
ಪ್ರಸಕ್ತ ಸಾಲಿನ ಡಬ್ಲ್ಯೂಬಿಜೆಇಇ ಮೆರಿಟ್ ಪಟ್ಟಿಯನ್ನು ಮತ್ತೆ ಪ್ರಕಟಿಸುವಂತೆ ಪಶ್ಚಿಮ ಬಂಗಾಳ ಜಂಟಿ ಪ್ರವೇಶ ಪರೀಕ್ಷೆ (ಡಬ್ಲ್ಯೂಬಿಜೆಇಇ) ಮಂಡಳಿಗೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
2010ರ ಮೊದಲು ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಎಂದು ಗುರುತಿಸಲ್ಪಟ್ಟ 66 ಸಮುದಾಯಗಳನ್ನಷ್ಟೇ ಡಬ್ಲ್ಯೂಬಿಜೆಇಇ 2025ಕ್ಕೆ ಒಬಿಸಿ ಜಾತಿಗಳೆಂದು ಪರಿಗಣಿಸುವಂತೆ ಹೈಕೋರ್ಟ್ ನಿರ್ದೇಶಿಸಿತ್ತು.
ರಾಜ್ಯ ಸರ್ಕಾರ ಜೂನ್ 10ರಂದು ಹೊರಡಿಸಿದ್ದ ಮೀಸಲಾತಿ ನೀತಿ ಆಧರಿಸಿ ಡಬ್ಲ್ಯೂಬಿಜೆಇಇ 2025 ಫಲಿತಾಂಶ ಘೋಷಿಸಲು ಸಿಜೆಐ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ನೀಡಿರುವ ತಡೆಯಾಜ್ಞೆ ದಾರಿ ಮಾಡಿಕೊಡುತ್ತದೆ. ಸರ್ಕಾರ 140 ಸಮುದಾಯಗಳನ್ನು ಒಬಿಸಿ- ಎ ಮತ್ತು ಒಬಿಸಿ- ಬಿ ವರ್ಗಗಳ ಅಡಿಯಲ್ಲಿ ಹಿಂದುಳಿದ ವರ್ಗಗಳಾಗಿ ವರ್ಗೀಕರಿಸಿತ್ತು.
ಜೂನ್ 17ರಂದು ವಿಭಾಗೀಯ ಪೀಠ ನೀತಿಗೆ ತಡೆ ನೀಡಿರುವುದರಿಂದ ಡಬ್ಲ್ಯೂಬಿಜೆಇಇ ಮಂಡಳಿ2025ರ ಪರೀಕ್ಷೆಗೆ ಹೊಸ ಮೀಸಲಾತಿ ನೀತಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಆಗಸ್ಟ್ 7ರಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.
ಜುಲೈ 28ರಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿದ್ದರೂ, ಏಪ್ರಿಲ್‌ನಲ್ಲಿ ಪರೀಕ್ಷೆ ನಡೆದಿದ್ದರಿಂದ ರಾಜ್ಯ ಸರ್ಕಾರ ಹೊಸ ಮೀಸಲಾತಿ ನೀತಿಯನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಆದರೆ ಏಕಸದಸ್ಯ ಪೀಠ ಜೂನ್ 10ರ ನೀತಿಯ ವ್ಯಾಪ್ತಿಯನ್ನು ತಪ್ಪಾಗಿ ಮೊಟಕುಗೊಳಿಸಿದ್ದು ಹೊಸದಾಗಿ ಸೇರ್ಪಡೆಗೊಂಡ ಹಿಂದುಳಿದ ವರ್ಗಗಳನ್ನು 15 (5) ಮತ್ತು 16 (4)ನೇ ವಿಧಿಗಳ ಅಡಿಯಲ್ಲಿ ಒದಗಿಸಲಾದ ಮೀಸಲಾತಿಯಿಂದ ವಂಚಿತಗೊಳಿಸಿದೆ ಎಂದು ಪ. ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.