ನ್ಯಾಯಮೂರ್ತಿಗಳಾಗಿ ಕೋಟೀಶ್ವರ್ ಸಿಂಗ್, ಮಹದೇವನ್ ಪ್ರಮಾಣ ವಚನ ಸ್ವೀಕಾರ: ಸುಪ್ರೀಂ ಕೋರ್ಟ್‌ಗೆ ಮತ್ತೆ ಪೂರ್ಣ ಬಲ

ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈ 11ರಂದು ಇಬ್ಬರು ನ್ಯಾಯಮೂರ್ತಿಗಳ ನೇಮಕಾತಿಯನ್ನು ಶಿಫಾರಸು ಮಾಡಿತ್ತು. ಜುಲೈ 16 ರಂದು ಕೇಂದ್ರ ಸರ್ಕಾರ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು.
Justice N Kotiswar Singh and Justice R Mahadevan
Justice N Kotiswar Singh and Justice R Mahadevan
Published on

ಮಣಿಪುರ ಹೈಕೋರ್ಟ್‌ನಿಂದ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಮತ್ತು ಮದ್ರಾಸ್ ಹೈಕೋರ್ಟ್‌ನಿಂದ ನ್ಯಾಯಮೂರ್ತಿ ಆರ್ ಮಹದೇವನ್ ಗುರುವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುಪ್ರೀಂ ಕೋರ್ಟ್‌  ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಪ್ರಮಾಣ ವಚನ ಬೋಧಿಸಿದರು.

ಈ ಇಬ್ಬರ ಪ್ರಮಾಣ ವಚನ ಸ್ವೀಕಾರದಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲಾ 34 ನ್ಯಾಯಮೂರ್ತಿ ಹುದ್ದೆ ಭರ್ತಿಯಾದಂತಾಗಿದ್ದು ಸುಪ್ರೀಂ ಕೋರ್ಟ್‌ ಪೂರ್ಣಬಲದಲ್ಲಿ ಕಾರ್ಯ ನಿರ್ವಹಿಸಲಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈ 11ರಂದು ಇಬ್ಬರು ನ್ಯಾಯಮೂರ್ತಿಗಳ ನೇಮಕಾತಿಯನ್ನು ಶಿಫಾರಸು ಮಾಡಿತ್ತು.  ಜುಲೈ 16 ರಂದು ಕೇಂದ್ರ ಸರ್ಕಾರ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು.

ನ್ಯಾ. ಕೋಟೀಶ್ವರ್‌ ಸಿಂಗ್ ಅವರು ಫೆಬ್ರವರಿ 2023ರಿಂದ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಮೂಲತಃ ಮಣಿಪುರದವರು. ಈ ನೇಮಕಾತಿ ಮೂಲಕ ಅವರು ರಾಜ್ಯದ ಮೊದಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ನ್ಯಾ. ಸಿಂಗ್‌ ಅವರ ತಂದೆ ಎನ್ ಇಬೊಟೊಂಬಿ ಸಿಂಗ್ ಕೂಡ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಮಣಿಪುರದ ಮೊದಲ ಅಡ್ವೊಕೇಟ್‌ ಜನರಲ್‌ ಸಹ ಆಗಿದ್ದರು.

Also Read
ಅಭ್ಯರ್ಥಿಗೆ ನ್ಯಾಯಮೂರ್ತಿ ಹುದ್ದೆ ತಿರಸ್ಕರಿಸಲು ಕೊಲಿಜಿಯಂ ನೀಡಿದ ಕಾರಣಗಳನ್ನು ಬಹಿರಂಗಪಡಿಸಲಾಗದು: ದೆಹಲಿ ಹೈಕೋರ್ಟ್

ಗುವಾಹಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುವ ಮುನ್ನ ನ್ಯಾ. ಕೋಟೀಶ್ವರ್‌ ಸಿಂಗ್‌ ಕೆಲ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ್ದರು. 2012ರಲ್ಲಿ ಅವರನ್ನು ಗುವಾಹಟಿ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಗಳನ್ನಾಗಿ ಮಾಡಲಾಯಿತು. ಬಳಿಕ ಮಣಿಪುರ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಗುವಾಹಟಿ ಹೈಕೋರ್ಟ್‌ಗೆ ಮರಳಿದರು.

Also Read
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಎನ್‌ ಕೋಟೀಶ್ವರ್‌ ಸಿಂಗ್‌, ಆರ್‌ ಮಹಾದೇವನ್‌ರನ್ನು ನೇಮಿಸಿದ ಕೇಂದ್ರ

ನ್ಯಾ. ಮಹದೇವನ್ ಅವರು ಮೇ 2024ರಿಂದ ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿ 1989ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು.

ತಮಿಳುನಾಡು ಸರ್ಕಾರದ ಹೆಚ್ಚುವರಿ ಸರ್ಕಾರಿ ವಕೀಲ, ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲ ಮತ್ತು ಹಿರಿಯ ಪ್ಯಾನಲ್ ವಕೀಲರಾಗಿ ಅವರು 9,000 ಕ್ಕೂ ಹೆಚ್ಚು ಪ್ರಕರಣಗಳ ವೃತ್ತಿ ಅನುಭವ ಹೊಂದಿದ್ದಾರೆ. 2013ರಲ್ಲಿ ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅವರು ನಿಯುಕ್ತರಾದರು.

Kannada Bar & Bench
kannada.barandbench.com