
ಯಾವುದೇ ಸರ್ಕಾರಿ ಯೋಜನೆಗಳಿಗೆ ಹಾಲಿ ಮುಖ್ಯಮಂತ್ರಿಗಳ ಹೆಸರನ್ನು ಬಳಸುವಂತಿಲ್ಲ ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ [ದ್ರಾವಿಡ ಮುನ್ನೇತ್ರ ಕಳಗಂ ಮತ್ತು ತಿರು ಸಿ ವಿ ಷಣ್ಮುಗಂ ಇನ್ನಿತರರ ನಡುವಣ ಪ್ರಕರಣ].
ಹೈಕೋರ್ಟ್‌ನಲ್ಲಿ ಬಾಕಿ ಇದ್ದ ರಿಟ್ ಅರ್ಜಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಅರ್ಜಿದಾರರಾದ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅವರಿಗೆ ₹10 ಲಕ್ಷ ದಂಡ ವಿಧಿಸಿತು.
ಹೈಕೋರ್ಟ್ ಆದೇಶದ ವಿರುದ್ಧ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಅದು ರಾಜಕೀಯ ಕದನಗಳಿಗಾಗಿ ನ್ಯಾಯಾಲಯಗಳನ್ನು ಬಳಸಿಕೊಳ್ಳದಂತೆ ತಾನು ಪದೇ ಪದೇ ಹೇಳಿದ್ದೇನೆ. ರಿಟ್ ಅರ್ಜಿಯು ಕಾನೂನಾತ್ಮಕವಾಗಿ ತಪ್ಪು ಗ್ರಹಿಕೆಗಳಿಂದ ಕೂಡಿದೆ. ವಿಶೇಷ ಅನಮತಿ ಅರ್ಜಿಯನ್ನು ಪುರಸ್ಕರಿಸಿದ್ದೇವೆ. ಹೈಕೋರ್ಟ್ ಆದೇಶ ರದ್ದುಗೊಳಿಸಲಾಗುತ್ತಿದೆ. ಹೈಕೋರ್ಟ್‌ನಲ್ಲಿ ಬಾಕಿ ಇರುವ ರಿಟ್ ಅರ್ಜಿಯನ್ನು ₹10 ಲಕ್ಷ ದಂಡದೊಂದಿಗೆ ವಜಾಗೊಳಿಸಲಾಗುತ್ತಿದೆ ಎಂಬುದಾಗಿ ವಿವರಿಸಿತು.
ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ರಾಜಕಾರಣಿಗಳ ಭಾವಚಿತ್ರ ಬಳಸುವುದು ದೇಶದೆಲ್ಲೆಡೆ ರೂಢಿಯಲ್ಲಿದ್ದರೂ ಅರ್ಜಿದಾರರು ಆತಂಕಗೊಂಡಿರುವುದು ಏಕೆ ಎಂದು ತನಗೆ ಅರ್ಥವಾಗುತ್ತಿಲ್ಲ ಎಂದಿತು.
