
ಉಳಿದ ಪ್ರಕರಣಗಳಲ್ಲಿ ಪೂರ್ವ ನಿದರ್ಶನವಾಗಿ ಪರಿಗಣಿಸುವಂತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಗುರುವಾರ ಸೀಮಿತ ತಡೆ ನೀಡಿದೆ.
ಮರಣದಂಡನೆಗೆ ಗುರಿಯಾಗಿದ್ದ ಐವರು ಸೇರಿ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿ ಈಚೆಗೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆ ನೀಡಲು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ನಿರಾಕರಿಸಿತು.
ಆದರೆ ಹೈಕೋರ್ಟ್ ತೀರ್ಪನ್ನು ಪೂರ್ವ ನಿದರ್ಶನವೆಂದು ಪರಿಗಣಿಸಬಾರದು ಎಂಬ ವಿಚಾರಕ್ಕೆ ಸೀಮನಿತ ತಡೆಯಾಜ್ಞೆ ಇರುತ್ತದೆ ಎಂದು ಅದು ಸ್ಪಷ್ಟಪಡಿಸಿತು.
"ಎಲ್ಲಾ ಪ್ರತಿವಾದಿಗಳನ್ನು ಬಿಡುಗಡೆ ಮಾಡಲಾಗಿದ್ದು ಅವರನ್ನು ಮತ್ತೆ ಜೈಲಿಗೆ ಕಳುಹಿಸುವ ಪ್ರಶ್ನೆಯೇ ಇಲ್ಲ. ಆದರೆ, ಕಾನೂನು ಪ್ರಶ್ನೆಗೆ ಸಂಬಂಧಿಸಿದಂತೆ ಆಕ್ಷೇಪಿತ ತೀರ್ಪನ್ನು ಬೇರೆ ಯಾವುದೇ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ಹೇಳುತ್ತಿದ್ದೇವೆ. ಆದ್ದರಿಂದ ಆ ಮಟ್ಟಿಗೆ ಆಕ್ಷೇಪಾರ್ಹ ತೀರ್ಪಿಗೆ ತಡೆ ಇರುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಮಹಾರಾಷ್ಟ್ರ ರಾಜ್ಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು , ಈ ತೀರ್ಪು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಮೋಕಾ) ಅಡಿಯಲ್ಲಿ ಬರುವ ಇತರ ವಿಚಾರಣೆಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ತೀರ್ಪಿಗೆ ತಡೆ ನೀಡುವಂತೆ ಕೋರಿದರು. ಆದರೆ ಖುಲಾಸೆಗೊಂಡ ವ್ಯಕ್ತಿಗಳ ಬಿಡುಗಡೆ ಮಾಡದಂತೆ ತಡೆ ನೀಡಬೇಕು ಎಂದು ಅವರು ಒತ್ತಾಯಿಸಲಿಲ್ಲ.
"ತಡೆಗೆ ಸಂಬಂಧಿಸಿದಂತೆ, ನಾನು (ಆರೋಪಿಗಳ) ಖುಲಾಸೆ ವಿಚಾರವಾಗಿ ಮಾತನಾಡುತ್ತಿಲ್ಲ. ನಮ್ಮ ಎಲ್ಲಾ ಮೋಕಾ ಕಾಯಿದೆಯಡಿಯ ಪ್ರಕರಣಗಳ ವಿಚಾರಣೆ ಮೇಲೆ ಪರಿಣಾಮ ಬೀರುವ ಕೆಲವು ಅವಲೋಕನಗಳು (ತೀರ್ಪಿನಲ್ಲಿ) ಇವೆ. ಖುಲಾಸೆಗೆ ಅಡ್ಡಿಯಾಗದಂತೆ ತೀರ್ಪಿಗೆ ತಡೆ ನೀಡಬಹುದು” ಎಂದು ಮೆಹ್ತಾ ಹೇಳಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಸೀಮಿತ ತಡೆಯಾಜ್ಞೆ ನೀಡಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತು. "ನಾವು ನೋಟಿಸ್ ನೀಡುತ್ತಿದ್ದೇವೆ. ಕಕ್ಷಿದಾರರು ಬರಲಿ. ನಾವು ಅವರ ವಾದ ಕೇಳಿ ನಿರ್ಧಾರ ಕೈಗೊಳ್ಳುತ್ತೇವೆ" ಎಂದಿತು.
ಖುಲಾಸೆಗೊಂಡ ಒಂಬತ್ತು ಜನರನ್ನು ಈಗಾಗಲೇ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರಲ್ಲಿ ಇಬ್ಬರು, ಮೊಹಮ್ಮದ್ ಫೈಸಲ್ ಅತೌರ್ ರೆಹಮಾನ್ ಶೇಖ್ ಮತ್ತು ನವೀದ್ ಹುಸೇನ್ ವಿರುದ್ಧ ಬೇರೆ ಪ್ರಕರಣಗಳು ಬಾಕಿ ಇರುವುದರಿಂದ ಅವರು ಬಿಡುಗಡೆಯಾಗಿಲ್ಲ. ಆರೋಪಿಗಳಲ್ಲಿ ಒಬ್ಬಾತ 2021ರಲ್ಲಿ ನಿಧನರಾಗಿದ್ದರು.
ಜುಲೈ 11, 2006 ರಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದೇ ವೇಳೆ ಪಶ್ಚಿಮ ರೈಲ್ವೆ ಮಾರ್ಗದ ಉಪನಗರ ರೈಲುಗಳಲ್ಲಿ ಏಳು ಬಾಂಬ್‌ಗಳು ಸ್ಫೋಟಗೊಂಡು 189 ಮಂದಿ ಸಾವನ್ನಪ್ಪಿ 824 ಮಂದಿ ಗಾಯಗೊಂಡಿದ್ದರು.
ನಿನ್ನೆಯ (ಬುಧವಾರ) ವಿಚಾರಣೆ ವೇಳೆ ನ್ಯಾಯಾಲಯ ಮೇಲ್ಮನವಿಯನ್ನು ಶೀಘ್ರವಾಗಿ ಪಟ್ಟಿ ಮಾಡುವಂತೆ ಕೋರುವ ತುರ್ತು ಎಂಥದ್ದು ಎಂದು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಈ ವಾರವೇ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಮೊದಲೇ ಒಪ್ಪಿದ್ದರೂ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೇಲ್ಮನವಿಯಲ್ಲಿ ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದ ಲೋಪ ಇರುವುದನ್ನು ರಿಜಿಸ್ಟ್ರಿ ಪತ್ತೆ ಹಚ್ಚಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು.