ಕೇಂದ್ರ ಕಾನೂನುಗಳ ವಿರುದ್ಧ ನಿರ್ಣಯ ಅಂಗೀಕಾರ: ರಾಜ್ಯಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲವೇ ಎಂದ ಸುಪ್ರೀಂ

ಸಿಎಎ ಮತ್ತು ಕೃಷಿ ಕಾಯಿದೆಯಂತಹ ಕೇಂದ್ರದ ಕಾನೂನುಗಳ ವಿರುದ್ಧ ಕೇರಳ, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳ ವಿಧಾನಸಭೆಗಳು ನಿರ್ಣಯ ಅಂಗೀಕರಿಸುವ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಕೇಂದ್ರ ಕಾನೂನುಗಳ ವಿರುದ್ಧ ನಿರ್ಣಯ ಅಂಗೀಕಾರ: ರಾಜ್ಯಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲವೇ ಎಂದ ಸುಪ್ರೀಂ
Published on

ಸಂಸತ್ತಿನ ಕಾಯಿದೆ ವಿರುದ್ಧ ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ನಿರ್ಣಯಗಳು ಕಾನೂನಿನ ಬಲ ಇಲ್ಲದ ʼಕೇವಲ ವಿಧಾನಸಭೆ ಸದಸ್ಯರ ಅಭಿಪ್ರಾಯವಾಗಿವೆ” ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಿಳಿಸಿದೆ. (ಸಮತಾ ಆಂಡೋಲನ್ ಸಮಿತಿಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ “ಇಂತಹ ನಿರ್ಣಯಗಳು ಕಾನೂನಿಗೆ ಅವಿಧೇಯ ತೋರುವಂತೆ ಸಾರ್ವಜನಿಕರನ್ನು ಪ್ರಚೋದಿಸುವುದಿಲ್ಲ, ಬದಲಿಗೆ ಕಾನೂನನ್ನು ಮರುಪರಿಶೀಲಿಸುವಂತೆ ಸಂಸತ್ತನ್ನು ಕೋರುತ್ತವೆ” ಎಂದಿತು.

“ಇದು ವಿಧಾನಸಭೆಯ ಸದಸ್ಯರ ಅಭಿಪ್ರಾಯ. ಜಾರಿ ಮಾಡಿದ ಕಾನೂನನ್ನು ರದ್ದುಗೊಳಿಸುವ ಕುರಿತು ತನ್ನ ಅಭಿಪ್ರಾಯವನ್ನು ಪರಿಗಣಿಸಿ ಎಂದು ಅವರು ಸಂಸತ್ತನ್ನು ಕೋರಿದ್ದಾರೆ. ಇದಕ್ಕೆ ಕಾನೂನಿನ ಬಲವಿಲ್ಲ. ಕಾನೂನನ್ನು ಧಿಕ್ಕರಿಸುವಂತೆ ಅವರು ಜನರನ್ನು ಕೇಳುತ್ತಿಲ್ಲ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಧಿಕಾರ ವ್ಯಾಪ್ತಿ ಅವರಿಗಿಲ್ಲವೇ? ಅವರು ಯಾವುದೇ ಕಾನೂನನ್ನು ಉಲ್ಲಂಘಿಸುತ್ತಿಲ್ಲ” ಎಂದು ನ್ಯಾ. ಬೊಬ್ಡೆ ಒತ್ತಿ ಹೇಳಿದರು.

Also Read
ಕೃಷಿ ಕಾಯಿದೆಗಳ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ; ವಿರೋಧಿಸದ ಬಿಜೆಪಿಯ ಏಕೈಕ ಶಾಸಕ

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ಕೃಷಿ ಕಾಯಿದೆಯಂತಹ ಕೇಂದ್ರದ ಕಾನೂನುಗಳ ವಿರುದ್ಧ ಕೇರಳ, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳ ವಿಧಾನಸಭೆಗಳು ನಿರ್ಣಯ ಅಂಗೀಕರಿಸುವ ಅಧಿಕಾರವನ್ನು ಪ್ರಶ್ನಿಸಿ ಸಮತಾ ಆಂದೋಲನ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ರೀತಿಯ ನಿರ್ಣಯ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು.

