ದೆಹಲಿಯಿಂದ ಬೀದಿ ನಾಯಿಗಳ ನಿರ್ಮೂಲನೆ ಪ್ರಶ್ನಿಸಿದ್ದ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ತುರ್ತಾಗಿ ಪ್ರಕರಣ ಆಲಿಸುವಂತೆ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರೆದುರು ಪ್ರಸ್ತಾಪಿಸಲಾಯಿತಾದರೂ ನ್ಯಾಯಾಲಯ ನಿರ್ದೇಶನ ನೀಡಲು ನಿರಾಕರಿಸಿತು.
Stray Dog
Stray Dog
Published on

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಇತ್ತೀಚೆಗೆ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ತುರ್ತಾಗಿ ಪ್ರಕರಣ ಆಲಿಸುವಂತೆ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರೆದುರು ಪ್ರಸ್ತಾಪಿಸಲಾಯಿತಾದರೂ ನ್ಯಾಯಾಲಯ ನಿರ್ದೇಶನ ನೀಡಲು ನಿರಾಕರಿಸಿತು.

Also Read
ಬೀದಿ ನಾಯಿ ತೆರವು ವಿವಾದ: ಆದೇಶ ಕಾಯ್ದಿರಿಸಿದ ಸುಪ್ರೀಂ; ಸದ್ಯಕ್ಕಿಲ್ಲ ತಡೆಯಾಜ್ಞೆ

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸಬೇಕು, ಪೀಡಿತ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಎಂಟು ವಾರಗಳಲ್ಲಿ ಶ್ವಾನಗಳಿಗೆ ಆಶ್ರಯ ನೀಡುವಂತಹ ಕನಿಷ್ಠ 5,000 ನಾಯಿಗಳನ್ನು ಇರಿಸುವಂತಹ ಆಶ್ರಯ ಕೇಂದ್ರಗಳನ್ನು ಎಂಟು ವಾರಗಳೊಳಗೆ ತೆರೆಯಬೇಕು ಎಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 11ರಂದು ಆದೇಶ ನೀಡಿದ ಬಳಿಕ ಈ ವಿಚಾರದ ಕುರಿತು ದೇಶಾದ್ಯಂತ ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ.

ಆದೇಶದಿಂದಾಗಿ ನಾಯಿಗಳನ್ನು ಮತ್ತೆ ಬೀದಿಗಳಿಗೆ ಬಿಡುವಂತಿರಲಿಲ್ಲ, ಜಂತು ಹುಳು ನಿವಾರಣೆ, ಲಸಿಕೀಕರಣ, ಸಂತಾನಹರಣ ಶಸ್ತ್ರಚಿಕಿತ್ಸೆಯಂತಹ ಕ್ರಮಗಳ ಜೊತೆಗೆ ನಾಯಿಗಳ ಆಶ್ರಯ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ ಆಹಾರ ವೈದ್ಯಕೀಯ ಆರೈಕೆ ಒದಗಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು.

ಮುಂದುವರೆದು, ಸೆರೆಹಿಡಿಯಲಾದ ಬೀದಿ ನಾಯಿಗಳ ದೈನಂದಿನ ದಾಖಲೆಗಳನ್ನು ನಿರ್ವಹಿಸಬೇಕು. ಒಂದೇ ಒಂದು ಬೀದಿ ನಾಯಿಯನ್ನೂ ಬಿಡಬಾರದು; ನಾಯಿ ಕಡಿತ ಪ್ರಕರಣಗಳನ್ನು ವರದಿ ಮಾಡಲು ವಾರದೊಳಗೆ ಸಹಾಯವಾಣಿಗೆ ವ್ಯವಸ್ಥೆ ಮಾಡಬೇಕು. ರೇಬಿಸ್‌ ಲಸಿಕೆ ದೊರೆಯುವ ಸ್ಥಳಗಳ ಕುರಿತು ವರದಿ ಪ್ರಕಟಿಸಬೇಕು ಎಂದು ಇದೇ ವೇಳೆ ನ್ಯಾಯಾಲಯ ತಾಕೀತು ಮಾಡಿತ್ತು.

