
ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷರ ಅನುಯಾಯಿಯಾಗಿದ್ದು, ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ಹೇಳಿದ್ದಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ವಿರುದ್ಧ ರಾಹುಲ್ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದು ಇದೇ ರೀತಿಯ ಹೇಳಿಕೆ ನೀಡಿದರೆ ನ್ಯಾಯಾಲಯ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಹೇಳಿದೆ.
ಆದರೆ, ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಹೂಡಲಾದ ಕ್ರಿಮಿನಲ್ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಆದೇಶಕ್ಕೆ ಪೀಠವು ತಡೆ ನೀಡಿದೆ.
"ಕಾನೂನಿನ ಉತ್ತಮ ಅಂಶವನ್ನು ನೀವು ಎತ್ತಿರುವುದರಿಂದ ನಿಮಗೆ ತಡೆಯಾಜ್ಞೆ ಸಿಗುತ್ತದೆ. ಆದರೆ ನೀವು ಭವಿಷ್ಯದಲ್ಲಿ ನೀಡುವ ಇಂತಹ ಹೇಳಿಕೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗುವುದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎರಡು ಮಾತಿಲ್ಲ. ಅವರು ನಮಗೆ ಸ್ವಾತಂತ್ರ್ಯ ನೀಡಿದ್ದು ನಾವು ಅವರನ್ನು ಈ ರೀತಿ ಕಾಣಬೇಕೆ? ನೋಟಿಸ್ ನೀಡಿ. ಆಕ್ಷೇಪಿಸಲಾದ ಆದೇಶಕ್ಕೆ ತಡೆ ನೀಡಿ" ಎಂದು ನ್ಯಾಯಾಲಯ ನಿರ್ದೇಶಿಸಿತು.
ರಾಹುಲ್ ಅವರ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಾವರ್ಕರ್ ಅವರನ್ನು ಶ್ಲಾಘಿಸಿ ಪತ್ರ ಬರೆದಿದ್ದರು ಎಂಬುದನ್ನು ಪೀಠ ಪ್ರಸ್ತಾಪಿಸಿತು.
"ಮಹಾತ್ಮ ಗಾಂಧಿಯವರು ಕೂಡ ಅವರನ್ನು 'ನಿಮ್ಮ ನಿಷ್ಠಾವಂತ ಸೇವಕ' ಎಂಬ ಪದ ಬಳಸಿದ್ದಾರೆಂದು (ರಾಹುಲ್) ಅವರಿಗೆ ತಿಳಿದಿದೆಯೇ? ಅವರ ಅಜ್ಜಿ ಕೂಡ ಸ್ವಾತಂತ್ರ್ಯ ಹೋರಾಟಗಾರನನ್ನು ಹೊಗಳಿ ಅವರಿಗೆ ಪತ್ರ ಬರೆದಿದ್ದರೆಂದು ತಿಳಿದಿದೆಯೇ? ಅವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಯದೆ ನೀವು ಅಂತಹ ಹೇಳಿಕೆ ನೀಡಬಾರದು" ಎಂದು ರಾಹುಲ್ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಉದ್ದೇಶಿಸಿ ನ್ಯಾಯಾಲಯ ಹೇಳಿತು.
ವಕೀಲ ನೃಪೇಂದ್ರ ಪಾಂಡೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಹಗೆತನಕ್ಕೆ ಕುಮ್ಮಕ್ಕು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಮೊಕದ್ದಮೆ ಹೂಡಲಾಗಿತ್ತು. ನವೆಂಬರ್ 17, 2022ರಂದು ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವರ್ಕರ್ ಅವರನ್ನು ಬ್ರಿಟಿಷರ ಅನುಯಾಯಿ ಎಂದು ಉಲ್ಲೇಖಿಸಿದ್ದರು. ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು ಎಂದು ಹೇಳಿದ್ದರು. ಇದಕ್ಕೆ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದರು.