ಹಿರಿಯ ನ್ಯಾಯವಾದಿ ಪದನಾಮ: ಮಾರ್ಗಸೂಚಿ ಹೊರಡಿಸಿದ ಸುಪ್ರೀಂ ಕೋರ್ಟ್; ಮಾರ್ಕಿಂಗ್ ವ್ಯವಸ್ಥೆ ರದ್ದು

ಹತ್ತು ವರ್ಷ ಕಾಲ ವಕೀಲಿಕೆ ನಡೆಸಿದ ಅನುಭವ ಇರಬೇಕು ಎಂಬ ಕನಿಷ್ಠ ಅರ್ಹತೆಯನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
Lawyers, Supreme Court
Lawyers, Supreme Court
Published on

ವಕೀಲರಿಗೆ ಹಿರಿಯ ನ್ಯಾಯವಾದಿ ಪದನಾಮ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ [ಜಿತೇಂದರ್ ಅಲಿಯಾಸ್‌ ಕಲ್ಲಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಪ್ರಸ್ತುತ ತೀರ್ಪಿನ ಪ್ರಕಾರ ನಾಲ್ಕು ತಿಂಗಳೊಳಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ , ಉಜ್ಜಲ್ ಭುಯಾನ್ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ಆದೇಶಿಸಿದೆ.  

Also Read
ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಪದೋನ್ನತಿ: ಕಡೆಗಣಿತರನ್ನು ಹೊಸದಾಗಿ ಸಂದರ್ಶಿಸಲು ಇಂದಿರಾ ಜೈಸಿಂಗ್ ಮನವಿ

ಅಂತೆಯೇ ಮಾರ್ಕಿಂಗ್‌ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ ಎಂದ ಪೀಠ ಹಿರಿಯ ನ್ಯಾಯವಾದಿ ಹುದ್ದೆ ನೀಡುವ ನಿರ್ಧಾರ ಹೈಕೋರ್ಟ್‌ಗಳ ಪೂರ್ಣ ನ್ಯಾಯಾಲಯ ಇಲ್ಲವೇ ಸುಪ್ರೀಂ ಕೋರ್ಟ್‌ಗೆ ಸೇರಿದ್ದಾಗಿದೆ.  ಅರ್ಹರೆಂದು ಕಂಡು ಬಂದ ಎಲ್ಲಾ ಅಭ್ಯರ್ಥಿಗಳ ಅರ್ಜಿಗಳನ್ನು ಅರ್ಜಿದಾರರು ಸಲ್ಲಿಸಿದ ದಾಖಲೆಗಳೊಂದಿಗೆ ಪರ್ಮನೆಂಟ್‌ ಸೆಕ್ರೇಟರಿಯೇಟ್‌ ಪೂರ್ಣನ್ಯಾಯಾಲಯದ ಮುಂದೆ ಇರಿಸಬೇಕು ಮತ್ತು ಪದನಾಮ ನೀಡುವ ಕುರಿತು ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಅದು ಆದೇಶಿಸಿತು.

ಒಂದು ವೇಳೆ ಪದನಾಮ ನೀಡಿಕೆಯ ಬಗ್ಗೆ ಒಮ್ಮತ ಮೂಡದಿದ್ದರೆ, ಆಗ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮತದಾನದ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.

"ಒಂದು ನಿರ್ದಿಷ್ಟ ಪ್ರಕರಣದಲ್ಲಿ ರಹಸ್ಯ ಮತದಾನ ನಡೆಸಬೇಕೇ ಬೇಡವೇ ಎಂಬ ನಿರ್ಧಾರವನ್ನು ಹೈಕೋರ್ಟ್‌ಗಳಿಗೆ ಬಿಡುವುದು ಉತ್ತಮ, ವಾಸ್ತವಾಂಶಗಳನ್ನು ಪರಿಗಣಿಸಿ ಮತ್ತು ನಿರ್ದಿಷ್ಟ ಪ್ರಕರಣ ಆಧರಿಸಿ ಅವು ಕಾರ್ಯನಿರ್ವಹಿಸಬಹುದು" ಎಂದು ನ್ಯಾಯಾಲಯ ವಿವರಿಸಿತು.

