

ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಸಂಬಂಧ ಶಾಸನಬದ್ಧ ನಿಯಮ ರೂಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಕುರಿತಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಸಮೀಕ್ಷಾ ಫೌಂಡೇಶನ್-ಎ ಕ್ರುಸೇಡ್ ಎಗೇನ್ಸ್ಟ್ ಮೆಡಿಕಲ್ ನೆಗ್ಲಿಜೆನ್ಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುvin ಪ್ರಕರಣ].
ಜಾಕೋಬ್ ಮ್ಯಾಥ್ಯೂ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ 2005ರಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಿತ್ತು. ಇದಾಗಿ ಎರಡು ದಶಕಗಳೇ ಉರುಳಿದರೂ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅಗತ್ಯ ನಿಯಮ ರೂಪಿಸಿಲ್ಲ ಎಂದು ದೂರಿ ಸಮೀಕ್ಷಾ ಪ್ರತಿಷ್ಠಾನ ಸಲ್ಲಿಸಿರುವ ಅರ್ಜಿ ಸಂಬಂಧ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾಅವರಿದ್ದ ಪೀಠ ನೋಟಿಸ್ ನೀಡಿತು.
ಸ್ವತಂತ್ರ ವೈದ್ಯಕೀಯ ಅಭಿಪ್ರಾಯವಿಲ್ಲದೆ ವೈದ್ಯರನ್ನು ವಿಚಾರಣೆಗೆ ಒಳಪಡಿಸಬಾರದು ಮತ್ತು ಬಂಧನಗಳು ನಿಯಮಿತವಾಗಿ ನಡೆಯಬಾರದು ಎಂದು 2005ರಲ್ಲಿ ತೀರ್ಪು ನೀಡಲಾಗಿದ್ದರೂ ಈ ಸಂಬಂಧ ಇನ್ನೂ ಯಾವುದೇ ಮಾರ್ಗಸೂಚಿ ರೂಪುಗೊಂಡಿಲ್ಲ. ಇದು ನ್ಯಾಯಾಂಗ ನೀಡಿದ್ದ ನಿರ್ದೇಶನಗಳಿಗೆ ತೋರಿದ ಆತಂಕಕಾರಿ ಉದಾಸೀನತೆಯಾಗಿದೆ. ಇದರಿಂದ ಸೃಷ್ಟಿಯಾಗಿರುವ ನಿರ್ವಾತದಿಂದಾಗಿ ರೋಗಿಗಳು ಎದೆಗುಂದುತ್ತಿದ್ದು ಮತ್ತೊಂದೆಡೆ ವೈದ್ಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಅರ್ಜಿ ಹೇಳಿದೆ.
ವೈದ್ಯಕೀಯ ನಿರ್ಲಕ್ಷ್ಯದ ದೂರುಗಳು ಈಗಾಗಲೇ ವೈದ್ಯರಿಂದ ಮಾತ್ರ ರಚಿತವಾದ ವಿಚಾರಣಾ ಸಮಿತಿಗಳಿಗೆ ಸಲ್ಲಿಕೆಯಾಗುತ್ತಿದ್ದು ವೈದ್ಯರು ಸಹೋದ್ಯೋಗಿಗಳಾದ ವೈದ್ಯರ ವಿರುದ್ಧ ಕಠಿಣ ಅಭಿಪ್ರಾಯ ನೀಡಲು ಹಿಂಜರಿಯಬಹುದಾದ್ದರಿಂದ ಪಕ್ಷಪಾತ ಉಂಟಾಗುವ ಸಾಧ್ಯತೆ ಇದೆ. ದೂರು ಗಂಭೀರವಾಗಿದ್ದರೂ ಕ್ರಿಮಿನಲ್ ಪ್ರಕರಣ ದಾಖಲಾಗುವುದು ಕಡಿಮೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ವೈದ್ಯರೇ ವೈದ್ಯರ ಕುರಿತು ನಿರ್ಧಾರ ಬರುವ ವ್ಯವಸ್ಥೆ ಅಸಮರ್ಪಕವಾಗಿದ್ದು ಸಂತ್ರಸ್ತರ ಕುಟುಂಬಗಳಿಗೆ ನೆರವು ದೊರೆಯುವುದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯು 2013ರಷ್ಟು ಹಿಂದೆಯೇ ಈ ಕುರಿತು ಸಂದೇಹ ವ್ಯಕ್ತಪಡಿಸಿದ್ದರೂ ಸಂಸತ್ತಿನಲ್ಲಿ ಈ ಬಗ್ಗೆ ಅನೇಕ ಬಾರಿ ಪ್ರಶ್ನೆಗಳನ್ನು ಕೇಳಲಾಗಿದ್ದರೂ ಕ್ರಿಮಿನಲ್ ನಿರ್ಲಕ್ಷ್ಯ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಮಹತ್ವದ ಸುಧಾರಣೆ ಕಂಡುಬಂದಿಲ್ಲ ಎಂದು ಅರ್ಜಿ ಬೆರಳು ಮಾಡಿದೆ.
ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಏಪ್ರಿಲ್ 2024ರಲ್ಲಿ ಪ್ರಕಟಿಸಿದ ವರದಿಯೊಂದು ಭಾರತದಲ್ಲಿ ಪ್ರತಿವರ್ಷ 5.2 ದಶಲಕ್ಷ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು ಕಂಡುಬರುತ್ತವೆ ಎಂದು ಹೇಳಿದರೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2017 ಮತ್ತು 2022 ರ ನಡುವೆ ವೈದ್ಯಕೀಯ ನಿರ್ಲಕ್ಷ್ಯದಿಂದ ಕೇವಲ 1,019 ಸಾವಿನ ಪ್ರಕರಣಗಳು ಸಂಭವಿಸಿವೆ ಎನ್ನುತ್ತದೆ ಎಂದು ಮನವಿ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಶಾದನ್ ಫರಾಸತ್ ಮತ್ತು ವಕೀಲ ದೇವಾಂಶ್ ಶ್ರೀವಾಸ್ತವ ವಾದ ಮಂಡಿಸಿದರು.