ಮತ್ತೆ ಮುನ್ನೆಲೆಗೆ ಬಂದ ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ರಚನೆಯ ಚರ್ಚೆ

ಸಾಂವಿಧಾನಿಕ ಪ್ರಕರಣಗಳನ್ನು ಆಲಿಸುವ ಸಾಂವಿಧಾನಿಕ ಪೀಠವಲ್ಲದೆ ಸುಪ್ರೀಂಕೋರ್ಟ್ನ ನಾಲ್ಕು ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವಂತೆ ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಅವರು ಮಂಡಿಸಿರುವ ಖಾಸಗಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
Supreme Court and P Wilson
Supreme Court and P Wilson
Published on

ಸುಪ್ರೀಂಕೋರ್ಟ್ ವಿಕೇಂದ್ರೀಕರಣಕ್ಕೆ ಕಾಲ ಕೂಡಿಬಂದಿದೆಯೋ ಎಂಬ ಚರ್ಚೆ ಇತ್ತೀಚಿನ ದಿನಗಳಲ್ಲಿ ಜೀವ ತಳೆದಂತೆ ಕಂಡುಬರುತ್ತಿದ್ದು ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವಂತೆ ಕೋರಿ ಖಾಸಗಿ ಮಸೂದೆಯೊಂದು ರಾಜ್ಯಸಭೆಯಲ್ಲಿ ಮಂಡನೆಗೆ ಕಾಯುತ್ತಿದೆ. ಅಲ್ಲದೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ವಕೀಲರ ಪರಿಷತ್ತುಗಳು ದಕ್ಷಿಣ ಭಾರತದಲ್ಲಿ ಪೀಠ ಸ್ಥಾಪನೆಗಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಇತ್ತೀಚೆಗಷ್ಟೇ ಮನವಿ ಮಾಡಿವೆ.

ರಾಜ್ಯಸಭಾ ಸದಸ್ಯ ಮತ್ತು ಹಿರಿಯ ನ್ಯಾಯವಾದಿ ಪಿ ವಿಲ್ಸನ್ ಅವರು ಪ್ರಾದೇಶಿಕ ಸುಪ್ರೀಂ ಕೋರ್ಟ್ ಪೀಠಗಳ ಸ್ಥಾಪನೆ ಪರವಾಗಿ ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದವರು. ರಾಜ್ಯಸಭಾ ಸದಸ್ಯನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಂಡಿಎಂಕೆ ನಾಯಕ ವೈಕೋ ಅವರೊಂದಿಗೆ ಸೇರಿ ಈ ವಿಚಾರದ ಪರವಾಗಿ ಧ್ವನಿ ಎತ್ತಿದ್ದರು.

Also Read
ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಕೆಎಸ್‌ಬಿಸಿ ಒತ್ತಾಯಿಸುತ್ತಿರುವುದೇಕೆ?

ಸಾಂವಿಧಾನಿಕ ಅಡೆತಡೆಗಳಿಂದಾಗಿ ಸುಪ್ರೀಂಕೋರ್ಟ್‌ನ ಪ್ರಾದೇಶಿಕ ನ್ಯಾಯಪೀಠಗಳನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂದೂ ಮತ್ತು ರಾಷ್ಟ್ರೀಯ ಪ್ರಕರಣಗಳನ್ನು ಆಲಿಸಲೆಂದೇ ರಾಷ್ಟ್ರೀಯ ನ್ಯಾಯಾಲಯ ಸ್ಥಾಪನೆ ಸಂಬಂಧ ಸಲ್ಲಿಸಲಾಗಿರುವ ಅರ್ಜಿಯೊಂದು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂದು ಈ ಹಿಂದಿನ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ವಿಲ್ಸನ್‌ ಮತ್ತು ವೈಕೊ ಅವರನ್ನು ಉದ್ದೇಶಿಸಿ ಬರೆದ ಪತ್ರಗಳಲ್ಲಿ ತಿಳಿಸಿದ್ದರು.

ಅಲ್ಲದೆ, ದೆಹಲಿಯ ಆಚೆಗೆ ಸುಪ್ರೀಂಕೋರ್ಟ್‌ನ ಪ್ರತ್ಯೇಕ ಪೀಠ ಸ್ಥಾಪಿಸುವ ಕಲ್ಪನೆ ಸರ್ವೋಚ್ಚ ನ್ಯಾಯಾಲಯಕ್ಕೆ ಅನುಕೂಲಕರವಾಗಿ ಕಂಡುಬರುತ್ತಿಲ್ಲ. ಕಾಲ-ಕಾಲಕ್ಕೆ ಭಾರತದ ಅಟಾರ್ನಿ ಜನರಲ್‌ಗಳು ಕೂಡ ಈ ಬಗ್ಗೆ ಸಮಾಲೋಚನೆ ನಡೆಸಿದ್ದು ಪ್ರಾದೇಶಿಕ ಪೀಠ ಸ್ಥಾಪಿಸುವ ಆಲೋಚನೆಯನ್ನು ಅವರೂ ಕೂಡ ವಿರೋಧಿಸಿದ್ದರು ಎಂಬುದಾಗಿ ಪ್ರಸಾದ್‌ ವಿವರಿಸಿದ್ದರು.

