
ಪುರಸಭೆಗಳು ಮತ್ತು ಪಂಚಾಯತ್‌ಗಳಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಶೇಕಡಾ 42ಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದ್ದ ತೆಲಂಗಾಣ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ [ತೆಲಂಗಾಣ ಸರ್ಕಾರ ಮತ್ತು ಬುಟ್ಟೆಂಗರಿ ಮಾಧವ ರೆಡ್ಡಿ ನಡುವಣ ಪ್ರಕರಣ].
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ಸರ್ಕಾರ ಹೊರಡಿಸಿದ ಆದೇಶಗಳಿಂದಾಗಿ ಒಟ್ಟು ಮೀಸಲಾತಿ ಶೇಕಡಾ 67ಕ್ಕೆ ಏರಿತ್ತು. ಈ ನಿರ್ಧಾರಕ್ಕೆ ಅಕ್ಟೋಬರ್ 9 ರಂದು, ಹೈಕೋರ್ಟ್ ತಡೆ ನೀಡಿತ್ತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಇಂದು ಹೈಕೋರ್ಟ್‌ನ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದು, ಒಬಿಸಿ ಮೀಸಲಾತಿಯಲ್ಲಿ ಹೆಚ್ಚಳ ಮಾಡದೆ ಸ್ಥಳೀಯ ಚುನಾವಣೆ ನಡೆಸುವಂತೆ ತಿಳಿಸಿತು. ಅಂತೆಯೇ ಹೈಕೋರ್ಟ್ ಪ್ರಕರಣದ ಅರ್ಹತೆ ಮೇಲೆ ನೀಡುವ ತೀರ್ಪು ತನ್ನ ಆದೇಶವನ್ನು ಅವಲಂಬಿಸಬಾರದು ಎಂದು ಅದು ಹೇಳಿತು.
ಮೀಸಲಾತಿ ಸಂಬಂಧ ತೆಲಂಗಾಣ ಸರ್ಕಾರ ಸೆಪ್ಟೆಂಬರ್ 26 ರಂದು ಮೂರು ಸರ್ಕಾರಿ ಆದೇಶ ಹೊರಡಿಸಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವ್ಯಕ್ತಿಗಳಿಗೆ ಶೇಕಡಾ 42 ರಷ್ಟು ಮೀಸಲಾತಿಯನ್ನು ಒದಗಿಸುವಂತೆ ಒಂದು ಸರ್ಕಾರಿ ಆದೇಶ ತಿಳಿಸಿತ್ತು. ತೆಲಂಗಾಣ ಪಂಚಾಯತ್ ರಾಜ್ ಕಾಯಿದೆ 2018ರ ಅಡಿಯಲ್ಲಿ ಮಂಡಲ್ ಪ್ರಜಾ ಪರಿಷತ್ತುಗಳು, ಜಿಲ್ಲಾ ಪ್ರಜಾ ಪರಿಷತ್ತುಗಳು ಮತ್ತು ಗ್ರಾಮ ಪಂಚಾಯತ್‌ಗಳಿಗೆ ನಡೆಯುವ ಚುನಾವಣೆಗಳಲ್ಲಿ ಅಂತಹ ಮೀಸಲಾತಿಗಳನ್ನು ನಿಗದಿಪಡಿಸಲು ಉಳಿದ ಎರಡು ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿತ್ತು. ಈ ಸರ್ಕಾರಿ ಆದೇಶಗಳನ್ನು ಪ್ರಶ್ನಿಸಿ ಅಂತಿಮವಾಗಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಒಬಿಸಿ ಕೋಟಾದಲ್ಲಿನ ಈ ಹೆಚ್ಚಳ ವಿವಿಧ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಶೇ. 50 ಮೀಸಲಾತಿ ಮಿತಿಯನ್ನು ಉಲ್ಲಂಘಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಿ ಎಂ ಮೊಹಿಯುದ್ದೀನ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತ್ತು. ಆದ್ದರಿಂದ, ಪ್ರಸ್ತಾವಿತ ಒಬಿಸಿ ಕೋಟಾ ಹೆಚ್ಚಳ ಜಾರಿಗೆ ತರದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಹೇಳಿ, ಸರ್ಕಾರಿ ಆದೇಶಗಳಿಗೆ ತಡೆ ನೀಡಿತ್ತು. ಈ ಮಧ್ಯಂತರ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ತೆಲಂಗಾಣ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ವಿಚಾರಣೆ ಡಿಸೆಂಬರ್ 3, 2025ರಂದು ನಡೆಯಲಿದೆ.