ಅಶೋಕ್ ವಿರುದ್ಧದ ಎಫ್ಐಆರ್ ರದ್ದತಿ ವೇಳೆ ನೆಹರು ಅವರನ್ನು ನೆನೆದದ್ದೇಕೆ ಸುಪ್ರೀಂ ಕೋರ್ಟ್?

ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು ಕಡ್ಡಾಯ ಕಾನೂನು ಅವಶ್ಯಕತೆಗಳ ಪಾಲನೆಯಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Supreme Court with R Ashoka
Supreme Court with R Ashoka facebook
Published on

ಅಕ್ರಮ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು ಕಡ್ಡಾಯ ಕಾನೂನು ಅವಶ್ಯಕತೆ ಪಾಲನೆಯಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠ ತಿಳಿಸಿದೆ.

Also Read
ಕೇತಗಾನಹಳ್ಳಿ ಭೂ ಹಗರಣ: ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಎಚ್‌ಡಿಕೆ ಆರೋಪಿಯಾಗಿಸಲು ಹೈಕೋರ್ಟ್‌ ನಿರ್ದೇಶನ

ದೂರಿನ ಸಂದರ್ಭ ಹಾಗೂ ಸನ್ನಿವೇಶ ಮತ್ತು ಶಾಸನಬದ್ಧ ಅನುಮತಿ ಇಲ್ಲದಿರುವುದರ ಬಗ್ಗೆ ಒತ್ತು ನೀಡಿದ ನ್ಯಾಯಾಲಯ, ಪ್ರಕರಣದ ಸಾಕ್ಷ್ಯ ಖುದ್ದು ರಾಜಕೀಯ ದ್ವೇಷವನ್ನು ಹೇಳುತ್ತದೆ ಎಂದಿತು.

ಮೇಲ್ಮನವಿದಾರರ ವಿರುದ್ಧ ಹೂಡಲಾದ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು ದುರುದ್ದೇಶದಿಂದ ಕೂಡಿದೆ ಎಂದು ತೋರುತ್ತದೆ. ವಿಳಂಬ ನಡೆದಿರುವುದನ್ನು ಬದಿಗಿಟ್ಟರೂ ಕಾನೂನಿನ ದೃಷ್ಟಿಯಲ್ಲಿ ಮೇಲ್ಮನವಿದಾರರ ವಿರುದ್ಧ ವಿಚಾರಣೆ ಮುಂದುವರೆಸಲಾಗದು ಎಂದು ತೀರ್ಪು ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಭೂ ಹಂಚಿಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ದೊರೆತ ದಿನದಂದ ಸಂವಿಧಾನ ಸಭೆಯಲ್ಲಿ ಮಂಡಿಸಿದ್ದ ಐತಿಹಾಸಿಕ ʼಟ್ರಿಸ್ಟ್‌ ವಿತ್‌ ಡೆಸ್ಟಿನಿʼ ಭಾಷಣದಲ್ಲಿ ಪ್ರಸ್ತಾಪಿಸಿದ್ದ "ಭಾರತದ ಸೇವೆ ಎಂದರೆ ತೊಂದರೆಗೀಡಾದ ಲಕ್ಷಾಂತರ ಜನರ ಸೇವೆ. ಇದರರ್ಥ ಬಡತನ, ಅಜ್ಞಾನ, ರೋಗ ಹಾಗೂ ಅವಕಾಶದ ಅಸಮಾನತೆಯನ್ನು ಕೊನೆಗೊಳಿಸುವುದು." ಎಂಬ ಮಾತನ್ನು ಉಲ್ಲೇಖಿಸಿತು.

ಕಾನೂನು ಪ್ರಕಾರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ ಮತ್ತು ತನಿಖೆ ಕಾನೂನು ಪ್ರಕಾರ ಇಲ್ಲದಿರುವುದರಿಂದ ಅದು ಕಾನೂನುಸಮ್ಮತವಾಗಿಲ್ಲ. ಅಲ್ಲದೆ ಲೋಕಾಯುಕ್ತ ಕೂಡ ಅಶೋಕ್‌ ವಿರುದ್ಧದ ಆರೋಪಕ್ಕೆ ಆಧಾರವಿಲ್ಲ ಎಂದು ತಳ್ಳಿಹಾಕಿತ್ತು. ಆದ್ದರಿಂದ ಪ್ರಕರಣ ರಾಜಕೀಯ ಪ್ರೇರಿತ ಎಂದು ನ್ಯಾಯಾಲಯ ನುಡಿಯಿತು.  

ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ವಿರುದ್ಧ ತನಿಖೆ ನಡೆಸಲು ಸಿಆರ್‌ಪಿಸಿ ಸೆಕ್ಷನ್‌ 197ರ ಅಡಿಯಲ್ಲಿ ಸರ್ಕಾರ ಪೂರ್ವಾನುಮತಿ ಪಡೆಯಬೇಕು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಹಾಗೆ ಅನುಮತಿ ಪಡೆದಿರುವ ಉಲ್ಲೇಖವೇ ಇಲ್ಲ ಎಂದು ನ್ಯಾಯಾಲಯ ತಿಳಿಸಿತು.

Also Read
ಭೂ ಹಗರಣ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಎಂಎಲ್‌ಸಿ ಶಂಕರ್‌ ವಿರುದ್ಧದ ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್‌

ಅಶೋಕ್‌ ಅವರ ವಿರುದ್ಧ ಅನುಮತಿ ಪಡೆದಿರುವ ಬಗ್ಗೆ ದಾಖಲೆ ಸಂಪೂರ್ಣ ಮೌನವಾಗಿದೆ. ಹಾಗೆ ಅನುಮತಿ ಪಡೆಯದೆ ತನಿಖೆ ಆರಂಭಿಸಲು ಸಾಧ್ಯವಿಲ್ಲ. ಆದ್ದರಿಂದ ಎಸಿಬಿಯ ಪ್ರಾಥಮಿಕ ವರದಿ, ನಂತರದ ಎಫ್‌ಐಆರ್ ಹಾಗೂ ಎಲ್ಲಾ ಮುಂದಿನ ಕ್ರಮಗಳು ಕಾನೂನುಬದ್ಧ ನಿರ್ಬಂಧಕ್ಕೆ ವಿರುದ್ಧವಾದವು ಎಂದಿತು. ಅಂತೆಯೇ ಎಫ್‌ಐಆರ್‌‌ ಹಾಗೂ ಸಂಬಂಧಿತ ತನಿಖಾ ಪ್ರಕ್ರಿಯೆಗಳನ್ನು ಅದು ರದ್ದುಗೊಳಿಸಿತು.

ಅಶೋಕ್‌ ಅವರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ, ಸಜ್ಜನ್ ಪೂವಯ್ಯ ಮತ್ತು ಗೌರವ್ ಅಗರವಾಲ್ ವಾದ ಮಂಡಿಸಿದರು. ಕರ್ನಾಟಕ ಸರ್ಕಾರವನ್ನು ಹಿರಿಯ ವಕೀಲರಾದ ಹರಿಣ್‌ ರಾವಲ್,  ಪಿ.ಬಿ. ಸುರೇಶ್ ಮತ್ತು ವಕೀಲ ಅಮನ್ ಪನ್ವಾರ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com