
ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್ ನಡೆಸಲು 2023ರಲ್ಲಿ ತೆಲಂಗಾಣದ ಅಂದಿನ ಬಿಆರ್‌ಎಸ್ ಸರ್ಕಾರ ಅಕ್ರಮವಾಗಿ ಹಣ ವರ್ಗಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್) ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ತೆಲಂಗಾಣ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಪ್ರಕರಣ ರದ್ದುಗೊಳಿಸುವಂತೆ ರಾವ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಶ್ರವಣ್ ಕುಮಾರ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ರಾವ್ ಅವರ ಬಂಧನ ಆದೇಶಕ್ಕೆ ಹತ್ತು ದಿನಗಳ ಮಟ್ಟಿಗೆ ತಡೆ ನೀಡುವಂತೆ ರಾವ್ ಪರ ವಕೀಲರು ಮಾಡಿದ ಮನವಿಯನ್ನೂ ತಿರಸ್ಕರಿಸಿದರು.
ಐಪಿಸಿ ಸೆಕ್ಷನ್ 409 ರ ಅಡಿಯಲ್ಲಿ ಕ್ರಿಮಿನಲ್ ವಿಶ್ವಾಸದ್ರೋಹ ಹಾಗೂ ಭ್ರಷ್ಟಾಚಾರ ತಡೆ ಕಾಯಿದೆಯಡಿಯ ಅಪರಾಧಗಳಿಗಾಗಿ ರಾವ್ ವಿರುದ್ಧ ಪ್ರಕರಣ ದಾಖಲಾಗಿದೆ.
ರೇಸ್ ಆಯೋಜನೆಗಾಗಿ 2023ರಲ್ಲಿ ಆಗಿನ ಬಿಆರ್‌ಎಸ್ ಸರ್ಕಾರ ಅಕ್ರಮವಾಗಿ ಹಣ ವರ್ಗಾಯಿಸಿದ್ದ ಪ್ರಕರಣ ಇದಾಗಿದೆ. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರೇಸ್ ಆಯೋಜನೆಯನ್ನು ರದ್ದುಗೊಳಿಸಿತ್ತು.
ರೇಸ್ ನಿರ್ವಹಣೆಯಲ್ಲಿ ಹಣಕಾಸು ಅಕ್ರಮವಾಗಿದೆ ಎಂದು ಕಾಂಗ್ರೆಸ್ ಡಿಸೆಂಬರ್ 18ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿತ್ತು. ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರಾವ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದತಿಗಾಗಿ ರಾವ್ ಅವರು ತುರ್ತು ಮನವಿ ಸಲ್ಲಿಸಿದ್ದರು.
ರಾವ್ ಪರ ಹಿರಿಯ ವಕೀಲ ಸಿ ಆರ್ಯಮ ಸುಂದರಂ, ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಸುದರ್ಶನ್ ರೆಡ್ಡಿ ವಾದ ಮಂಡಿಸಿದರು.