ಬುಡಕಟ್ಟು ಗ್ರಾಮಗಳಿಗೆ ಕ್ರೈಸ್ತ ಧರ್ಮಪ್ರಚಾರಕರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಪ್ರಲೋಭನೆ ಮತ್ತು ಪ್ರಭಾವದ ಮೂಲಕ ಕ್ರೈಸ್ತ ಪಾದ್ರಿಗಳು ಆದಿವಾಸಿ ಜನರನ್ನು ಮತಾಂತರಗೊಳಿಸಿದ್ದಾರೆ ಎಂದು ಹೇಳಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.
Church
ChurchImage for representative purpose
Published on

ಛತ್ತೀಸ್‌ಗಢದ ಕೆಲವು ಆದಿವಾಸಿ ಗ್ರಾಮಗಳಿಗೆ ಕ್ರೈಸ್ತ ಧರ್ಮಪ್ರಚಾರಕರು ಮತ್ತು ಪಾದ್ರಿಗಳು ಪ್ರವೇಶಿಸುವುದಕ್ಕೆ ವಿಧಿಸಿದ್ದ ನಿರ್ಬಂಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ [ದಿಕ್ಪಾಲ್‌ ತಂಡಿ ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ].

ಪ್ರಲೋಭನೆ ಮತ್ತು ವಂಚನೆಯುಕ್ತ ಪ್ರಭಾವದ ಮೂಲಕ ಮತಾಂತರ ನಡೆದಿದೆ ಎಂಬ ಆರೋಪಗಳ ಕುರಿತು ಹಾಗೂ ಇಂತಹ ಮತಾಂತರಗಳು ಸಾಮಾಜಿಕ ಸೌಹಾರ್ದತೆ ಮತ್ತು ಆದಿವಾಸಿ ಸಂಸ್ಕೃತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿಶಾಲ ಅಭಿಪ್ರಾಯ  ವ್ಯಕ್ತಪಡಿಸಿದ್ದ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಎತ್ತಿಹಿಡಿದಿದೆ.

Also Read
ಬುಡಕಟ್ಟು ಜನರನ್ನು ಮಿಷನರಿಗಳು ಮತಾಂತರಿಸುವುದರಿಂದ ದೇಶದ ಏಕತೆಗೆ ಧಕ್ಕೆ: ಛತ್ತೀಸ್‌ಗಢ ಹೈಕೋರ್ಟ್

“ಭಾರತದ ಸಮಾಜೋ-ರಾಜಕೀಯ ಪರಿಸ್ಥಿತಿಯಲ್ಲಿ ಮತಾಂತರ ದೀರ್ಘಕಾಲದಿಂದಲೂ ಸಂವೇದನಾಶೀಲ ವಿಷಯವಾಗಿದೆ. ವಿವಿಧ ವಿಧದ ಮತಾಂತರಗಳಲ್ಲಿ, ಬಡ ಮತ್ತು ಅಕ್ಷರಜ್ಞಾನವಿಲ್ಲದ ಆದಿವಾಸಿ ಹಾಗೂ ಗ್ರಾಮೀಣ ಜನಸಂಖ್ಯೆಯಲ್ಲಿ ಕ್ರೈಸ್ತ ಮಿಷನರಿಗಳಿಂದ ನಡೆಯುತ್ತಿದೆ ಎನ್ನಲಾದ ಮತಾಂತರ ವಿಶೇಷವಾಗಿ ವಿವಾದಕ್ಕೆ ಕಾರಣವಾಗಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವನ್ನು ಪಾಲಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯ ನೀಡಿದರೂ, ಈ ಸ್ವಾತಂತ್ರ್ಯದ ದುರುಪಯೋಗವನ್ನು ಬಲವಂತ, ಪ್ರಲೋಭನೆ ಅಥವಾ ಮೋಸದ ಮೂಲಕ ನಡೆಸುವುದು ಗಂಭೀರ ಕಳವಳದ ವಿಷಯವಾಗಿದೆ. ಸಾಮೂಹಿಕ ಅಥವಾ ಉದ್ದೇಶಪೂರ್ವಕ ಮತಾಂತರಗಳು ಸಾಮಾಜಿಕ ಸೌಹಾರ್ದತೆಯನ್ನು ಕದಡುವುದರ ಜೊತೆಗೆ ಸ್ಥಳೀಯ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆಗೂ ಸವಾಲು ಹಾಕುತ್ತವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್‌ ಗೊನ್ಸಾಲ್ವೆಸ್‌ ಅವರು ಹೈಕೋರ್ಟ್ ಯಾವುದೇ ಸಾಕ್ಷ್ಯಾಧಾರವಿಲ್ಲದೆ ವ್ಯಾಪಕ ಅವಲೋಕನಗಳನ್ನು ಹೈಕೋರ್ಟ್‌ ಮಾಡಿದೆ ಎಂದು ವಾದಿಸಿದರು. ಅವರು ಪಾದ್ರಿಗಳ ಮೇಲೆ ನಡೆದ ದಾಳಿಗಳು ಹಾಗೂ ಮತಾಂತರಗೊಂಡ ಆದಿವಾಸಿಗಳಿಗೆ ಸಮಾಧಿ ಹಕ್ಕು ನಿರಾಕರಿಸಿರುವ ಘಟನೆಗಳನ್ನು ಉಲ್ಲೇಖಿಸಿದರು.

Also Read
ಎನ್‌ಕೌಂಟರ್‌ ಎಂದು ಬಿಂಬಿಸುವ ಪ್ರಕರಣಗಳ ಹೆಚ್ಚಳ: ಉ. ಪ್ರದೇಶ ಪೊಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಆದರೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೈಕೋರ್ಟ್ ಮುಂದೆ ವಿಚಾರಣೆಯ ವ್ಯಾಪ್ತಿ ಕೇವಲ ಫಲಕಗಳನ್ನು ತೆರವುಗೊಳಿಸುವ ಪ್ರಶ್ನೆಗೆ ಮಾತ್ರ ಸೀಮಿತವಾಗಿತ್ತು ಎಂದು ವಾದಿಸಿದರು.

ಇದನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್ ಮುಂದೆ ಸಲ್ಲಿಸಲಾದ ರಿಟ್ ಅರ್ಜಿ ಮತ್ತು ಕೇಳಿರುವ ಪರಿಹಾರವನ್ನು ಗಮನಿಸಬೇಕು; ಅರ್ಜಿದಾರರಿಗೆ ಸಂಬಂಧಿತ ಗ್ರಾಮಸಭೆಗಳನ್ನು ಸಂಪರ್ಕಿಸಲು ಈಗಾಗಲೇ ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್ ಮುಂದೆ ಹೈಕೋರ್ಟ್ ವಿಚಾರಣೆಯ ಭಾಗವಾಗಿರದ ಹೊಸ ಆರೋಪಗಳನ್ನು ಮಂಡಿಸಲು ಅವಕಾಶ ಇಲ್ಲ. ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪಿಸಲು ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com