ಆಳಂದ ದರ್ಗಾದಲ್ಲಿ ಶಿವರಾತ್ರಿ ಪೂಜೆ ನಿರ್ಬಂಧ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಶಿವರಾತ್ರಿ ಪೂಜೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಂದ ಮಧ್ಯಂತರ ಆದೇಶ ಪಡೆದು ದರ್ಗಾದ ಧಾರ್ಮಿಕ ಸ್ವರೂಪ ಬದಲಿಸಲು ಹಿಂದೂ ಪಕ್ಷಕಾರರು ವರ್ಷದಿಂದ ವರ್ಷಕ್ಕೆ ತಂತ್ರ ಹೂಡುತ್ತಿದ್ದಾರೆ ಎಂದು ಅರ್ಜಿ ದೂರಿತ್ತು.
Supreme Court of India
Supreme Court of India
Published on

ಕಲಬುರ್ಗಿ ಜಿಲ್ಲೆಯ ಆಳಂದಲ್ಲಿರುವ ಲಾಡ್ಲೆ ಮಶಾಖ್‌ ದರ್ಗಾದ ಆವರಣದಲ್ಲಿ ಮಹಾ ಶಿವರಾತ್ರಿ ಪೂಜೆ ತಡೆಯಬೇಕು ಮತ್ತು ಸ್ಥಳದ ಪ್ರಸ್ತುತ ಧಾರ್ಮಿಕ ಸ್ವರೂಪ ಬದಲಿಸುವ ಯಾವುದೇ ಕಾಮಗಾರಿ ಇಲ್ಲವೇ ಬದಲಾವಣೆ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ.

ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶ ಒದಗಿಸುವ ಸಂವಿಧಾನದ ವಿಧಿ 32ರ ಅಡಿಯಲ್ಲಿ ದರ್ಗಾ ನಿರ್ವಹಣಾ ಮಂಡಳಿ ಅರ್ಜಿ ಸಲ್ಲಿಸಿತ್ತು.

ಶಿವರಾತ್ರಿ ಪೂಜೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಂದ ಮಧ್ಯಂತರ ಆದೇಶ ಪಡೆದು ದರ್ಗಾದ ಧಾರ್ಮಿಕ ಸ್ವರೂಪ ಬದಲಿಸಲು ಹಿಂದೂ ಪಕ್ಷಕಾರರು ವರ್ಷದಿಂದ ವರ್ಷಕ್ಕೆ ತಂತ್ರ ಹೂಡುತ್ತಿದ್ದಾರೆ ಎಂದು ಅರ್ಜಿ ದೂರಿತ್ತು. ಇಂತಹ ಚಟುವಟಿಕೆಗಳ ಮೂಲಕ ಸ್ಥಳದ ಧಾರ್ಮಿಕ ಸ್ವರೂಪ ಬದಲಾಗದಂತೆ ತಡೆಯಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿತ್ತು.

ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನದ ವಿಧಿ 32ರ ಅಡಿ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಸ್‌ ಸಿ ಶರ್ಮಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಕಡೆಗೆ ಅರ್ಜಿ ಹಿಂಪಡೆಯಲಾಯಿತು.

ಗಮನಾರ್ಹ ಅಂಶವೆಂದರೆ ಬುಧವಾರ ವಿಚಾರಣೆ ನಡೆದಾಗಲೂ, ಇಂತಹ ಪ್ರಕರಣಗಳನ್ನು ಸಂಬಂಧಿತ ಹೈಕೋರ್ಟ್‌ಗಳನ್ನು ಸಂಪರ್ಕಿಸದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ತರುತ್ತಿರುವ ಬಗ್ಗೆ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಬೇಸರ ವ್ಯಕ್ತಪಡಿಸಿತ್ತು.

Also Read
ಆಳಂದ ದರ್ಗಾದಲ್ಲಿ ಶಿವರಾತ್ರಿ ಪೂಜೆ ನಿರ್ಬಂಧ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ವಿವಾದದ ಕೇಂದ್ರದಲ್ಲಿರುವ ಈ ಪವಿತ್ರ ಸ್ಥಳವು 14ನೇ ಶತಮಾನದ ಸೂಫಿ ಸಂತ ಹಜರತ್ ಶೈಖ್ ಅಲಾವುದ್ದೀನ್ ಅಂಸಾರಿ (ಲಡ್ಲೆ ಮಶಾಯಿಕ್ ಎಂದು ಪರಿಚಿತ) ಹಾಗೂ 15ನೇ ಶತಮಾನದ ಹಿಂದೂ ಸಂತ ರಾಘವ ಚೈತನ್ಯರೊಂದಿಗೆ ಸಂಬಂಧ ಹೊಂದಿದೆ. ಇವರಿಬ್ಬರ ಸಮಾಧಿಗಳೂ ಇದೇ ಸ್ಥಳದಲ್ಲಿವೆ. ಆವರಣದಲ್ಲಿ “ರಾಘವ ಚೈತನ್ಯ ಶಿವಲಿಂಗ” ಎಂದು ಕರೆಯಲಾಗುವ ನಿರ್ಮಿತಿಯೂ ಇದೆ.

ಸ್ಥಳದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು. ಆದರೆ 2022ರಲ್ಲಿ ಶಿವಲಿಂಗದ ಮೇಲೆ ಕೆಲ ದುಷ್ಕರ್ಮಿಗಳು ಮಲ ತೂರಿದ ಘಟನೆ ಬಳಿಕ ಪೂಜಾ ಹಕ್ಕುಗಳ ವಿಷಯವಾಗಿ ಸಮುದಾಯಗಳ ಮಧ್ಯೆ ಉದ್ವಿಗ್ನತೆ ಉಂಟಾಯಿತು.

2025ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ಹಿಂದೂ ಸಮುದಾಯದ 15 ಮಂದಿಗೆ ರಾಘವ ಚೈತನ್ಯ ಶಿವಲಿಂಗದ ಬಳಿ ಶಿವರಾತ್ರಿ ಪೂಜೆ ನಡೆಸಲು ಅನುಮತಿ ನೀಡಿತ್ತು. ಅದೇ ಸಂದರ್ಭದಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್‌ನಡಿ ಪೂಜೆ ನೆರವೇರಿಸಲಾಯಿತು.

ಅದರ ಹಿಂದಿನ ವರ್ಷ ಕೂಡ ನ್ಯಾಯಾಲಯದ ಆದೇಶದ ಮೇರೆಗೆ 15 ಹಿಂದೂಗಳಿಗೆ ದರ್ಗಾ ಆವರಣ ಪ್ರವೇಶಿಸಿ ಶಿವರಾತ್ರಿ ಆಚರಣೆ ಮಾಡಲು ಅನುಮತಿ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂಜೆ ನಡೆದಿರುವುದು ವರದಿಯಾಗಿತ್ತು.

ಪ್ರಸ್ತುತ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್‌ ಮನವಿ ನ್ಯಾಯಾಲಯಗಳಿಂದ ಮಧ್ಯಂತರ ಆದೇಶಗಳನ್ನು ಪಡೆಯುವ ಮೂಲಕ ಧಾರ್ಮಿಕ ಸ್ಥಳದ ಸ್ವರೂಪ ಬದಲಾಯಿಸುವ ಸಂಘಟಿತ ಮಾದರಿ ಇದೆ ಎಂದಿತ್ತು.

1991ರ ಧಾರ್ಮಿಕ ಸ್ಥಳಗಳ ಕಾಯಿದೆಯಲ್ಲಿ ನಿರ್ಬಂಧಿತವಾಗಿರುವ ವಿಷಯಗಳನ್ನು ಹಬ್ಬದ ಸಂದರ್ಭಗಳಲ್ಲಿ ಪೊಲೀಸ್ ಸಹಾಯದಿಂದ ಪ್ರವೇಶ ಪಡೆದು ಸಾಧಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

Also Read
ತಿರುಪರನ್‌ಕುಂಡ್ರಂ ದೀಪ ಬೆಳಗುವಿಕೆ ವಿವಾದ: ಮದ್ರಾಸ್‌ ಹೈಕೋರ್ಟ್‌ ಷರತ್ತು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

1968ರಲ್ಲಿ ಆಳಂದ ಪಟ್ಟಣ ಪಂಚಾಯಿತಿ ದರ್ಗಾ ಆವರಣದಲ್ಲಿ ಸಮಾಧಿ/ದೇವಾಲಯ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿ, ಅದು ಮುಸ್ಲಿಂ ಮಜಾರ್ ಮತ್ತು ವಕ್ಫ್ ಆಸ್ತಿ ಎಂದು ದಾಖಲಿಸಿತ್ತು. ನಂತರವೂ ಸಿವಿಲ್‌ ಮೊಕದ್ದಮೆಗಳ ಮೂಲಕ ಧಾರ್ಮಿಕ ಸ್ವರೂಪ ಪ್ರಶ್ನಿಸಲು ನಡೆದ ಯತ್ನಗಳು ವಿಫಲವಾಗಿವೆ. ವ್ಯಾಜ್ಯಗಳು ವಿಫಲವಾದ ಬಳಿಕ 2022ರಲ್ಲಿ “ಆಳಂದ್‌ ಚಲೋ” ಪಾದಯಾತ್ರೆ ಘೋಷಿಸಲಾಯಿತಾದರೂ, ವಕ್ಫ್ ನ್ಯಾಯಮಂಡಳಿ ಅದನ್ನು ತಡೆದಿತ್ತು ಎಂದು ಅರ್ಜಿ ವಿವರಿಸಿತ್ತು.

ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ ಬೇರೆ ಬೇರೆ  ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಿ ತಾತ್ಕಾಲಿಕ ಪ್ರವೇಶವನ್ನು ಸ್ಥಿರ ಧಾರ್ಮಿಕ ಆಚರಣೆ ಎಂದು ಸ್ಥಾಪಿಸಲು ಮತ್ತು ನಂತರ ಸ್ಥಳದ ಸ್ವರೂಪ  ಬದಲಿಸಲು ಯತ್ನಿಸಲಾಗುತ್ತಿದೆ. ಪ್ರಸಕ್ತ ವರ್ಷವೂ ಸಿದ್ರಾಮಯ್ಯ ಹಿರೇಮಠ ಎಂಬುವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಹೊಸ ರಿಟ್ ಮನವಿ ಕೂಡ ಇದೇ ಕ್ರಮದ ಮುಂದುವರಿಕೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Kannada Bar & Bench
kannada.barandbench.com