

ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ್ ವಿಜಯ್ ಶಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ. ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕುರೇಷಿ ಅವರ ಕುರಿತು ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ವಿಶೇಷ ತನಿಖಾ ತಂಡ (ಎಸ್ಐಟಿ) ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿದ್ದಾಗ್ಯೂ ಅದನ್ನು ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಏಕೆ ಎಂದು ಸಿಜೆಐ ಸೂರ್ಯ ಕಾಂತ್ , ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಪ್ರಶ್ನಿಸಿತು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಎಸ್‌ಐಟಿ ಪ್ರಕರಣದ ತನಿಖೆ ನಡೆಸಿತ್ತು ಎಂಬುದು ಗಮನಾರ್ಹ ಸಂಗತಿ. "ನೀವು ಆಗಸ್ಟ್ 19, 2025 ರಿಂದ ಎಸ್‌ಐಟಿ ವರದಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿಲ್ಲ. ನೀವು ಕರ್ತವ್ಯ ನಿರ್ವಹಿಸಬೇಕಾದ ಶಾಸನಾತ್ಮಕ ಬಾಧ್ಯತೆ ಹೊಂದಿದ್ದೀರಿ. ಈ ಕುರಿತು ನೀವು ನಿರ್ಧರಿಸಲೇಬೇಕು. ಈಗಾಗಲೇ ಜನವರಿ 19 ಆಗಿದೆ” ಎಂದು ನ್ಯಾಯಾಲಯ ಸರ್ಕಾರದ ವಿಳಂಬ ಧೋರಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಎಸ್‌ಐಟಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿಯನ್ನು ತೆರೆದ ನ್ಯಾಯಾಲಯ ವಿವಿಧ ಅಂಶಗಳನ್ನು ತನಿಖೆ ಮಾಡಿದ ನಂತರ ಶಾ ವಿರುದ್ಧ ಮೊಕದ್ದಮೆ ಹೂಡಲು ಸರ್ಕಾರದ ಅನುಮತಿ ಕೋರಲಾಗಿರುವುದನ್ನು ತಿಳಿಸಿತು.
ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಾನೂನಿನ ಪ್ರಕಾರ ಅನುಮತಿ ನೀಡುವ ವಿಷಯದಲ್ಲಿ ಮಧ್ಯಪ್ರದೇಶ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಶಾ ಪರವಾಗಿ ಹಾಜರಾದ ಹಿರಿಯ ವಕೀಲ ಮಣೀಂದರ್ ಸಿಂಗ್, ಶಾ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ ಎಂದರು. ಕ್ಷಮೆ ಯಾಚಿಸಿದ ವಿಚಾರವನ್ನು ದಾಖಲೆಯಲ್ಲಿ ಸಲ್ಲಿಸಿಲ್ಲ. ಈಗಾಗಲೇ ತಡವಾಗಿದೆ ಎಂದು ಪೀಠ ನುಡಿಯಿತು.
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಗಡಿಯಾಚೆಗಿನ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸೇನಾ ಅಧಿಕಾರಿಗಳಲ್ಲಿ ಕರ್ನಲ್ ಕುರೇಷಿ ಒಬ್ಬರಾಗಿದ್ದರು. ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಶಾ ಹೇಳಿದ್ದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.