ಫಾರ್ಮುಲಾ ಇ ರೇಸ್: ಬಿಆರ್‌ಎಸ್‌ ಶಾಸಕ ಕೆ ಟಿ ರಾಮರಾವ್ ವಿರುದ್ಧದ ಎಫ್ಐಆರ್ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಮರಾವ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠ ತಿರಸ್ಕರಿಸಿತು.
KT Rama Rao and Supreme Court
KT Rama Rao and Supreme CourtKT Rama Rao (FB)
Published on

ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್ ನಡೆಸಲು 2023ರಲ್ಲಿ ತೆಲಂಗಾಣದ ಅಂದಿನ ಬಿಆರ್‌ಎಸ್‌ ಸರ್ಕಾರ ಅಕ್ರಮವಾಗಿ ಹಣ ವರ್ಗಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸುವಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರ ಪುತ್ರ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್‌) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಬುಧವಾರ ತಿರಸ್ಕರಿಸಿದೆ.

ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಮರಾವ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠ ತಿರಸ್ಕರಿಸಿತು.  

Also Read
ಫಾರ್ಮುಲಾ ಇ ರೇಸ್: ಬಿಆರ್‌ಎಸ್‌ ಶಾಸಕ ಕೆ ಟಿ ರಾಮರಾವ್ ವಿರುದ್ಧದ ಎಫ್ಐಆರ್ ರದ್ದತಿಗೆ ತೆಲಂಗಾಣ ಹೈಕೋರ್ಟ್ ನಕಾರ

ರಾಮರಾವ್ ಪರವಾಗಿ ಹಿರಿಯ ವಕೀಲ ಆರ್ಯಮ ಸುಂದರಂ ವಾದ ಮಂಡಿಸಿದರೆ, ಹಿರಿಯ ವಕೀಲ ಮುಕುಲ್ ರೋಹಟಗಿ ತೆಲಂಗಾಣ ಸರ್ಕಾರವನ್ನು ಪ್ರತಿನಿಧಿಸಿದ್ದರು. .

ಐಪಿಸಿ ಸೆಕ್ಷನ್‌  409ರ ಅಡಿಯಲ್ಲಿ ಕ್ರಿಮಿನಲ್‌ ವಿಶ್ವಾಸದ್ರೋಹ ಹಾಗೂ ಭ್ರಷ್ಟಾಚಾರ ತಡೆ ಕಾಯಿದೆಯಡಿಯ ಅಪರಾಧಗಳಿಗಾಗಿ ರಾಮರಾವ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ರೇಸ್ ಆಯೋಜನೆಗಾಗಿ 2023ರಲ್ಲಿ ಆಗಿನ ಬಿಆರ್‌ಎಸ್‌ ಸರ್ಕಾರ ಅಕ್ರಮವಾಗಿ ಹಣ ವರ್ಗಾಯಿಸಿದ್ದ ಪ್ರಕರಣ ಇದಾಗಿದೆ. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ರೇಸ್‌ ಆಯೋಜನೆಯನ್ನು ರದ್ದುಗೊಳಿಸಿತ್ತು.

Also Read
ಚೆನ್ನೈ ಫಾರ್ಮ್ಯುಲಾ ಒನ್‌ ನೈಟ್‌ ರೇಸ್‌ ಅಬಾಧಿತ: ತಡೆ ನೀಡಲು ನಿರಾಕರಿಸಿದ ಮದ್ರಾಸ್‌ ಹೈಕೋರ್ಟ್‌

ರೇಸ್‌ ನಿರ್ವಹಣೆಯಲ್ಲಿ ಹಣಕಾಸು ಅಕ್ರಮವಾಗಿದೆ ಎಂದು ಕಾಂಗ್ರೆಸ್‌ ಡಿಸೆಂಬರ್ 18ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿತ್ತು. ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರಾವ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದತಿಗಾಗಿ ರಾವ್‌ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಕಳೆದ ವರ್ಷ ಡಿಸೆಂಬರ್ 20ರಂದು ಹೈಕೋರ್ಟ್ ರಾಮರಾವ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ನಂತರ ಸುದೀರ್ಘವಾಗಿ ಪ್ರಕರಣ ಆಲಿಸಿದ್ದ ಅದು ರಾಮರಾವ್‌ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com