ಈ ಎಲ್ಲದರ ಹಿನ್ನೆಲೆಯಲ್ಲಿ ವಿಲ್ಸನ್ ಅವರು ಈಗ ಸಂವಿಧಾನ (ತಿದ್ದುಪಡಿ) ಮಸೂದೆ-2020 ಎಂದು ಕರೆಯಲಾಗುವ ಖಾಸಗಿ ಸದಸ್ಯರ ಮಸೂದೆಯ ಮೂಲಕ ತಿದ್ದುಪಡಿಗೆ ಪ್ರಸ್ತಾಪಿಸಿದ್ದಾರೆ. ಜುಲೈ 23ರ ಪರಿಷ್ಕೃತ ವ್ಯವಹಾರದ ಪಟ್ಟಿಯ ಪ್ರಕಾರ, ಮಸೂದೆಯನ್ನು ಕಳೆದ ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿತ್ತು, ಆದರೆ ಅಂದು ಅದನ್ನು ಮಂಡಿಸಲಿಲ್ಲ.

Also Read
ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪನೆ, ನೇಮಕಾತಿ ವೈವಿಧ್ಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಒಲವು

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹೀಗೆ ದೇಶದ ನಾಲ್ಕು ಭಾಗಗಳಲ್ಲಿ ಪ್ರಾದೇಶಿಕ ಪೀಠ ರಚಿಸಬೇಕು, ನವದೆಹಲಿಯಲ್ಲಿ ಸಾಂವಿಧಾನಿಕ ಪೀಠ ರಚಿಸಿ ಸಾಂವಿಧಾನಿಕ ಪ್ರಕರಣಗಳನ್ನು ಮಾತ್ರ ಅಲ್ಲಿ ಆಲಿಸಬೇಕು. ಸಾಂವಿಧಾನಿಕ ಪೀಠ ಆಲಿಸುವ ಪ್ರಕರಣಗಳನ್ನು ಹೊರತುಪಡಿಸಿ ಸುಪ್ರೀಂಕೋರ್ಟ್‌ನ ನ್ಯಾಯವ್ಯಾಪ್ತಿಯನ್ನು ಉಳಿದ ಪ್ರಾದೇಶಿಕ ಪೀಠಗಳು ಚಲಾಯಿಸಬೇಕು ಎಂಬುದು ಮಸೂದೆಯಲ್ಲಿರುವ ಪ್ರಮುಖ ಪ್ರಸ್ತಾವನೆಗಳು. ಉತ್ತರ ಪ್ರಾದೇಶಿಕ ಪೀಠವನ್ನು ದೆಹಲಿಯಲ್ಲಿ, ದಕ್ಷಿಣ ಪೀಠವನ್ನು ಚೆನ್ನೈನಲ್ಲಿ ಪೂರ್ವ ಪೀಠವನ್ನು ಕೊಲ್ಕತ್ತಾದಲ್ಲಿ ಪಶ್ಚಿಮ ಪೀಠವನ್ನು ಮುಂಬೈನಲ್ಲಿ ಸ್ಥಾಪಿಸಬೇಕು ಎಂದು ಕೂಡ ಮಸೂದೆ ತಿಳಿಸುತ್ತದೆ.

ದಕ್ಷಿಣ ರಾಜ್ಯಗಳ ವಕೀಲರ ಪರಿಷತ್‌ಗಳ ಮನವಿ

ಈ ವರ್ಷದ ಜನವರಿಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ವಕೀಲರ ಪರಿಷತ್ತುಗಳು ಇದೇ ರೀತಿಯ ಕಳಕಳಿ ವ್ಯಕ್ತಪಡಿಸಿದ್ದವು. ದಕ್ಷಿಣದ ಜನರ ತೊಂದರೆ ಗಮನಿಸಿ ಈ ಬೇಡಿಕೆ ಇಡಲಾಗಿದೆ. ಪ್ರಕರಣಗಳಿಗಾಗಿ ದೆಹಲಿಗೆ ಓಡಾಡಬೇಕಾದ ವೆಚ್ಚ ಭರಿಸಲಾರದೆ ನ್ಯಾಯಾಲಯದ ಕದತಟ್ಟಲು ಜನ ಹಿಂಜರಿಯುತ್ತಿದ್ದಾರೆ ಎಂದು ಅವು ತಿಳಿಸಿದ್ದವು.

ಅಲ್ಲದೆ ಕಳೆದ ಸೋಮವಾರ ದಕ್ಷಿಣ ರಾಜ್ಯ ವಕೀಲರ ಪರಿಷತ್ತುಗಳನ್ನು ಒಳಗೊಂಡ ಉನ್ನತ ಅಧಿಕಾರಿಗಳ ನಿಯೋಗ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ದಕ್ಷಿಣ ಭಾರತದಲ್ಲಿ ಪೀಠ ಸ್ಥಾಪನೆಗೆ ಒತ್ತಾಯಿಸಿದ್ದರು.

Kannada Bar & Bench
kannada.barandbench.com