
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ಜರೆದ ಆರೋಪಕ್ಕೆ ಸಂಬಂಧಿಸಿದಂತೆ ಹಿಂದುತ್ವವಾದಿ ಮಿಥುನ್ ಚಕ್ರವರ್ತಿ ದೇವಿದಾಸ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಮಿಥುನ್ ಚಕ್ರವರ್ತಿ ದೇವಿದಾಸ್ ಶೇಟ್ ವಿರುದ್ಧ ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ನಮೋ ಬ್ರಿಗೇಡ್ ವತಿಯಿಂದ 2024ರ ಜನವರಿ 18ರಂದು ರಾಯಚೂರಿನ ಸಿರಿವಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಭಾಗವಹಿಸಿದ್ದ ಸೂಲಿಬೆಲೆ ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ನಿಂದಿಸಿದ್ದಲ್ಲದೇ ಆಧಾರರಹಿತ ಸುಳ್ಳು ಭಾಷಣ ಮಾಡಿದ್ದಾರೆ ಎಂದು ಕಲಬುರ್ಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಕಲಬರ್ಗಿಯ ಬ್ರಹ್ಮಾಪುರ ಠಾಣೆಯಲ್ಲಿ ದೂರು ನೀಡಿದ್ದರು.
ಇದರ ಆಧಾರದಲ್ಲಿ ಸೂಲಿಬೆಲೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153ಎ (ವೈರತ್ವಕ್ಕೆ ಕುಮ್ಮಕ್ಕು), 153ಬಿ (ರಾಷ್ಟ್ರೀಯ ಏಕತೆಗೆ ಪೂರ್ವಗ್ರಹ ಪೀಡಿತ ಹೇಳಿಕೆಗಳು), 505(2) (ಸಮುದಾಯಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಸೆಕ್ಷನ್ 3(2) (v-a) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನು ಸೂಲಿಬೆಲೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಕ್ಟೋಬರ್ 2024 ರಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆಯಡಿಯ ಆರೋಪಗಳನ್ನು ಹೈಕೋರ್ಟ್ ರದ್ದುಗೊಳಿಸಿತ್ತು, ಆದರೆ ಐಪಿಸಿಯ ಸೆಕ್ಷನ್‌ಗಳಡಿ ದಾಖಲಾಗಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಲು ಅವಕಾಶ ನೀಡಿತ್ತು.
ಹೀಗಾಗಿ ಸೂಲಿಬೆಲೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ತಾನು ಅಯೋಗ್ಯ ಎಂದು ಕರೆದ ಪದವನ್ನು ಇಂಗ್ಲಿಷ್‌ನ ರ‍್ಯಾಸ್ಕಲ್ (ನೀಚ) ಎಂದು ತಪ್ಪಾಗಿ ಅರ್ಥೈಸಿಕೊಂಡಿದೆ. ಅಯೋಗ್ಯ ಎಂಬ ಪದ ಹಲವು ಸಮಾನಾರ್ಥಕ ಪದ ಹೊಂದಿದ್ದು ಅದಕ್ಕೆ ಸಮೀಪದ ಪದ ನಿಷ್ಪ್ರಯೋಜಕ ಎಂದು ಇದೆ ಎಂಬುದಾಗಿ ಸೂಲಿಬೆಲೆ ವಾದಿಸಿದ್ದರು. ಈ ವಾದ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿತು.
ಸೂಲಿಬೆಲೆ ಪರ ಹಿರಿಯ ವಕೀಲ ಅರುಣ ಶ್ಯಾಮ್ ವಾದ ಮಂಡಿಸಿದರು. ವಕೀಲರಾದ ಸುಧಾಂಶು ಪ್ರಕಾಶ್ ಮತ್ತು ಸುಯೋಗ್ ಹೆರಳೆ ಅವರ ಮೂಲಕ ಸೂಲಿಬೆಲೆ ಅರ್ಜಿ ಸಲ್ಲಿಸಿದ್ದರು.