ತಮಿಳು ನಾಡು ಸರ್ಕಾರವು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮಹಿಳೆ ಎಂದು ಗುರುತಿಸಿದ್ದ ಮಹಿಳೆಯೊಬ್ಬರು ಪರಿಶಿಷ್ಟ ಜಾತಿಯ ಉದ್ಯೋಗ ಮೀಸಲಾತಿ ಪಡೆಯುವುದಕ್ಕಾಗಿ ತಾನು ಹಿಂದೂ ಧರ್ಮೀಯಳು ಎಂದು ಹೇಳಿಕೊಂಡಿದ್ದನ್ನು ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿದೆ [ಸಿ ಸೆಲ್ವರಾಣಿ ಮತ್ತು ವಿಶೇಷ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಇನ್ನಿತರರ ನಡುವಣ ಪ್ರಕರಣ].
ಮೀಸಲಾತಿ ಸೌಲಭ್ಯ ಪಡೆಯುವುದಕ್ಕಾಗಿ ಮತಾಂತರ ಇಲ್ಲವೇ ಮರುಮತಾಂತರವಾಗುವುದಾದರೆ ಅದು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಿಗಬೇಕೆಂಬ ಆಶಯವನ್ನು ಮಣಿಸುವುದರಿಂದ ಅದಕ್ಕೆ ಅನುಮತಿ ನೀಡಲಾಗದು. ಹೀಗೆ ಮಾಡುವುದು ಸಂವಿಧಾನಕ್ಕೆ ಮಾಡುವ ವಂಚನೆಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಆರ್ ಮಹದೇವನ್ ಅವರನ್ನೊಳಗೊಂಡ ಪೀಠ ಹೇಳಿದೆ.
ತಾನು ಹಿಂದೂ ಧರ್ಮದ ವಳ್ಳುವನ್ ಜಾತಿಗೆ ಸೇರಿದ್ದೇನೆ ಎಂಬುದಾಗಿ ಸೆಲ್ವರಾಣಿ ಎಂಬುವವರು ಹೇಳಿಕೊಂಡಿದ್ದರು. ಈ ಆಧಾರದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಡಿ ತನಗೆ ಗುಮಾಸ್ತ ಹುದ್ದೆ ನೀಡಬೇಕೆಂದು ಕೋರಿದ್ದರು. ಆದರೆ ಸರ್ಕಾರ ಆಕೆಯ ಮನವಿಯನ್ನು ತಿರಸ್ಕರಿಸಿತ್ತು. ಪ್ರಕರಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅಂತಿಮವಾಗಿ ಕೆಲಸಕ್ಕೆ ಆಯ್ಕೆಯಾದ ಸಹ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು. ಇದನ್ನು ಪ್ರಶ್ನಿಸಿ ಸೆಲ್ವರಾಣಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಮೇಲಿನ ಅವಲೋಕನ ಮಾಡಿದೆ.
ಸೆಲ್ವರಾಣಿ ಪೋಷಕರು ಭಾರತೀಯ ಕ್ರೈಸ್ತ ವಿವಾಹ ಕಾಯಿದೆ ಪ್ರಕಾರ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಕ್ಷೇತ್ರ ಪರಿಶೀಲನೆ ಬಹಿರಂಗಪಡಿಸಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿತು. ಅಲ್ಲದೆ ಸೆಲ್ವರಾಣಿ ಅವರ ಕ್ರೈಸ್ತ ಧರ್ಮೀಯತೆ ಮತ್ತು ನ್ಯಾಯಾಲಯದ ಹಾಜರಾತಿ ಕೂಡ ಆಕೆ ಕ್ರೈಸ್ತ ಧರ್ಮೀಯಳಾಗಿ ಜನಿಸಿದ್ದರು ಎಂಬುದನ್ನು ಹೇಳುತ್ತದೆ. ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.
ಪ್ರಸ್ತುತ ಪ್ರಕರಣದಲ್ಲಿ ಮೇಲ್ಮನವಿದಾರೆ ಕ್ರೈಸ್ತ ಧರ್ಮದಲ್ಲಿ ಜನಿಸಿದ್ದು ಯಾವುದೇ ಜಾತಿಯೊಂದಿಗೆ ನಂಟು ಇರುವುದಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ, ಒಬ್ಬರು ತಮ್ಮ ಜಾತಿ ಕಳೆದುಕೊಳ್ಳುತ್ತಾರೆ ಅವರನ್ನು ಆ ಜಾತಿಯಿಂದ ಗುರುತಿಸುವುದಿಲ್ಲ. ಮರುಮತಾಂತದ ವಿಚಾರ ವಿವಾದಾಸ್ಪದವಾಗಿರುವುದರಿಂದ ಕೇವಲ ಸಮರ್ಥನೆಗಿಂತ ಮಿಗಿಲಾದದ್ದು ಏನಾದರೂ ಇರಬೇಕು. ಮತಾಂತರ ಎಂಬುದು ಆರ್ಯ ಸಮಾಜ ರೀತ್ಯಾ ಇಲ್ಲವೇ ಬೇರೆ ವಿಧಿವಿಧಾನದ ಮೂಲಕ ನಡೆದಿಲ್ಲ. ಆಕೆ ಅಥವಾ ಆಕೆಯ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರವಾಗಿದೆ ಎನ್ನಲು ಯಾವುದೇ ದಾಖಲೆಗಳಿಲ್ಲ. ಬದಲಿಗೆ ಮೇಲ್ಮನವಿದಾರೆ ಈಗಲೂ ಕ್ರೈಸ್ತ ಧರ್ಮ ಪಾಲಿಸುತ್ತಿದ್ದಾರೆ ಎಂಬುದು ವಾಸ್ತವಿಕ ಶೋಧನೆಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ತನ್ನ ಆಯ್ಕೆಯ ಧರ್ಮವನ್ನು ಆಚರಿಸುವ ಹಕ್ಕು ಹೊಂದಿದ್ದಾನೆ. ಆದರೂ ಧರ್ಮ ಕುರಿತಂತೆ ದ್ವಂದ್ವಮಯ ವಾದಗಳು ಸಮರ್ಥನೀಯವಲ್ಲ. ಕ್ರೈಸ್ತ ಧರ್ಮ ಪಾಲಿಸುತ್ತಿರುವ ಮೇಲ್ಮನವಿದಾರೆ ತಾನು ಹಿಂದೂ ಎಂದು ಹೇಳಿಕೊಳ್ಳಲಾಗದು ಎಂದ ಪೀಠ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಪಡೆಯಲು ಸೆಲ್ವರಾಣಿ ತಾನು ಹಿಂದೂ ಎಂದು ಪ್ರತಿಪಾದಿಸುತ್ತಿರುವುದನ್ನು ಖಂಡಿಸಿತು. ಅಂತೆಯೇ ಆಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತು.