ಹಿರಿಯ ಪತ್ರಕರ್ತರಾದ ಕರಣ್ ಥಾಪರ್, ಸಿದ್ಧಾರ್ಥ್ ವರದರಾಜನ್ ಬಂಧಿಸದಂತೆ ಅಸ್ಸಾಂ ಪೊಲೀಸರಿಗೆ ಸುಪ್ರೀಂ ಕೋರ್ಟ್ ತಡೆ

ಇಬ್ಬರು ಪತ್ರಕರ್ತರಿಗೂ ಬಿಎನ್ಎಸ್ ಸೆಕ್ಷನ್ 152ರ ಅಡಿಯಲ್ಲಿ ಅಸ್ಸಾಂ ಪೊಲೀಸರು ಸಮನ್ಸ್ ನೀಡಿದ್ದರು.
supreme court, siddharth varadarajan and karan thapar
supreme court, siddharth varadarajan and karan thapar
Published on

ದೇಶದ ಸಾರ್ವಭೌಮತ್ವಕ್ಕೆ  ಧಕ್ಕೆ ತಂದ ಆರೋಪದಡಿ ʼದ ವೈರ್‌ʼ ಸುದ್ದಿ ಜಾಲತಾಣದ ಸಂಪಾದಕ ಸಿದ್ಧಾರ್ಥ್‌ ವರದರಾಜನ್‌ ಮತ್ತು ಹಿರಿಯ ಪತ್ರಕರ್ತ ಕರಣ್‌ ಥಾಪರ್‌ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಇಬ್ಬರೂ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಇದೇ ವೇಳೆ ಸೂಚಿಸಿತು.

Also Read
ದ್ವಾರಕಾ ಎಕ್ಸ್‌ಪ್ರೆಸ್ ವೇ: 'ದಿ ವೈರ್' ವಿರುದ್ಧ ದೆಹಲಿ ಮುಖ್ಯ ಕಾರ್ಯದರ್ಶಿಯಿಂದ ಹೈಕೋರ್ಟ್‌ನಲ್ಲಿ ಮಾನಹಾನಿ ದಾವೆ

ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಗೆ ಶಿಕ್ಷೆ ವಿಧಿಸುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 152ರ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸ್‌ ಅಪರಾಧ ದಳ ತಮಗೆ ನೀಡಿದ್ದ ಸಮನ್ಸ್‌ ಪ್ರಶ್ನಿಸಿ ವರದರಾಜನ್‌  ಮತ್ತು ಥಾಪರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಸೆಪ್ಟೆಂಬರ್ 15 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Also Read
ಕರಣ್ ಥಾಪರ್ ನಕಲಿ ಸಂದರ್ಶನ ಫೇಸ್‌ಬುಕ್‌ನಿಂದ ತೆಗೆದುಹಾಕುವಂತೆ ಮೆಟಾಗೆ ಜಿಎಸಿ ಆದೇಶ

ಗಮನಾರ್ಹ ಸಂಗತಿ ಎಂದರೆ ಸೆಕ್ಷನ್ 152ರ ಅಡಿ ಅಸ್ಸಾಂ ಪೊಲೀಸರು ʼದ ವೈರ್‌ʼ ವಿರುದ್ಧ ದಾಖಲಿಸಿದ್ದ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಪರಿಹಾರ ನೀಡಿದ್ದ ಕೆಲವೇ ದಿನಗಳ ಬಳಿಕ ಅಸ್ಸಾಂ ಪೊಲೀಸರು ಸಮನ್ಸ್‌ ನೀಡಿದ್ದರು. ಈ ವಿಚಾರವನ್ನು ಪತ್ರಕರ್ತರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ನಿತ್ಯ ರಾಮಕೃಷ್ಣನ್ ಪ್ರಸ್ತಾಪಿಸಿದರು.

ಸರ್ಕಾರ ಪತ್ರಕರ್ತರ ವಿರುದ್ಧ ಸತತವಾಗಿ ಎಫ್‌ಐಆರ್‌ ಹೂಡಲು ಒಲವು ತೋರಿದಂತಿದೆ. ಇದು ಬಂಧನದ ನೈಜ ಆತಂಕ ಸೃಷ್ಟಿಸಿದೆ ಎಂದು ಅವರು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯ ಪತ್ರಕರ್ತರಿಗೆ ಬಂಧನದಿಂದ ರಕ್ಷಣೆ ನೀಡಿತು.

Kannada Bar & Bench
kannada.barandbench.com