ಇಂತಹ ನಿರ್ಣಯಗಳಿಗೆ ಏಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ ಎಂದು ವಿಚಾರಣೆಯ ಒಂದು ಹಂತದಲ್ಲಿ ನ್ಯಾ. ಬೊಬ್ಡೆ ಅವರು ಅರ್ಜಿದಾರರ ಪರ ವಕೀಲೆ ಸೌಮ್ಯ ಚಕ್ರವರ್ತಿ ಅವರನ್ನು ಕೇಳಿದರು. ಆಗ ಕೇರಳ ವಿಧಾನಸಭೆ ನಿರ್ಣಯವನ್ನು ಉಲ್ಲೇಖಿಸಿದ ಸೌಮ್ಯ ”ಶಾಸಕಾಂಗ ಅಧಿಕಾರ ಇಲ್ಲದ ವಿಷಯಗಳಲ್ಲಿ ಶಾಸನಸಭೆ ಮಧ್ಯಪ್ರವೇಶಿಸುವಂತಿಲ್ಲ” ಎಂದು ಹೇಳಿದರು.

ಆಗ ನ್ಯಾಯಾಲಯ “ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವರಿಗೆ ಅಧಿಕಾರ ವ್ಯಾಪ್ತಿ ಇಲ್ಲವೇ? ಅವರು ಯಾವುದೇ ಕಾನೂನಿಗೆ ಅವಿಧೇಯರಾಗಿಲ್ಲ. ರಾಜ್ಯ ಶಾಸಕಾಂಗವು ‘ವ್ಯಕ್ತಿ’ಅಥವಾ ‘ನಾಗರಿಕʼಎಂಬ ಅರ್ಥದಲ್ಲಿ ಒಬ್ಬ ವ್ಯಕ್ತಿಯೇ? ”ಎಂದು ನ್ಯಾಯಾಲಯ ಪ್ರಶ್ನಿಸಿತು.

Also Read
ಮಾನವ ಹಕ್ಕುಗಳ ಆಯೋಗದ ನಿರ್ಣಯ ತಡೆಯಲು ರಾಜ್ಯ ಸರ್ಕಾರಕ್ಕೆ ವಿವೇಚನಾಧಿಕಾರ ಇಲ್ಲ: ಮದ್ರಾಸ್ ಹೈಕೋರ್ಟ್

ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ ಮುಂದೆ 60 ಅರ್ಜಿಗಳು ಬಾಕಿ ಉಳಿದಿವೆ ಮತ್ತು ಕಾನೂನಿನ ಪ್ರಕಾರ, ನ್ಯಾಯಾಂಗ ತೀರ್ಪಿಗಾಗಿ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಪ್ರಕರಣಗಳ ಬಗ್ಗೆ ನಿರ್ಣಯ ಅಂಗೀಕರಿಸಲಾಗದು” ಎಂದು ಸೌಮ್ಯ ವಿವರಿಸಿದರು. ಆ ವೇಳೆ ನ್ಯಾಯಾಲಯ “ಈ ವಿಷಯವನ್ನು ಈ ಮೊದಲು ಪರಿಗಣಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪ್ರಶ್ನಿಸಿತು. ಇಲ್ಲ ಎಂಬಂತೆ ಸೌಮ್ಯ ಪ್ರತಿಕ್ರಿಯಿಸಿದರು.

“ಕೆಲ ಪೂರ್ವನಿದರ್ಶನಗಳು ಇರಬೇಕು. ಪರಿಶೀಲಿಸಿ ನಂತರ ತಿಳಿಸಿ. ಕೆಲವು ಸಂಶೋಧನೆ ಮಾಡಿ ಆ ಬಳಿಕ ನಮಗೆ ತಿಳಿಸಿ. ಪರಿಹರಿಸುವುದಕ್ಕಿಂತ ಹೆಚ್ಚಾಗಿ ಸಮಸ್ಯೆ ಸೃಷ್ಟಿಸಲು ನಾವು ಬಯಸುವುದಿಲ್ಲ” ಎಂದು ನ್ಯಾ. ಬೊಬ್ಡೆ ಹೇಳಿದರು.

Kannada Bar & Bench
kannada.barandbench.com