
ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಡ್ಡಿ ಧನಸಹಾಯದ ಅಡಿ ಗೃಹ ಯೋಜನೆಗಳ ಅಡಿಯಲ್ಲಿ ಸಾಲ ನೀಡಿದ್ದಕ್ಕೆ ಸಂಬಂಧಿಸಿದಂತೆ ಬಿಲ್ಡರ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಸಂಬಂಧದ ಕುರಿತು ಏಳು ಪ್ರಾಥಮಿಕ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸಿಬಿಐಗೆ ಆದೇಶಿಸಿದೆ [ ಹಿಮಾನ್ಶು ಸಿಂಗ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].
ಅಲ್ಲದೆ ಸೂಪರ್ ಟೆಕ್ ಕಂಪೆನಿ ವಿರುದ್ಧ799 ಕ್ಕೂ ಹೆಚ್ಚು ಅರ್ಜಿದಾರರು ದಾವೆ ಹೂಡಿರುವುದರಿಂದ 1998ರಿಂದ ಅದು ₹5,157 ಕೋಟಿಗೂ ಹೆಚ್ಚು ಹಣ ಸಂಗ್ರಹಿಸುವುದರಿಂದ ಹಾಗೂ 19 ವಿವಿಧ ಬ್ಯಾಂಕುಗಳು ಅಥವಾ ವಸತಿ ಹಣಕಾಸು ಕಂಪನಿಗಳೊಂದಿಗೆ ಪಾಲುದಾರನಾಗಿರುವ ಹಿನ್ನೆಲೆಯಲ್ಲಿ ಅದರ ವಿರುದ್ಧ ನಿರ್ದಿಷ್ಟವಾಗಿ ತನಿಖೆ ನಡೆಸುವಂತೆಯೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಆದೇಶಿಸಿತು.
ತ್ರಿಪಕ್ಷೀಯ ಸಾಲ ಒಪ್ಪಂದಗಳಿಂದಾಗಿ ಬ್ಯಾಂಕುಗಳು ಮತ್ತು ಬಿಲ್ಡರ್‌ಗಳ ನಡುವಿನ "ಅಪವಿತ್ರ ಸಂಬಂಧ"ದ ಬಗ್ಗೆ ಗಮನ ಸೆಳೆದ ಪೀಠ, ವ್ಯಾಪಕವಾದ ನಿಯಂತ್ರಕ ವೈಫಲ್ಯ, ಮನೆ ಖರೀದಿದಾರರ ವಿರುದ್ಧ ಬಲವಂತದ ವಸೂಲಾತಿ ಕ್ರಮಗಳು ಮತ್ತು ವಿತರಣೆಯ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್‌ಎಚ್‌ಬಿ) ಮಾನದಂಡಗಳನ್ನು ಕಡೆಗಣಿಸಿರುವುದನ್ನು ಪ್ರಾಥಮಿಕ ದಾಖಲೆಗಳು ಸೂಚಿಸುತ್ತವೆ ಎಂದಿತು.
ತ್ರಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಬ್ಯಾಂಕುಗಳು ಬಿಲ್ಡರ್‌ಗಳಿಗೆ ಮುಂಗಡವಾಗಿ ಸಾಲ ಬಿಡುಗಡೆ ಮಾಡುತ್ತಿದ್ದು, ಆ ಬಿಲ್ಡರ್‌ಗಳಲ್ಲಿ ಹಲವರು ನಂತರ ಸುಸ್ತಿದಾರರಾಗಿದ್ದರು. ಇದರಿಂದಾಗಿ, ಮನೆಗಳ ಯಾವುದೇ ಮಾಲೀಕತ್ವ ನೀಡದಿದ್ದರೂ ಸಹ ಬ್ಯಾಂಕುಗಳು ಮನೆ ಖರೀದಿದಾರರನ್ನು ಗುರಿಯಾಗಿಸಿಕೊಂಡಿದ್ದವು ಎಂಬ ಕಳವಳಕಾರಿ ಮಾಹಿತಿಯನ್ನು ಮಾರ್ಚ್ 18ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಗಮನಿಸಿತ್ತು.
"ಒಂದೇ ಒಂದು ಬ್ಯಾಂಕ್ ಕೂಡ ಸಂದೇಹದಿಂದ ಮುಕ್ತವಾಗಿಲ್ಲ... ಅವುಗಳ ಕಾರ್ಯವೈಖರಿ ಮತ್ತು ರೂಢಿಯನ್ನು ನೋಡಿದ್ದೇವೆ. ಒಂದೇ ಒಂದು ಇಟ್ಟಿಗೆ ಕೂಡ ಇರಿಸಲಾಗಿದೆಯೇ ಎಂದು ತಿಳಿದುಕೊಳ್ಳುವ ಮೊದಲೇ ಬ್ಯಾಂಕುಗಳು ಹಣ ಬಿಡುಗಡೆ ಮಾಡಿವೆ." ಎಂದಿತ್ತು.
1,200 ಕ್ಕೂ ಹೆಚ್ಚು ಮನೆ ಖರೀದಿದಾರರು 170 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದರು. ಅವರಲ್ಲಿ ಹಲವರು ಬಡ್ಡಿ ಧನಸಹಾಯದ ಅಡಿ (ಸಬ್‌ವೆನ್ಷನ್ ಸ್ಕೀಮ್ - ವಸತಿ ಸಮುಚ್ಛಯ ಪೂರ್ಣಗೊಂಡು ಮನೆಯ ಮಾಲೀಕತ್ವ ನೀಡುವವರೆಗೆ ನಿರ್ಮಾಣ ಸಂಸ್ಥೆಯೇ ಬಡ್ಡಿ/ಇಎಂಐ ಪಾವತಿಸುವ ಯೋಜನೆ) ಗೃಹ ಯೋಜನೆಗಳ ಅಡಿಯಲ್ಲಿ ಇಎಂಐ ಪಾವತಿಸಿದ್ದರೂ ತಮಗೆ ಮನೆಗಳ ಮಾಲೀಕತ್ವ ದೊರೆತೇ ಇಲ್ಲ ಇಷ್ಟಾದರೂ ಇದೀಗ ಬ್ಯಾಂಕುಗಳು ನಮ್ಮಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದ್ದರು.