ಹಿರಿಯ ನ್ಯಾಯವಾದಿ ಪದನಾಮ ಸ್ವೀಕರಿಸುವವರಿಗೆ ಕನಿಷ್ಠ ಹತ್ತು ವರ್ಷಗಳ ವಕೀಲಿಕೆಯ ಅನುಭವ ಇರಬೇಕು ಎಂಬ ಕನಿಷ್ಠ ಅರ್ಹತೆಯನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ವಕೀಲರು ಹಿರಿಯ ನ್ಯಾಯವಾದಿ ಪದನಾಮಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಪದ್ಧತಿ ಮುಂದುವರೆಯಬಹುದು. ಈ ಪ್ರಕ್ರಿಯೆಯನ್ನು ಪದನಾಮ ನೀಡಿಕೆಗೆ ಸಂಬಂಧಿಸಿದ ವಕೀಲರ ಒಪ್ಪಿಗೆ ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಇದಲ್ಲದೆ, ಅರ್ಜಿ ಸಲ್ಲಿಸದೆ ಇರುವವರನ್ನೂ ಸಹ ಪೂರ್ಣ ನ್ಯಾಯಾಲಯವು ಹಿರಿಯ ನ್ಯಾಯವಾದಿ ಪದನಾಮಕ್ಕೆ ಪರಿಗಣಿಸಿಬಹುದು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಧೀಶರು ವೈಯಕ್ತಿಕವಾಗಿ ಯಾರನ್ನೂ ಆ ಪದನಾಮಕ್ಕೆ ಶಿಫಾರಸು ಮಾಡಲು ಅವಕಾಶವಿಲ್ಲ ಎಂದು ಇದೇ ವೇಳೆ ಪೀಠವು ಸ್ಪಷ್ಟಪಡಿಸಿತು.

Also Read
ಹಿರಿಯ ವಕೀಲರ ಹುದ್ದೆ ನೇಮಕಾತಿ ವೇಳೆ ಸ್ವಜನಪಕ್ಷಪಾತ ಆರೋಪ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಅಪಹರಣ ಪ್ರಕರಣವೊಂದರಲ್ಲಿ ದೋಷಿಯೊಬ್ಬನ ಶಿಕ್ಷೆಯಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಾರ್ಚ್ 20 ರಂದು ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿ, ಅಪರಾಧಿಯ ಮೇಲ್ಮನವಿಯಲ್ಲಿ ಕೆಲವು ಸಂಗತಿಗಳನ್ನು ಮರೆಮಾಚಿರುವುದು ನ್ಯಾಯಾಲಯದ ಗಮನಕ್ಕೆ ಬಂತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಡ್ವೊಕೇಟ್‌ ಆನ್‌ ರೆಕಾರ್ಡ್‌ಗಳಿಂದ ಸಹಿ ಮಾಡಲಾದ ಸುಳ್ಳು ಮನವಿಗಳ ಕುರಿತಂತೆ ಪ್ರಕರಣದ ವಿಚಾರಣೆಯನ್ನು ವಿಸ್ತರಿಸಿತ್ತು.

ನಂತರ, ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರ ನಡೆಯನ್ನು ಕೂಡ ಪ್ರಕರಣದಲ್ಲಿ ತನಿಖೆಗೆ ಒಳಪಡಿಸಲಾಯಿತು. ಪರಿಣಾಮ, ವಕೀಲರನ್ನು ಹಿರಿಯ ನ್ಯಾಯವಾದಿ ಹುದ್ದೆಗೆ ನೇಮಿಸುವ ಇಡೀ ಪ್ರಕ್ರಿಯೆಯ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿತ್ತು.

Kannada Bar & Bench
kannada.barandbench.com