ಯಾವುದೇ ಪ್ರಾಣಿಪ್ರಿಯ ವ್ಯಕ್ತಿ ಅಥವಾ ಸಂಸ್ಥೆ ಈ ಪ್ರಕ್ರಿಯೆಗೆ ಅಡ್ಡಿಪಡಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿತ್ತು.

ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ನಾಯಿ ಕಡಿತದ ಭೀತಿಯು 19(1) (ಡಿ) ಮತ್ತು 21ನೇ ವಿಧಿಗಳ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ.  2024ರಲ್ಲಿ ದೆಹಲಿಯಲ್ಲಿ 25,000ಕ್ಕೂ ಹೆಚ್ಚು ಮತ್ತು 2025ರ ಜನವರಿಯೊಂದರಲ್ಲಿಯೇ 3,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂಬ ವಿಚಾರವನ್ನು  ಗಣನೆಗೆ ತೆಗೆದುಕೊಂಡಿತ್ತು.  

ಬೀದಿ ನಾಯಿಗಳ ತೆರವಿಗೆ ಪ್ರಾಣಿಪ್ರಿಯ ಹೋರಾಟಗಾರರು ಅಡ್ಡಿಪಡಿಸುತ್ತಿದ್ದುದನ್ನು ಖಂಡಿಸಿದ್ದ ಪೀಠ ಇಷ್ಟೆಲ್ಲಾ ಪ್ರಾಣಿ ದಯಾ ಹೋರಾಟಗಾರರಿಗೆ ರೇಬಿಸ್‌ ರೋಗಕ್ಕೆ ಬಲಿಯಾದವರನ್ನು ಮರಳಿ ಕರೆತರಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿತ್ತು. ಆದೇಶ ಪ್ರಾಣಿಪ್ರಿಯರ ಪ್ರತಿಭಟನೆಗೆ ಇಂಬು ನೀಡಿತ್ತು. ನಂತರ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಪೀಠದೆದುರು ಪ್ರಸ್ತಾಪಿಸಲಾಗಿತ್ತು. ವಿವಿಧ ಪೀಠಗಳು ವ್ಯತಿರಿಕ್ತ ತೀರ್ಪು ನೀಡಿರುವುದರಿಂದ ನಿರ್ದೇಶನಗಳು ಗೊಂದಲದಿಂದ ಕೂಡಿವೆ ಎಂದು ವಾದಿಸಲಾಗಿತ್ತು.

Also Read
ಬೀದಿ ನಾಯಿ ಮತ್ತು ಬೀಡಾಡಿ ಪ್ರಾಣಿ ಮುಕ್ತ ನಗರಗಳಿಗಾಗಿ ವಿಶೇಷ ಅಭಿಯಾನ: ರಾಜಸ್ಥಾನ ಹೈಕೋರ್ಟ್ ಆದೇಶ

ಪ್ರಕರಣ ಪರಿಶೀಲಿಸುವುದಾಗಿ ಸಿಜೆಐ ಗವಾಯಿ ತಿಳಿಸಿದ್ದರು. ಪ್ರಕರಣವನ್ನು ಹೊಸದಾಗಿ ತ್ರಿಸದಸ್ಯ ಪೀಠದೆದುರು ಪಟ್ಟಿ ಮಾಡಲು ಆದೇಶಿಸಲಾಗಿತ್ತು.

ತರುವಾಯ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ  ಮತ್ತು  ಎನ್.ವಿ. ಅಂಜಾರಿಯಾ  ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಆಗಸ್ಟ್ 11ರ ಆದೇಶ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತು. ಆದರೂ ಪುರಸಭಾ ಅಧಿಕಾರಿಗಳಿಗೆ ನ್ಯಾಯಾಲಯ ಆಗ ನಾಯಿಗಳನ್ನು ತೆರವುಗೊಳಿಸುವ ವಿಚಾರವಾಗಿ ತಡೆಯಾಜ್ಞೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಂತೆ ಇದೀಗ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

Kannada Bar & Bench
kannada.barandbench.com