
ಮಹಾರಾಷ್ಟ್ರದಲ್ಲಿ 2022ರಲ್ಲಿ ನಡೆದ 'ಭಾರತ್ ಜೋಡೋ' ಸಮಾವೇಶದ ವೇಳೆ ಹಿಂದೂ ಮಹಾಸಭಾ ಮುಖಂಡ ವಿ ಡಿ ಸಾವರ್ಕರ್ ಅವರನ್ನು ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೂಡಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲಖನೌ ನ್ಯಾಯಾಲಯ ಬುಧವಾರ ₹200 ದಂಡ ವಿಧಿಸಿದೆ.
ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಅಲೋಕ್ ವರ್ಮಾ ಈ ಆದೇಶ ಪ್ರಕಟಿಸಿದ್ದಾರೆ.
ಸಾವರ್ಕರ್ ಬ್ರಿಟಿಷ್ ಸೇವಕ ಮತ್ತು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ಆರೋಪಿಸಿ ರಾಹುಲ್ ಮಾಡಿದ ಭಾಷಣ ಮತ್ತು ಹಂಚಿಕೆ ಮಾಡಿದ್ದ ಕರಪತ್ರಗಳು ದ್ವೇಷ ಮತ್ತು ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತವೆ ಎಂದು ನ್ಯಾ. ವರ್ಮಾ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಿಳಿಸಿದ್ದರು.
ಅಂತೆಯೇ ರಾಹುಲ್ ಅವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದಿದ್ದ ನ್ಯಾಯಾಲಯ ಅವರು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದರೆ ಬುಧವಾರ (ಮಾರ್ಚ್ 5) ಹಾಜರಾಗದ ರಾಹುಲ್ ಅವರಿಗೆ ನ್ಯಾಯಾಲಯ ದಂಡ ವಿಧಿಸಿತು.
ವಕೀಲ ನೃಪೇಂದ್ರ ಪಾಂಡೆ ಅವರು ನೀಡಿದ್ದ ದೂರನ್ನು ಆಧರಿಸಿ ರಾಹುಲ್ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಹಗೆತನಕ್ಕೆ ಕುಮ್ಮಕ್ಕು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.