ಕೇರಳ ಶಾಸಕ ಆಂಟೊನಿ ರಾಜು ವಿರುದ್ಧದ ದಶಕಗಳ ಹಿಂದಿನ ಕುಪ್ರಸಿದ್ಧ ಒಳ ಉಡುಪು ಸಾಕ್ಷ್ಯ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಮರುಜೀವ ನೀಡಿದೆ [ಆಂಟೋನಿ ರಾಜು ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಹೊಸ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನು ಪ್ರಶ್ನಿಸಿ ಆಂಟೊನಿ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಆಂಟೊನಿ ಅವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆ ಸಲ್ಲಿಸದೆ ಇರುವುದಕ್ಕೆ ಕೇರಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಳೆದ ಮಾರ್ಚ್‌ನಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಜುಲೈ 2023 ರಲ್ಲಿ, ನ್ಯಾಯಾಲಯವು ಅವರ ವಿರುದ್ಧ ಹೂಡಿದ್ದ ಹೊಸ ಪ್ರಕ್ರಿಯೆಗಳಿಗೆ ತಡೆ ನೀಡಿತ್ತು .
ರಾಜು ಅವರು ಕೇರಳದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಒಕ್ಕೂಟದ ಭಾಗವಾಗಿರುವ ಜನಾಧಿಪತ್ಯ ಕೇರಳ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಕಳೆದ ವರ್ಷ ಸಂಪುಟ ಪುನಾರಚನೆಯಾಗುವವರೆಗೂ ಅವರು ಕೇರಳದ ಸಾರಿಗೆ ಸಚಿವರಾಗಿದ್ದರು.
ರಾಜು ವಿರುದ್ಧ ಪ್ರಕರಣ ಸುಮಾರು 33 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದು ಆಗ ಅವರಿನ್ನೂ ರಾಜಕೀಯ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಕೊಳ್ಳದ; ಕೇರಳದ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಯುವ ವಕೀಲರಾಗಿದ್ದರು.
ಆಂಡ್ರ್ಯೂ ಸಾಲ್ವಟೋರ್ ಸೆರ್ವೆಲ್ಲಿ ಎಂಬ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. 61.5 ಗ್ರಾಂನಷ್ಟು ಮಾದಕವಸ್ತು ಹಶೀಶನ್ನು ತನ್ನ ಒಳ ಉಡುಪಿನಲ್ಲಿ ಇರಿಸಿಕೊಂಡಿದ್ದ ಎಂಬ ಆರೋಪ ಆತನ ಮೇಲಿತ್ತು. ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ- 1985ರ ಅಡಿ ಆತ ತಪ್ಪಿತಸ್ಥ ಎಂಬುದು ಸಾಬೀತಾಗಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಶಿಕ್ಷೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸೆರ್ವೆಲ್ಲಿ ತನ್ನ ದೇಹದ ಗಾತ್ರಕ್ಕಿಂತಲೂ ತಾನು ಮಾದಕವಸ್ತು ಬಚ್ಚಿಟ್ಟುಕೊಂಡಿದ್ದೆನೆನ್ನಲಾದ ಒಳ ಉಡುಪು ಚಿಕ್ಕದು ಎಂದು ಪ್ರತಿಪಾದಿಸಿದ. ಆಗ ಆತನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಶಾಸಕ ಆಂಟೊನಿ ರಾಜು. ಈ ಪ್ರಕರಣದಲ್ಲಿ ಅಂತಿಮವಾಗಿ ಸರ್ವೆಲ್ಲಿ ಧರಿಸಿದ್ದ ಎನ್ನಲಾದ ಒಳಉಡುಪು ಆತನ ದೇಹಕ್ಕಿಂತ ಚಿಕ್ಕದಾಗಿರುವ ಕಾರಣದಿಂದಾಗಿ ಅಸಮರ್ಪಕ ಸಾಕ್ಷ್ಯದಿಂದಾಗಿ ಹೈಕೋರ್ಟ್ ಸೆರ್ವೆಲ್ಲಿಯನ್ನು ದೋಷಮುಕ್ತ ಗೊಳಿಸಿತ್ತು.
ಇನ್ನು ನೆಮ್ಮದಿಯ ಜೀವನ ನಡೆಸಬಹುದು ಎಂದು ಲೆಕ್ಕಹಾಕಿ ಸೆರ್ವೆಲ್ಲಿ ಆಸ್ಟ್ರೇಲಿಯಾಕ್ಕೆ ಹೋದ. ಆದರೆ ಆ ನೆಮ್ಮದಿ ಬಹುಕಾಲ ಉಳಿಯಲಿಲ್ಲ.
ಆದರೆ, ಮುಂದೆ ಸೆರ್ವೆಲ್ಲಿ ಆಸ್ಟ್ರೇಲಿಯಾದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ. ಆತನನ್ನು ವಿಕ್ಟೋರಿಯಾದಲ್ಲಿ ಸೆರೆ ಹಿಡಿಯಲಾಯಿತು. ಜೈಲು ಸೇರಿದ ಅವನ ಬಾಯಿ ಸುಮ್ಮನಿರಲಿಲ್ಲ. ತಾನು ಭಾರತದ ಪ್ರಕರಣವೊಂದರಲ್ಲಿ ಪಾರಾಗಿ ಬಂದ ಕತೆಯನ್ನು ಕೈದಿಗಳಿಗೆ ಬಣ್ಣಿಸತೊಡಗಿದ. ಅದರಲ್ಲೂ ಭಾರತದ ಪೊಲೀಸರು ಮತ್ತು ನ್ಯಾಯಾಲಯಗಳಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದೆ ಎಂಬುದನ್ನು ಕೊಚ್ಚಿಕೊಳ್ಳತೊಡಗಿದ.
