
ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮ ಗೋಷ್ಠಿಗಳನ್ನು ನಡೆಸಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ್ ವಿಜಯ್ ಶಾ ಅವರ ವಿಶ್ವಾಸಾರ್ಹತೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ತಾನು ಈ ಹಿಂದೆ ನಿರ್ದೇಶಿಸಿದ್ದಂತೆ ಸೂಕ್ತ ರೀತಿಯಲ್ಲಿ ಶಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಶಾ ಅವರು ಆನ್‌ಲೈನ್‌ನಲ್ಲಿ ಕ್ಷಮೆ ಯಾಚಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದರು. ಆದರೆ ಶಾ ತನ್ನ ತಾಳ್ಮೆ ಪರೀಕ್ಷಿಸುತ್ತಿರುವುದಾಗಿ ಸಿಡಿಮಿಡಿಗೊಂಡ ನ್ಯಾಯಾಲಯ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು.
ಶಾ ಅವರ ಹೇಳಿಕೆ ದಾಖಲಿಸಲಾಗಿದೆ ಎಂದು ವಕೀಲರು ತಿಳಿಸಿದರು. ಆದರೂ ತೃಪ್ತಿಗೊಳ್ಳದ ನ್ಯಾಯಾಲಯ “ಹೇಳಿಕೆ ದಾಖಲಿಸಲಾಗಿದೆ ಎಂದರೆ ಏನರ್ಥ? ಆ ಮನುಷ್ಯ ನ್ಯಾಯಾಲಯದ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಎಲ್ಲಿದೆ ಸಾರ್ವಜನಿಕ ಕ್ಷಮೆಯಾಚನೆ?” ಎಂದಿತು.
"ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ" ಎಂದು ಶಾ ಪರ ವಕೀಲರು ವಾದಿಸಿದರು.
"ಅದು ಅವರ ಇಂಗಿತವನ್ನು ಹೇಳುತ್ತದೆ. ಅವರ ವಿಶ್ವಸನೀಯತೆ ಬಗ್ಗೆ ನಮಗೆ ಹೆಚ್ಚು ಅನುಮಾನ ಮೂಡಿಸುತ್ತಿದೆ. ಆತನ ಹೇಳಿಕೆ ದಾಖಲಿಸುವುದು ಏನು ಮಹಾ ಸಂಗತಿ? ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಬೇಕಿತ್ತು" ಎಂದು ನ್ಯಾಯಾಲಯ ಹೇಳಿದೆ.
ಮಧ್ಯಪ್ರದೇಶ ಹೈಕೋರ್ಟ್ ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದ್ದನ್ನು ಪ್ರಶ್ನಿಸಿ ಶಾ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಆಲಿಸುತ್ತಿತ್ತು.
ಶಾ ವಿರುದ್ಧದ ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ), ತನಿಖೆಯ ಪ್ರಗತಿ ವರದಿಯನ್ನು ಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತು.
27 ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ, ವೀಡಿಯೊ ತುಣುಕುಗಳನ್ನು ಪರಿಶೀಲಿಸಲಾಗಿದೆ ಮತ್ತು ಆಗಸ್ಟ್ 13 ರಂದು ಮುಕ್ತಾಯಗೊಳ್ಳುವ ಶಾಸನಬದ್ಧ 90 ದಿನಗಳ ಗಡುವು ಮುಗಿಯುವ ಮೊದಲು ಎಸ್‌ಐಟಿ ತನಿಖೆಯನ್ನು ಮುಕ್ತಾಯಗೊಳಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ.
ಆಗಸ್ಟ್ 18ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ ಎಸ್‌ಐಟಿ ಸದಸ್ಯರು ಹಾಜರಿರುವಂತೆ ಆದೇಶಿಸಿತು.
ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದ ಶಾ ವಿವಾದ ಹುಟ್ಟುಹಾಕಿದ್ದರು. "ನಮ್ಮ ಹೆಣ್ಣುಮಕ್ಕಳನ್ನು ವಿಧವೆಯರನ್ನಾಗಿ ಮಾಡಿದವರಿಗೆ ಪಾಠ ಕಲಿಸಲು ನಾವು ಅವರ ಸ್ವಂತ ಸಹೋದರಿಯನ್ನು ಕಳುಹಿಸಿದ್ದೇವೆ" ಎಂದು ಶಾ ನುಡಿದಿದ್ದರು.