

ಸುಪ್ರೀಂ ಕೋರ್ಟ್‌ನಲ್ಲಿ ಸಿಎಲ್‌ಎಟಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಕುರಿತು ಸ್ವತಂತ್ರ ಹಾಗೂ ಕಾಲಮಿತಿಯೊಳಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ [ಲಲಿತ್ ಪ್ರತಾಪ್ ಸಿಂಗ್ ಮತ್ತಿತರರು ಹಾಗೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ನಡುವಣ ಪ್ರಕರಣ].
ಪರೀಕ್ಷೆಗಳು ಮುಗಿದಿರುವುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ ತಡವಾಗಿ ಅರ್ಜಿ ಸಲ್ಲಿಸಿರುವುದೇಕೆ ಎಂದು ಪ್ರಶ್ನಿಸಿತು.
“ಡಿಸೆಂಬರ್ 6ರಂದು ಪ್ರಶ್ನೆಪತ್ರಿಕೆ ಸೋರಿಕೆ ಆಯಿತೆಂದು ನೀವು ಹೇಳುತ್ತಿದ್ದೀರಿ. ಹಾಗಿದ್ದರೆ ಡಿಸೆಂಬರ್ 16ರವರೆಗೆ (ಮನವಿ ಸಲ್ಲಿಸಲು) ಏಕೆ ಸುಮ್ಮನಿದ್ದಿರಿ? ಫಲಿತಾಂಶ ಪ್ರಕಟಿಸುವ ಮೊದಲು ಸಲ್ಲಿಸಿದ್ದರೆ ನಾವು ಮೆಚ್ಚುತ್ತಿದ್ದೆವು,” ಎಂದು ಪೀಠ ತಿಳಿಸಿತು.
ಮನವಿದಾರರ ಪರವಾಗಿ ಹಾಜರಾದ ವಕೀಲೆ ಮಾಳವಿಕಾ ಕಪಿಲಾ, ಅರ್ಜಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲಾಗಿದೆ ಮತ್ತು ಪರೀಕ್ಷೆಯನ್ನು ಮತ್ತೆ ನಡೆಸಲು ನಿರ್ದೇಶನ ಕೋರುತ್ತಿಲ್ಲ ಎಂದು ವಾದಿಸಿದರು. ಆದರೂ ನ್ಯಾಯಾಲಯ ಅರ್ಜಿ ಪರಿಗಣಿಸಲು ಸಮ್ಮತಿಸಲಿಲ್ಲ.
ಾಟ್ಸಾಪ್, ಟೆಲಿಗ್ರಾಂ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು, ಚಿತ್ರಗಳು ಹಾಗೂ ಇತರೆ ಡಿಜಿಟಲ್ ವಸ್ತುವಿಷಯಗಳು, ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಮತ್ತು ಸರಿ ಉತ್ತರಗಳನ್ನು ಅಕ್ರಮವಾಗಿ ಪಡೆದು ಹಂಚಿಕೊಳ್ಳಲಾಗಿದೆ ಎಂಬುದನ್ನು ಹೇಳುತ್ತಿವೆ ಎಂದು ಅರ್ಜಿ ದೂರಿತ್ತು.
ಆರೋಪ ಸತ್ಯವೆಂದು ಕಂಡುಬಂದಲ್ಲಿ, ಸ್ವತಂತ್ರ ಸಮಿತಿಯ ನೇತೃತ್ವದಲ್ಲಿ ಹೊಸದಾಗಿ ಸಿಎಲ್‌ಎಟಿ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಬೇಕೆಂದು ಮನವಿ ಮಾಡಲಾಗಿತ್ತು. ಅನುಸೂಚಿತ ಜಾತಿ, ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಕಾನೂನು ಅಭ್ಯರ್ಥಿಗಳ ಸಮೂಹವೊಂದು ಅರ್ಜಿ ಸಲ್ಲಿಸಿದ್ದು ಸಾವಿರಾರು ನೈಜ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ. ಅವರು ಹಿನ್ನಡೆ ಅನುಭವಿಸಿದ್ದಾರೆ ಎಂದು ಅರ್ಜಿ ಉಲ್ಲೇಖಿಸಿತ್ತು.
ಪರೀಕ್ಷೆಗೆ ಸುಮಾರು 15 ಗಂಟೆಗಳ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನ ಮೂಡಿದೆ. ಸೋರಿಕೆ ತನಿಖೆ ಪರಿಶೀಲಿಸಲು ಸ್ವತಂತ್ರ ಸಮಿತಿ ನೇಮಕ ಮಾಡಬೇಕು ಎಂತಲೂ ಮನವಿ ಮಾಡಲಾಗಿತ್ತು.