ಉ.ಪ್ರದೇಶ, ರಾಜಸ್ಥಾನಗಳಲ್ಲಿ ಮತ್ತೆ 'ಬುಲ್ಡೋಜರ್ ನ್ಯಾಯ': ನ್ಯಾಯಾಂಗ ನಿಂದನೆ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಪ್ರಕರಣದಲ್ಲಿ ನೊಂದ ಕಕ್ಷಿದಾರರು ಎಂದು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟವನ್ನು ಕರೆಯಲಾಗದು ಎಂದ ಪೀಠ ಮನವಿ ವಜಾಗೊಳಿಸಿತು.
Bulldozer
Bulldozer Image for representative purposes
Published on

ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ಥಾನದಲ್ಲಿ ಆಸ್ತಿಗಳನ್ನು ನ್ಯಾಯಾಲಯದ ವಿಚಾರಣೆ ಇಲ್ಲದೆ ನೆಲಸಮ ಮಾಡುವ ಶಿಕ್ಷೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ.

ಪ್ರಕರಣದಲ್ಲಿ ನೊಂದ ಕಕ್ಷಿದಾರರು ಎಂದು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟವನ್ನು ಕರೆಯಲಾಗದು ಎಂದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ , ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿದೆ.

Also Read
ಬುಲ್ಡೋಜರ್ ಅನ್ಯಾಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌; ನ್ಯಾಯಾಂಗ ನೇತೃತ್ವದ ತೆರವು ಕಾರ್ಯಾಚರಣೆಗೆ ಒತ್ತು

ಒಕ್ಕೂಟವನ್ನು ಉದ್ದೇಶಿಸಿದ ನ್ಯಾ. ಗವಾಯಿ ಅವರು “ನೀವು ಮೂರನೆಯವರು (ನೇರವಾಗಿ ಸಂಬಂಧಪಡದವರು). ತೊಂದರೆಗೊಳಗಾದವರು ನ್ಯಾಯಾಲಯಕ್ಕೆ ಬರಲಿ ಆಗ ವಿಚಾರಣೆ ನಡೆಸುತ್ತೇವೆ. ಇದು ವ್ಯಾಜ್ಯಗಳ ರಾಶಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಆರೋಪಿಗಳ ಆಸ್ತಿ ಧ್ವಂಸ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ತಡೆಯಾಜ್ಞೆ ಉಲ್ಲಂಘಿಸಿ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ಥಾನದಲ್ಲಿ ಕಾನೂನುಬಾಹಿರವಾಗಿ ತೆರವು ಕಾರ್ಯಾಚರಣೆ ನಡೆದಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಉತ್ತರಾಖಂಡದ ಹರಿದ್ವಾರ, ರಾಜಸ್ಥಾನದ ಜೈಪುರ ಹಾಗೂ ಉತ್ತರ ಪ್ರದೇಶದ ಕಾನ್ಪುರದಲ್ಲಿತೆರವು ಕಾರ್ಯಾಚರಣೆ ನಡೆಯುತಿದ್ದು ಮೂರು ನಗರಗಳಿಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳನ್ನು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಪಕ್ಷಕಾರರನ್ನಾಗಿ ಮಾಡಬೇಕು ಎಂದು ಅರ್ಜಿ ತಿಳಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತರು ಖುದ್ದು ಸಂಪರ್ಕಿಸಬಹುದು ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿದೆ. ಸಂತ್ರಸ್ತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಶಕ್ತರಲ್ಲ ಎಂಬ ವಾದವನ್ನು ಅದು ತಿರಸ್ಕರಿಸಿತು.

ಪತ್ರಿಕೆ ವರದಿಗಳ ಆಧಾರದ ಮೇಲಷ್ಟೇ ಮನವಿ ಸಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ವಾದಿಸಿದರು.

Also Read
'ಬುಲ್ಡೋಜರ್ ನ್ಯಾಯʼ ನೀಡದಂತೆ ಸುಪ್ರೀಂ ಕೋರ್ಟ್‌ ಛಡಿಯೇಟು: ಮಾರ್ಗಸೂಚಿಗೆ ನಿರ್ಧಾರ

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ವಿಚಾರಣೆಯೇ ಇಲ್ಲದೆ ಅಕ್ರಮವಾಗಿ ಶಿಕ್ಷಿಸುವ ನೆವದಲ್ಲಿ ಬುಲ್ಡೋಜರ್‌ ಬಳಸಿ ನೆಲಸಮ ಮಾಡುವುದನ್ನು ತಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ಕಾಯ್ದಿರಿಸಿತ್ತು.

 ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕಿತರ ಆಸ್ತಿಗಳನ್ನು ನ್ಯಾಯಾಲಯದ ಅನುಮತಿ ಪಡೆಯದೆ ನೆಲಸಮ ಮಾಡುವುದನ್ನು ನಿಷೇಧಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶ ಪ್ರಕರಣ ಇತ್ಯರ್ಥವಾಗುವವರೆಗೆ ಮುಂದುವರೆಯಲಿದೆ ಎಂದು ಅದು ಆದೇಶಿಸಿತ್ತು.

Kannada Bar & Bench
kannada.barandbench.com