
ತೃತೀಯ ಲಿಂಗಿಗಳ ಹಕ್ಕುಗಳನ್ನು ವರ್ಧಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಶುಕ್ರವಾರ ತೃತೀಯಲಿಂಗಿ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಸಮಾನ ಅವಕಾಶ ಹಾಗೂ ಸಮಗ್ರ ವೈದ್ಯಕೀಯ ಚಿಕಿತ್ಸೆ ಒದಗಿಸುವುದಕ್ಕಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಈ ತೀರ್ಪು ತೃತೀಯ ಲಿಂಗಿಗಳ ಭವಿಷ್ಯ ಉಜ್ವಲಗೊಳಿಸುವ ಆಶಯದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.
ಸಮಿತಿ ಮುಖ್ಯಸ್ಥರಾಗಿ ನ್ಯಾ. ಆಶಾ ಮೆನನ್ ಅವರನ್ನು ನೇಮಕ ಮಾಡಲಾಗಿದೆ. ತೃತೀಯಲಿಂಗಿ ವ್ಯಕ್ತಿಗಳ ಪರ ಹೋರಾಟಗಾರರಾದ ಗ್ರೇಸ್ ಬಾನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಕೈ ಪದ್ಮಶಾಲಿ. ಗೌರವ್ ಮಂಡಲ್ ಹಾಗೂ ಬೆಂಗಳೂರಿನ ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್ ಸದಸ್ಯ ಡಾ. ಸಂಜಯ್ ಶರ್ಮಾ ಸದಸ್ಯರಾಗಿದ್ದು ಅಮಿಕಸ್ ಕ್ಯೂರಿಯಾಗಿ ಬೆಂಗಳೂರು ಮೂಲದ ಹಿರಿಯ ವಕೀಲೆ ಜಯ್ನಾ ಕೊಠಾರಿ ಸೇವೆ ಸಲ್ಲಿಸಲಿದ್ದಾರೆ.
"ಸಮಾನ ಅವಕಾಶಗಳು, ಸಮಗ್ರ ವೈದ್ಯಕೀಯ ಆರೈಕೆ, ಲಿಂಗಭೇದವಿಲ್ಲದೆ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುವುದಕ್ಕಾಗಿ ಸಮಿತಿ ರಚಿಸಲಾಗಿದೆ. ಅರ್ಜಿದಾರರ ಸೇವೆಗಳನ್ನು ಹೇಗೆ ಕೊನೆಗೊಳಿಸಲಾಯಿತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ನೀಡಿದ್ದೇವೆ. ಇದರಿಂದ ತೃತೀಯ ಲಿಂಗಿಗಳ ಭವಿಷ್ಯ ಸುರಕ್ಷಿತವಾಗಿದೆ ಎಂದು ಭಾವಿಸುತ್ತೇವೆ. ನಾವು ಮಾರ್ಗಸೂಚಿಗಳನ್ನು ರೂಪಿಸಿದ್ದು ಮಾರ್ಗಸೂಚಿಗಳನ್ನು ಹೊಂದಿರದ ಯಾವುದೇ ಸಂಸ್ಥೆಗಳು ಕೇಂದ್ರವು ನೀತಿ ರೂಪಿಸುವವರೆಗೆ ಅದನ್ನು ಪಾಲಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
ಉತ್ತರ ಪ್ರದೇಶ ಮತ್ತು ಗುಜರಾತ್‌ನ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ವೇಳೆ ಲಿಂಗ ಪರಿವರ್ತಿತ ಮಹಿಳೆಯ ನೇಮಕಾತಿ ರದ್ದುಮಾಡಿದ ಕುರಿತಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.
ಉತ್ತರ ಪ್ರದೇಶದಲ್ಲಿ ನೇಮಕಾತಿ ಪತ್ರ ನೀಡಲಾಗಿತ್ತು ಆದರೆ ಅಲ್ಲಿ ಆರು ದಿನ ಮಾತ್ರ ಬೋಧಿಸಲು ಸಾಧ್ಯವಾಯಿತು ಎಂದು ಅರ್ಜಿದಾರರು ತಿಳಿಸಿದ್ದರು. ಗುಜರಾತ್‌ನಲ್ಲೂ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು ಆದರೆ ಕೆಲಸಕ್ಕೆ ಸೇರ್ಪಡೆಯಾಗಲು ಅವಕಾಶ ನೀಡಿರಲಿಲ್ಲ.