
ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಮತದಾರರ ದತ್ತಾಂಶದ ಬಗ್ಗೆ ದಾರಿತಪ್ಪಿಸುವ ಮಾಹಿತಿ ಹಂಚಿಕೊಂಡ ಆರೋಪದಡಿ ದೆಹಲಿಯ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ (ಸಿಎಸ್‌ಡಿಎಸ್) ಚುನಾವಣಾ ವಿಶ್ಲೇಷಕ ಸಂಜಯ್ ಕುಮಾರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಸಂಜಯ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಮಧ್ಯಂತರ ಪರಿಹಾರ ನೀಡಿತು.
“ಅವರು ನಿಷ್ಕಳಂಕ ಚಾರಿತ್ಯ ಉಳ್ಳವರು. ದೇಶ ಮತ್ತು ಜಗತ್ತಿಗೆ 30 ವರ್ಷ ಸೇವೆ ಸಲ್ಲಿಸಿದ ಅತ್ಯಂತ ಗೌರವಾನ್ವಿತರು. ತಪ್ಪಾಗಿದೆ. ಕ್ಷಮೆ ಯಾಚಿಸಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ಅದಾದ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಕುಮಾರ್ ಪರ ವಕೀಲರು ವಾದಿಸಿದರು.
"ನೋಟಿಸ್ ಜಾರಿ ಮಾಡಿ. ವಿಚಾರಣೆಗೆ ತಡೆ ನೀಡಿ " ಎಂದು ನ್ಯಾಯಾಲಯ ಆದೇಶಿಸಿತು.
ಈ ಪ್ರಕರಣವು 2024 ರ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕೆಲವು ಕ್ಷೇತ್ರಗಳಲ್ಲಿನ ಮತದಾರರ ದತ್ತಾಂಶವನ್ನು ಹೋಲಿಸಿ ಆಗಸ್ಟ್ 17 ರಂದು ಸಂಜಯ್ ಕುಮಾರ್ ಮಾಡಿದ ಎರಡು ಎಕ್ಸ್ ಪೋಸ್ಟ್‌ಗಳಿಗೆ ಸಂಬಂಧಿಸಿದ್ದಾಗಿದೆ. ಪೋಸ್ಟ್‌ಗಳು ಕೆಲವು ವ್ಯತ್ಯಾಸಗಳು ಕಂಡುಬಂದಿದ್ದವು. ಕ್ಷಮೆಯಾಚಿಸಿದರೂ ತಮ್ಮ ವಿರುದ್ಧ ನಾಗಪುರ ಮತ್ತು ನಾಸಿಕ್ ಪೊಲೀರು ಎರಡು ಎಫ್‌ಐಆರ್ ಹೂಡಿದರು ಎಂದು ಸಂಜಯ್ ವಾದಿಸಿದ್ದರು.
ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು ಹಾಗೂ ಮುಂದೆ ದಾಖಲಾಗಬಹುದಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಅವರು ಕೋರಿದ್ದರು.