಖಂಡ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೆಲವು ನ್ಯಾಯಮೂರ್ತಿಗಳು ದಣಿವರಿಯಿಲ್ಲದೆ ಕೆಲಸ ಮಾಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದರೆ, ಇತರರು ಅದೇ ದಕ್ಷತೆಯಿಂದ ತೀರ್ಪುಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೆ ಸಿಂಗ್ ಅವರಿದ್ದ ಪೀಠ ಹೇಳಿತು.
ನ್ಯಾಯಮೂರ್ತಿಗಳ ಮೇಲೆ ಶಾಲೆಯ ಮುಖ್ಯೋಪಾಧ್ಯಾಯರಂತೆ ಸೂಕ್ಷ್ಮ ನಿಯಂತ್ರಣ ಮಾಡಲಾಗದು. ಆದರೆ, ಸಾರ್ವಜನಿಕ ನಿರೀಕ್ಷೆ ಈಡೇರಿಸಲು ಹಾಗೂ ಹೊಣೆಗಾರಿಕೆ ನೆನಪಿಸಲು ವಿಶಾಲ ಸಾಮಾನ್ಯ ಮಾರ್ಗಸೂಚಿಗಳನ್ನು ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ಸದಾ ವಿಚಾರಣೆ ಮುಂದೂಡುವ ಪ್ರವೃತ್ತಿಯ ಬಗ್ಗೆಯೂ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಹೀಗೆ ಪ್ರಕರಣಗಳನ್ನು ಮುಂದೂಡುತ್ತಲೇ ಇರುವುದು ನ್ಯಾಯಾಂಗದ ಮೇಲೆ ಜನರು ಇಟ್ಟಿರುವ ವಿಶ್ವಾಸ ಕುಂದಿಸುತ್ತದೆ. ತೀರ್ಪುಗಳನ್ನು ಬಾಕಿ ಇಡುವುದರಿಂದ ದಾವೆ ಹೂಡುವವರು ನಿರಾಶರಾಗಲಿದ್ದು ತೀರ್ಪು ವಿಳಂಬವಾಗುತ್ತವೆ. ಹೆಚ್ಚಿನ ಪ್ರಕರಣಗಳನ್ನು ವಿಚಾರಣೆ ಮಾಡುವ ಹೆಸರಿನಲ್ಲಿ ಪ್ರಕರಣಗಳನ್ನು ಕೂಡಿಡುವ ಬದಲು, ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದನ್ನು ನ್ಯಾಯಮೂರ್ತಿಗಳು ರೂಢಿ ಮಾಡಿಕೊಳ್ಳವೇಕು ಎಂದು ಅದು ಒತ್ತಿ ಹೇಳಿದೆ.
ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳಿಗೆ ಸೇರಿದ ನಾಲ್ವರು ಜೀವಾವಧಿ ಶಿಕ್ಷೆಗೊಳಗಾದವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಜಾರ್ಖಂಡ್ ಹೈಕೋರ್ಟ್ ತಮ್ಮ ಕ್ರಿಮಿನಲ್ ಮೇಲ್ಮನವಿಗಳ ಕುರಿತು ಎರಡು ಮೂರು ವರ್ಷಗಳಿಗೂ ಹೆಚ್ಚು ಕಾಲ ಆದೇಶ ಕಾಯ್ದಿರಿಸಿದ್ದರೂ ತೀರ್ಪು ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದರು. ಮೇ 2025 ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ, ಸುಮಾರು ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ನಾಲ್ಕು ಮೇಲ್ಮನವಿಗಳಲ್ಲಿ ಹೈಕೋರ್ಟ್ ಅಂತಿಮವಾಗಿ ತೀರ್ಪು ನೀಡಿತ್ತು.
ಆದರೆ ಬೇರೆ ಹೈಕೋರ್ಟ್‌ಗಳಲ್ಲಿಯೂ ತೀರ್ಪು ಪ್ರಕಟಿಸುವಲ್ಲಿ ವಿಳಂಬ ಉಂಟಾಗುತ್ತಿರುವ ಸಮಸ್ಯೆಯನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್ ಜನವರಿ 31, 2025ಕ್ಕೂ ಮೊದಲೇ ಕಾಯ್ದಿಟ್ಟರೂ ಇನ್ನೂ ಪ್ರಕಟಿಸದ ತೀರ್ಪುಗಳ ಮಾಹಿತಿಯನ್ನು ಹೈಕೋರ್ಟ್‌ಗಳು ನೀಡಬೇಕು ಎಂದು ಸೂಚಿಸಿದೆ.
ಇದೇ ವೇಳೆ, ಹೈಕೋರ್ಟ್‌ಗಳು ತಮ್ಮ ನಿಯಮಾವಳಿಗಳನ್ನು ಹಾಗೂ ಮಾಹಿತಿ ಸಂಕಲನ ವಿನ್ಯಾಸಗಳನ್ನು ಪುನರ್‌ಪರಿಶೀಲಿಸುವಂತೆ ಸೂಚಿಸಿದ ನ್ಯಾಯಾಲಯವು, ಆ ಮೂಲಕ ಪ್ರತಿಯೊಂದು ಅಪ್‌ಲೋಡ್ ಆದ ತೀರ್ಪಿನಲ್ಲಿ ಆ ತೀರ್ಪನ್ನು ಯಾವಾಗ ಕಾಯ್ದಿರಿಸಲಾಯಿತು, ಯಾವಾಗ ತೀರ್ಪನ್ನು ಪ್ರಕಟಿಸಲಾಯಿತು ಮತ್ತು ಅಂತಿಮವಾಗಿ ಎಂದು ತೀರ್ಪಿನ ಪೂರ್ಣಪಠ್ಯವನ್ನು ಸಂಬಂಧಿತ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು ಎನ್ನುವ ಮಾಹಿತಿ ಸ್ಪಷ್ಟವಾಗಿ ನಮೂದು ಮಾಡಲು ಆಗ್ರಹಿಸಿತು.
ಅಲ್ಲದೆ, ತೀರ್ಪಿನ ಕಾರ್ಯಾತ್ಮಕ ಭಾಗವನ್ನು ಘೋಷಿಸಿದ ಬಳಿಕ ಅದರ ಕಾರಣಭಾಗವನ್ನು ಕೂಡ ತ್ವರಿತವಾಗಿಯೇ ಅಂದರೆ ಸಾಮಾನ್ಯವಾಗಿ ಐದು ದಿನಗಳೊಳಗೆ ಪ್ರಕಟಿಸಬೇಕು ಎಂದು ರತಿಲಾಲ್ ಝವೇರ್‌ಭಾಯಿ ಪಾರಮಾರ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣದಲ್ಲಿ ಹೇಳಲಾಗಿದೆ. ಗರಿಷ್ಠವೆಂದರೂ 10–15 ದಿನಗಳ ಒಳಗೆ ಕೊಡಬಹುದು ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 10ರಂದು ನಡೆಯಲಿದೆ.