ತಕ್ಷಣವೇ ಎಚ್ಚೆತ್ತುಕೊಂಡ ಆಸ್ಟ್ರೇಲಿಯಾದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಸಿಬಿ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಕೊಲೆ ಪ್ರಕರಣದಲ್ಲಿ ಸರ್ವೆಲ್ಲಿಯ ಸಹ ಆರೋಪಿಯ ವಿಚಾರಣೆ ನಡೆಸಿದಾಗ ಸರ್ವೆಲ್ಲಿಯ ಕುಟುಂಬ ಮತ್ತು ವಕೀಲರು ನ್ಯಾಯಾಲಯದ ಅಧಿಕಾರಿಯೊಬ್ಬರಿಗೆ ಲಂಚ ನೀಡಿದ್ದ ವಿಚಾರ ಬಯಲಾಯಿತು. ಹಾಗೆ ಲಂಚ ಪಡೆದ ಅಧಿಕಾರಿ ಒಳ ಉಡುಪನ್ನು ಬದಲಿಸಿದ್ದ ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ 12 ವರ್ಷಗಳ ನಂತರ, ಆಂಟೊನಿ ರಾಜು ಹಾಗೂ ಕೋರ್ಟ್ ಗುಮಾಸ್ತರೊಬ್ಬರ ವಿರುದ್ಧ 2006 ರಲ್ಲಿ, ಸಹಾಯಕ ಪೊಲೀಸ್ ಆಯುಕ್ತರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಆದರೆ, ಹೈಕೋರ್ಟ್ ಕಳೆದ ವರ್ಷ ಮಾರ್ಚ್‌ನಲ್ಲಿ ತಾಂತ್ರಿಕ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸಿತ್ತು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 195 (1) (ಬಿ) ನಿಬಂಧನೆಗಳ ಪ್ರಕಾರ (ಕ್ರಿಮಿನಲ್ ಸಂಚು ರೂಪಿಸುವುದು) ಕಾನೂನು ಕ್ರಮ ಮುಂದುವರಿಸಲು ತನ್ನ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಹೈಕೋರ್ಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ರಿಜಿಸ್ಟ್ರಿಯೇ ಖುದ್ದು ವಿಚಾರಣೆ ಪ್ರಾರಂಭಿಸಲು ಆದೇಶಿಸಿತು. ತಿರುವನಂತಪುರಂನಲ್ಲಿರುವ ವಿಚಾರಣಾ ನ್ಯಾಯಾಲಯ ರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಜೀವ ನೀಡಲು ಇದು ದಾರಿ ಮಾಡಿಕೊಟ್ಟಿತು.
ವಿಚಾರಣೆ ಆರಂಭವಾದ ಹಿನ್ನೆಲೆಯಲ್ಲಿ ರಾಜು ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು ಸರ್ವೋಚ್ಚ ನ್ಯಾಯಾಲಯ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ಸರ್ವೋಚ್ಚ ನ್ಯಾಯಾಲಯದ ಮುಂದೆ, ಹಿರಿಯ ವಕೀಲ ಆರ್ ಬಸಂತ್ ಅವರು ವಕೀಲರಾದ ಶ್ರೀರಾಮ್ ಪರಕ್ಕತ್, ದೀಪಕ್ ಪ್ರಕಾಶ್, ವಿಶಾಲ್ ಸೋಮಾನಿ, ಪವನ್ ಕೆಆರ್ ದಾಬಸ್, ಕಮಲ್ ಸಿಂಗ್ ಬಿಷ್ತ್, ರನೀವ್ ದಹಿಯಾ, ರವೀಂದ್ರ ಸಿಂಗ್, ನಚಿಕೇತ ವಾಜಪೇಯಿ, ದಿವ್ಯಾಂಗ ಮಲಿಕ್, ವಿಷ್ಣು ಪ್ರಿಯಾ, ಜೆ ಮೆರ್ಲಿನ್ ರಾಚೆಲ್, ವರ್ದನ್ ಕಪೂರ್, ರಾಹುಲ್ ಲಖೇರಾ, ರಾಹುಲ್ ಸುರೇಶ್, ಮಾನ್ಶಿ ಸಿನ್ಹಾ ಮತ್ತು ಪ್ರಿಯಂವದಾ ಸಿಂಗ್ ಸೋಲಂಕಿ ರಾಜು ಪರ ಹಾಜರಾದರು.
ಆಂಟೊನಿ ರಾಜು ಪರವಾಗಿ ಹಿರಿಯ ವಕೀಲ ಆರ್ ಬಸಂತ್ ಮತ್ತವರ ತಂಡ, ಕೇರಳ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಪಿ ವಿ ದಿನೇಶ್ ಹಾಗೂ ತಂಡ, ದೂರುದಾರರಾದ ಟಿ.ಜಿ.ಗೋಪಾಲಕೃಷ್ಣನ್ ನಾಯರ್ ಪರವಾಗಿ ವಕೀಲ ಎಚ್ ಅಮಿತ್ ಕೃಷ್ಣನ್ ವಾದ ಮಂಡಿಸಿದ್ದರು.