
ಮೂವತ್ಮೂರು ವರ್ಷದ ವ್ಯಕ್ತಿಯೊಂದಿಗೆ ವಿವಾಹವಾದ ಹದಿನಾರು ವರ್ಷದ ಬಾಲಕಿಗೆ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ದೆಹಲಿ ಮತ್ತು ಬಿಹಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಬಾಲ್ಯವಿವಾಹ ನಿಷೇಧ ಕಾಯಿದೆ- 2006ರ ಅಡಿಯಲ್ಲಿ ತನಗೆ ಮಾಡಲಾದ ಮದುವೆ ರದ್ದುಪಡಿಸಿ ರಕ್ಷಣೆ ಒದಗಿಸುವಂತೆ ಕೋರಿ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ತನ್ನ ವಾದಮಿತ್ರನ ಮೂಲಕ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಹೆತ್ತವರು ತಮ್ಮ ಸಾಲ ತೀರಿಸಲು, ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಬಿಹಾರದ ಗುತ್ತಿಗೆದಾರನೊಬ್ಬನೊಂದಿಗೆ ಬಲವಂತವಾಗಿ ತನ್ನ ಮದುವೆ ಮಾಡಿಸಿದ್ದರು. ಅಲ್ಲದೆ, ತಪ್ಪಿಸಿಕೊಳ್ಳಲು ಮುಂದಾದ ತನಗೆ ಪತಿಯ ಮನೆಯಿಂದ ಬೆದರಿಕೆ ಹಾಕಲಾಗಿತ್ತು. ಪತಿ ತನಗೆ ದೈಹಿಕ ಕಿರುಕುಳ ನೀಡಿದ್ದರೂ ತನ್ನ ಕುಟುಂಬ ಬೆಂಬಲಕ್ಕೆ ಬರುತ್ತಿಲ್ಲ ಎಂದು ಬಾಲಕಿ ದೂರಿದ್ದರು.
ಅಲ್ಲದೆ ತಾನು ಈಚೆಗೆ 10ನೇ ತರಗತಿಯ ಪರೀಕ್ಷೆ ಪೂರ್ಣಗೊಳಿಸಿದ್ದು ಅಧ್ಯಯನ ಮುಂದುವರೆಸಲು ಬಯಸಿದರೂ ಅತ್ತೆ ಮಾವ ವಿರೋಧ ವ್ಯಕ್ತಪಡಿಸಿದರು. ನನ್ನ ಸ್ನೇಹಿತನೊಂದಿಗೆ ನಾನು ಮನೆ ಬಿಟ್ಟು ಬಂದಾಗ ಸ್ನೇಹಿತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದರು. ಪ್ರಕರಣವನ್ನು ಪತಿ ಖುದ್ದು ಮುಂದುವರೆಸುತ್ತಿದ್ದು ತನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದರು.
ವಾದ ಆಲಿಸಿದ ಸುಪ್ರೀಂ ಕೋರ್ಟ್ ಬಾಲಕಿ ಮತ್ತು ಆಕೆಯ ಸ್ನೇಹಿತನಿಗೆ ತೊಂದರೆಯಾಗದಂತೆ ರಕ್ಷಣೆ ನೀಡಬೇಕು ಎಂದು ದೆಹಲಿ ಮತ್ತು ಬಿಹಾರ ಪೊಲೀಸರಿಗೆ ನಿರ್ದೇಶನ ನೀಡಿತು. ಮುಂದಿನ ವಿಚಾರಣೆಗೂ ಮುನ್ನ ಅರ್ಜಿದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸ್ಥಿತಿಗತಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 15ರಂದು ನಡೆಯಲಿದೆ.