
ಅರುಣಾಚಲ ಪ್ರದೇಶದ ಸಾರ್ವಜನಿಕ ಕಾಮಗಾರಿಗಳ ವಿವಿಧ ಗುತ್ತಿಗೆಗಳನ್ನು ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೂರು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಗಡುವು ನೀಡಿದೆ.
ಕೇಂದ್ರ ಹಣಕಾಸು ಸಚಿವಾಲಯ ಈ ಪ್ರಕರಣದಲ್ಲಿ ಕಕ್ಷಿದಾರನಲ್ಲ ಎಂಬ ವಾದವನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿರಸ್ಕರಿಸಿತು.
"ಈ ತಾಂತ್ರಿಕ ವಿಚಾರಗಳನ್ನು ಹೇಳಬೇಡಿ. ಗೃಹ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಕೂಡ ಅಫಿಡವಿಟ್ ಸಲ್ಲಿಸಬೇಕೆಂದು ನಿರ್ದಿಷ್ಟ ನಿರ್ದೇಶನ ನೀಡಲಾಗಿದೆ. ಅಫಿಡವಿಟ್ ಸಲ್ಲಿಸಲು ಅಷ್ಟು ಸಾಕು" ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಆರೋಪಗಳ ಕುರಿತು ವರದಿ ಸಲ್ಲಿಸಲು ಮತ್ತು ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು. "ನಮಗೆ ಹಣಕಾಸು ಸಚಿವಾಲಯ ಮತ್ತು ಗೃಹ ಸಚಿವಾಲಯದ ವರದಿ ಬೇಕು. ಸಿಎಜಿ ವರದಿ ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ. ಒಪ್ಪಂದವನ್ನು ಯಾವ ಪಕ್ಷಕಾರರಿಗೆ ನೀಡಲಾಗಿದೆ ಮತ್ತು ಪ್ರಕ್ರಿಯೆ ಏನು ಎಂಬುದಕ್ಕೆ ನಮಗೆ ಸ್ಪಷ್ಟ ಉತ್ತರ ನೀಡಬೇಕು. ಟೆಂಡರ್‌ಗಳನ್ನು ಕರೆಯದಿದ್ದರೆ, ಅದನ್ನು ಹೇಳಬೇಕು. ಎರಡೂ ಸಚಿವಾಲಯಗಳು ಸ್ಪಷ್ಟವಾಗಿ ಉತ್ತರಿಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಸಹ ನೋಡಬೇಕು" ಎಂದು ಪೀಠ ಆಗ ಹೇಳಿತ್ತು.
ಖಂಡು ವಿರುದ್ಧದ ಆರೋಪಗಳ ಬಗ್ಗೆ ಸಿಬಿಐ ಅಥವಾ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇಂದು, ಅರ್ಜಿದಾರರಾದ ಸೇವ್ ಮಾನ್ ರೀಜನ್ ಫೆಡರೇಶನ್ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಅರುಣಾಚಲ ಪ್ರದೇಶ ಸರ್ಕಾರವನ್ನು ಮುಖ್ಯಮಂತ್ರಿ ಖಂಡು ಅವರು ಖಾಸಗಿ ಕಂಪನಿಯಂತೆ ನಡೆಸುತ್ತಿದ್ದಾರೆ ಎಂದು ದೂರಿದರು.
"ಕೇಂದ್ರ ಸರ್ಕಾರ, ಅಂದರೆ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಕ್ಕೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು. ಕೇಂದ್ರ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ. ವಾಸ್ತವವಾಗಿ, ಅರ್ಜಿಗೆ ಪ್ರತಿಕ್ರಿಯೆಯಾಗಿಯಷ್ಟೇ ಕೇಂದ್ರದ ಅಫಿಡವಿಟ್ ಇರಬಾರದು ಬದಲಿಗೆ ರಾಜ್ಯ ಸರ್ಕಾರ ಹಾಗೂ ಸಿಎಜಿ ಸಲ್ಲಿಸಿದ ವರದಿಗೂ ಅದು ಪ್ರತಿಕ್ರಿಯಿಸಬೇಕು” ಎಂದು ಅವರು ಹೇಳಿದರು. ನಂತರ ಕೇಂದ್ರ ಸರ್ಕಾರ ಮೂರು ವಾರದೊಳಗೆ ಪ್ರತಿಕ್ರಿಯಿಸಬೇಕು ಎಂದು ಪೀಠವು ಆದೇಶಿಸಿತು.