

ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 814ನೇ ವಾರ್ಷಿಕ ಉರುಸ್ ಸಮಯದಲ್ಲಿ ರಾಜಸ್ಥಾನದ ವಿಶ್ವ ಪ್ರಸಿದ್ಧ ಅಜ್ಮೀರ್ ಷರೀಫ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾದರ ಅರ್ಪಿಸದಂತೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಇದು ನ್ಯಾಯಾಲಯ ನಿರ್ಧರಿಸಬಹುದಾದ ಪ್ರಕರಣವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.
ಚಾದರ ಅರ್ಪಣೆ ಈಗಾಗಲೇ ನಡೆದಿರುವುದರಿಂದ ಅರ್ಜಿ ನಿರರ್ಥಕ ಎಂದು ನ್ಯಾಯಾಲಯ ನುಡಿಯಿತು. "ಇದು ಈಗ ನಿರರ್ಥಕವಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವ ವಿಷಯವಲ್ಲ. ಎತ್ತಿರುವ ಯಾವುದೇ ವಿಚಾರಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವಂತಹವಲ್ಲ. ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ಆದರೆ ತಾನು ಈಗ ನೀಡಿರುವ ಆದೇಶ ಅಜ್ಮೀರ್ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ಮೊಕದ್ದಮೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದರ್ಗಾಕ್ಕೆ ಪ್ರಧಾನಿಗಳು ಚಾದರ್ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ವರ್ಷದ ಆರಂಭದಲ್ಲಿ ಕೂಡ ಅಜ್ಮೀರ್ ನ್ಯಾಯಾಲಯದಲ್ಲಿ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿತ್ತು. ದರ್ಗಾವನ್ನು ಶಿವನ ದೇಗುಲದ ಮೇಲೆ ನಿರ್ಮಿಸಲಾಗಿದ್ದು ಅದನ್ನು ಭಗವಾನ್ ಶ್ರೀ ಸಂಕಟಮೋಚನ್ ಮಹಾದೇವ್ ವಿರಾಜಮಾನ್ ದೇವಸ್ಥಾನ ಎಂದು ಘೋಷಿಸುವಂತೆ ಕೋರಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಅರ್ಜಿ ಸಲ್ಲಿಸಿದ್ದರು.
ವಿವಾದ ನ್ಯಾಯಾಲಯದಲ್ಲಿರುವಾಗ ಕೇಂದ್ರ ಸರ್ಕಾರ ಚಾದರ್ ನೀಡಿರುವುದು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಹಾಳುಗೆಡವುತ್ತದೆ. ಈ ಬೆಳವಣಿಗೆಗಳಿಂದಾಗಿ ಇಡೀ ಪ್ರಕರಣ ನೆಲೆ ಕಳೆದುಕೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಚಾದರ್ ನೀಡಬಾರದು ಎಂದು ಅವರು ಪ್ರತಿಪಾದಿಸಿದ್ದರು.