ಅರ್ಜಿದಾರರಿಗೆ ಸರ್ಕಾರಿ ಬೊಕ್ಕಸ ದುರುಪಯೋಗವಾಗುತ್ತಿರುವ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ, ಅವರು ಅಂತಹ ಎಲ್ಲಾ ಯೋಜನೆಗಳನ್ನು ಪ್ರಶ್ನಿಸಬೇಕಿತ್ತು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
"ರಾಜಕೀಯ ನಾಯಕರ ಹೆಸರಿನಲ್ಲಿ ಯೋಜನೆಗಳನ್ನು ಜಾರಿಗೆ ತರುವುದು ದೇಶಾದ್ಯಂತ ನಡೆದುಕೊಂಡು ಬಂದಿರುವ ರೂಢಿಯಾಗಿದೆ... ತಮಿಳುನಾಡಿನಲ್ಲಿ ವಿವಿಧ ರಾಜಕೀಯ ನಾಯಕರ ಹೆಸರಿನಲ್ಲಿ 45 ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಪಕ್ಷಗಳಿಗೆ ಮುಜುಗರವಾಗುವುದನ್ನು ತಪ್ಪಿಸಲು ನಾವು ಆ 45 ಯೋಜನೆಗಳನ್ನು ಉಲ್ಲೇಖಿಸಲು ಬಯಸುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಹೆಸರಿನಲ್ಲಿ ಅಂತಹ ಯೋಜನೆ ಪ್ರಾರಂಭಿಸಿದಾಗ, ಅರ್ಜಿದಾರರು ಒಂದೇ ಪಕ್ಷ ಮತ್ತು ಒಬ್ಬ ನಾಯಕನ ವಿಚಾರವಾಗಿಯಷ್ಟೇ ಆತಂಕಗೊಂಡಿರುವುದು ಮೆಚ್ಚುವಂಥದ್ದಲ್ಲ" ಎಂದು ಪೀಠ ಹೇಳಿತು.
ಷಣ್ಮುಗಂ ಅವರು ಈ ವಿಚಾರವಾಗಿ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಮೂರು ದಿನಗಳಲ್ಲೇ ಹೈಕೋರ್ಟ್ ಮೆಟ್ಟಿಲೇರಿದ್ದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯ ರಿಟ್ ಅರ್ಜಿ ತಪ್ಪು ಗ್ರಹಿಕೆಯಿಂದ ಕೂಡಿದ್ದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದಿತು.
ಸರ್ಕಾರದ ಕಲ್ಯಾಣ ಯೋಜನೆಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಯಾವುದೇ ಜೀವಂತ ವ್ಯಕ್ತಿಯ ಹೆಸರು, ಮಾಜಿ ಮುಖ್ಯಮಂತ್ರಿಗಳು ಮತ್ತು ಸೈದ್ಧಾಂತಿಕ ನಾಯಕರ ಛಾಯಾಚಿತ್ರ ಅಥವಾ ಪಕ್ಷಗಳ ಚಿಹ್ನೆ ಪ್ರದರ್ಶಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ಪೀಠ ಜುಲೈ 31ರಂದು ಆದೇಶಿಸಿತ್ತು.
ಕರ್ನಾಟಕ ಸರ್ಕಾರ ಮತ್ತು ಕಾಮನ್ ಕಾಸ್ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ, ಹಾಲಿ ಮುಖ್ಯಮಂತ್ರಿಯ ಛಾಯಾಚಿತ್ರ ಪ್ರಕಟಿಸಲು ಅನುಮತಿ ಇದೆಯಾದರೂ ಸೈದ್ಧಾಂತಿಕ ನಾಯಕರು ಅಥವಾ ಮಾಜಿ ಮುಖ್ಯಮಂತ್ರಿಗಳ ಚಿತ್ರಗಳನ್ನು ಬಳಸುವುದು ಪ್ರಾಥಮಿಕವಾಗಿ ನ್ಯಾಯಾಲಯದ ನಿರ್ದೇಶನಗಳಿಗೆ ವಿರುದ್ಧ ಎಂದು ಹೈಕೋರ್ಟ್ ಹೇಳಿತ್ತು. ಸರ್ಕಾರಿ ಯೋಜನೆಯ ಜಾಹೀರಾತಿನಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಸೇರಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
ತಮಿಳುನಾಡು ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಡಿಎಂಕೆ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹಟ್ಗಿ, ಪಿ ವಿಲ್ಸನ್ ವಾದ ಮಂಡಿಸಿದರು. ಎಐಎಡಿಎಂಕೆಯನ್ನು ಹಿರಿಯ ನ್ಯಾಯವಾದಿ ಮಣೀಂದರ್ ಸಿಂಗ್ ಪ್ರತಿನಿಧಿಸಿದ್ದರು.