ಆನ್‌ಲೈನ್‌ ಗೇಮಿಂಗ್ ಕಾಯಿದೆ: ಕರ್ನಾಟಕ ಸೇರಿ 3 ಹೈಕೋರ್ಟ್‌ಗಳ ಪ್ರಕರಣ ತನಗೆ ವರ್ಗಾಯಿಸಿಕೊಂಡ ಸುಪ್ರೀಂ

ಆಗಸ್ಟ್ 22ರಂದು ಅಧಿಸೂಚನೆಗೊಂಡ ಈ ಕಾಯ್ದೆಯು, ಪಣಕ್ಕಾಗಿ ಆಡುವ ಆನ್‌ಲೈನ್‌ ಆಟಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಿದ ಮೊದಲ ಕೇಂದ್ರ ಕಾನೂನಾಗಿದೆ.
online games, Supreme Court
online games, Supreme Court
Published on

ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯಿದೆ, 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಸೇರಿ ಮೂರು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗೆ ವರ್ಗಾಯಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ಪುರಸ್ಕರಿಸಿದೆ [ಭಾರತ ಒಕ್ಕೂಟ ಮತ್ತು ಹೆಡ್ ಡಿಜಿಟಾ ನಡುವಣ ಪ್ರಕರಣ].

ಮೂರು ಹೈಕೋರ್ಟ್‌ಗಳ ಮುಂದಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗೆ ವರ್ಗಾಯಿಸಿಕೊಂಡರೆ ಸಮಯದ ಉಳಿತಾಯವಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇದಕ್ಕೆ ಅರ್ಜಿ ಸಲ್ಲಿಸಿದ್ದ ಗೇಮಿಂಗ್‌ ಕಂಪೆನಿಗಳು ವಿರೋಧ ವ್ಯಕ್ತಪಡಿಸಲಿಲ್ಲ.

Also Read
ಆನ್‌ಲೈನ್‌ ಗೇಮಿಂಗ್ ಕಾಯಿದೆ: ಕರ್ನಾಟಕ ಸೇರಿ 3 ಹೈಕೋರ್ಟ್‌ಗಳ ಅರ್ಜಿ ಸುಪ್ರೀಂಗೆ ವರ್ಗಾಯಿಸುವಂತೆ ಕೋರಿದ ಕೇಂದ್ರ

"ಸುಪ್ರೀಂ ಕೋರ್ಟ್‌ ಪ್ರಕರಣ ಆಲಿಸಿ ಅಂತಿಮ ತೀರ್ಪು ಬಂದರೆ ನಾವು ತುಂಬಾ ಸಂತೋಷಪಡುತ್ತೇವೆ. ನಾನು ಮಧ್ಯಂತರ ಆದೇಶಕ್ಕಾಗಿ ಒತ್ತಾಯಿಸಿದ್ದೆ, ಆದ್ದರಿಂದ ನ್ಯಾಯಾಲಯ ದಯವಿಟ್ಟು ಪ್ರಕರಣ ವರ್ಗಾವಣೆ ಮಾಡಿಕೊಳ್ಳಬಹುದು" ಎಂದು ಹೆಡ್ ಡಿಜಿಟಲ್ ಪರವಾಗಿ ಹಿರಿಯ ವಕೀಲ ಸಿ ಆರ್ಯಮಾ ಸುಂದರಂ ತಿಳಿಸಿದರು.

ನಂತರ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠವು ಸರ್ಕಾರದ ವರ್ಗಾವಣೆ ಅರ್ಜಿಯನ್ನು ಮಾನ್ಯ ಮಾಡಿತು.

Also Read
ಎಲ್ಲಾ ಬಗೆಯ ಆನ್‌ಲೈನ್‌ ಹಣದ ಆಟ ನಿಷೇಧಿಸಲು ಮುಂದಾದ ಕೇಂದ್ರ: ಇ- ಕ್ರೀಡೆಗೆ ಉತ್ತೇಜನ

ಭಾರತ ಸರ್ಕಾರದ ಮನವಿಯ ಮೇರೆಗೆ ಈ ಪ್ರಕರಣವನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲಾಗಿದೆ. ಕರ್ನಾಟಕ, ದೆಹಲಿ, ಮತ್ತು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಿಕೊಳ್ಳಲಾಗಿದೆ. ಹೈಕೋರ್ಟ್‌ಗಳು ಈ ದಾಖಲೆಗಳನ್ನು ಒಂದು ವಾರದ ಒಳಗೆ ಡಿಜಿಟಲ್ ವಿಧಾನದಲ್ಲಿ ಸುಪ್ರೀಂಕೋರ್ಟ್‌ಗೆ ಕಳುಹಿಸಬೇಕು. ಇದು ಸಮಯ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ದಾಖಲೆಗಳು ಬಂದ ಮೇಲೆ ಸುಪ್ರೀಂಕೋರ್ಟ್‌ ಅದನ್ನು ಮುಂದಿನ ವಿಚಾರಣೆಗೆ ಅಣಿ ಮಾಡಿಕೊಳ್ಳಲಿದೆ. ಪಕ್ಷಕಾರರು  ಅಗತ್ಯವಿದ್ದರೆ  ತಮ್ಮ ರಿಟ್‌ ಪಿಟೀಷನ್‌ಗಳನ್ನು ಕೂಡ ದಾಖಲೆಗಳೊಂದಿಗೆ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು.

ಆಗಸ್ಟ್ 22 ರಂದು ಜಾರಿಗೆ ಬಂದ ಕಾಯಿದೆಯು ಕೌಶಲ್ಯದ ಆಟವೇ ಇರಲಿ ಅಥವಾ ಅವಕಾಶದ ಆಟವೇ ಇರಲಿ ಇಲ್ಲವೇ ಎರಡರ ಮಿಶ್ರಣವಾಗಿರಲಿ ಎಲ್ಲೆಲ್ಲಿ ಹಣಕಾಸು ವಹಿವಾಟು ನಡೆಯುತ್ತದೆಯೋ ಅಂತಹ ಎಲ್ಲಾ ಆನ್‌ಲೈನ್‌ ಗೇಮ್‌ಗಳನ್ನು ಆನ್‌ಲೈನ್‌ ಹಣದ ಆಟ ಎಂದು ವರ್ಗೀಕರಿಸಿ ನಿಷೇಧಿಸುತ್ತದೆ. ಆನ್‌ಲೈನ್‌ ಹಣದ ಆಟಗಳ ಕಾರ್ಯಾಚರಣೆ ಮತ್ತು ಅವುಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧ ಎಂದು ಕಟ್ಟುನಿಟ್ಟಾಗಿ ಕಾಯಿದೆ ವರ್ಗೀಕರಿಸುತ್ತದೆ.

Kannada Bar & Bench
kannada.barandbench.com