ಬಹುತೇಕವಾಗಿ 2013 ಮತ್ತು 2015ರ ನಡುವೆ ವಸತಿ ಮಾರಾಟ ಮಾಡಲಾದ ಈ ಯೋಜನೆಗಳಲ್ಲಿ ಖರೀದಿದಾರರು ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗಿತ್ತು, ಉಳಿದ ಸಾಲವನ್ನು ಬ್ಯಾಂಕುಗಳು ನೇರವಾಗಿ ಬಿಲ್ಡರ್‌ಗಳಿಗೆ ವಿತರಿಸುತ್ತಿದ್ದವು. ಆದರೆ, 2018-19 ರ ಸುಮಾರಿಗೆ ಬಿಲ್ಡರ್‌ಗಳು ಸುಸ್ತಿದಾರರಾಗ ತೊಡಗಿದಾದ ಬ್ಯಾಂಕುಗಳು ತಾವು ಬಿಲ್ಡರ್‌ಗೆ ನೀಡಿರುವ ಸಾಲಕ್ಕೆ ಮನೆ ಖರೀದಿದಾರರನ್ನು ಮರುಪಾವತಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತು ಎನ್ನುವುದು ನ್ಯಾಯಾಲಯದ ಗಮನಕ್ಕೆ ಬಂದಿತು. ನ್ಯಾಯಾಲಯವು ಈ ಕುರಿತು ವಿವರವಾದ ತನಿಖಾ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಿಬಿಐಗೆ ಕೇಳಿತ್ತು. ಅಲ್ಲದೆ ಗುಪ್ತಚರ ದಳದ ಮಾಜಿ ನಿರ್ದೇಶಕ ರಾಜೀವ್ ಜೈನ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿತ್ತು.
ಆರು ನಗರಗಳಲ್ಲಿ 21 ಯೋಜನೆಗಳು ಮತ್ತು 800 ಮನೆ ಖರೀದಿದಾರರೊಂದಿಗೆ ಸಂಪರ್ಕ ಹೊಂದಿರುವ ಸೂಪರ್‌ಟೆಕ್ ಅನ್ನು ಈ ಯೋಜನೆಯ ಪ್ರಮುಖ ಸೂತ್ರಧಾರ ಎಂದು ಗುರುತಿಸಿ ಜೈನ್ ವರದಿಯನ್ನು ಸಲ್ಲಿಸಿದ್ದರು. ಕಂಪೆನಿಯ ಧನಸಹಾಯ ಗೃಹ ಯೋಜನೆಗಳ (ಸಬ್‌ವೆನ್ಷನ್ ಸ್ಕೀಮ್) ಅಡಿಯಲ್ಲಿ ಮುಂಗಡ ಸಾಲ ವಿತರಿಸುವಲ್ಲಿ ಎಂಟು ಬ್ಯಾಂಕ್‌ಗಳು ಮತ್ತು ವಸತಿ ಹಣಕಾಸು ಕಂಪನಿಗಳು ಪದೇ ಪದೇ ಭಾಗಿಯಾಗಿರುವುದನ್ನು ಗುರುತಿಸಿದ್ದ ಅವರು ಈ ಸಂಸ್ಥೆಗಳ ಬಗ್ಗೆ ಕೇಂದ್ರೀಕೃತ ತನಿಖೆ ನಡೆಸುವಂತೆ ಸಲಹೆ ನೀಡಿದ್ದರು.
ಜೈನ್ ಅವರ ಶಿಫಾರಸುಗಳು ಮತ್ತು ಸಿಬಿಐ ಸ್ವತಃ ಸಲ್ಲಿಸಿದ ಅಫಿಡವಿಟ್ ಆಧರಿಸಿ, ನ್ಯಾಯಾಲಯವು ಏಳು ಪ್ರಾಥಮಿಕ ವಿಚಾರಣೆಗಳನ್ನು ಪ್ರಾರಂಭಿಸಲು ಸಿಬಿಐಗೆ ನಿರ್ದೇಶನ ನೀಡಿತು. ಅದರಲ್ಲಿ ಒಂದು ಸೂಪರ್ ಟೆಕ್ ಕಂಪೆನಿಯನ್ನು ಮಾತ್ರವೇ ಕೇಂದ್ರೀಕರಿಸಿರಬೇಕು ಎಂದು ಅದು ಸೂಚಿಸಿದೆ.
ಅಲ್ಲದೆ, ನ್ಯಾಯಾಲಯದ ಹಿಂದಿನ ಆದೇಶಗಳ ಪ್ರಕಾರ ಮನೆ ಖರೀದಿದಾರರಿಗೆ ನೀಡಲಾದ ಮಧ್ಯಂತರ ರಕ್ಷಣೆ ಮುಂದುವರೆಯಲಿದ್ದು ಪ್ರಕರಣದ ಮುಂದಿನ ವಿಚಾರಣೆ ಜುಲೈ 22ರಂದು ನಡೆಯಲಿದೆ.