ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಮತ್ತು ಕುನಾಲ್ ಗೂಮರ್ ಎಂಬುವವರ ವಿರುದ್ಧ ಭಾರತೀಯ ಅಪರಾಧ ದಂಡ ಸಂಹಿತೆ ಅಡಿಯಲ್ಲಿ ದಾಖಲಾಗಿದ್ದ ವಂಚನೆ ಮತ್ತು ನಂಬಿಕೆ ದ್ರೋಹದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ [ಅಮೀಶಾ ಪಟೇಲ್ ಮತ್ತು ಜಾರ್ಖಂಡ್ ಸರ್ಕಾರ ನಡುವಣ ಪ್ರಕರಣ].
ಪಟೇಲ್ ಮತ್ತು ಗೂಮರ್ ಅವರಿಗೆ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಮತ್ತು 420 (ವಂಚನೆ) ಮತ್ತು ವರ್ಗಾವಣೀಯ ಲಿಖಿತಗಳ (ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್) ಅಧಿನಿಯಮದ ಸೆಕ್ಷನ್ 138ರ (ಚೆಕ್ ಬೌನ್ಸ್) ಅಡಿ ಸಮನ್ಸ್ ನೀಡಲಾಗಿತ್ತು.
ಅಮೀಶಾ ಮತ್ತು ಕುನಾಲ್ ಪ್ರಕರಣದ ವಿಚಾರಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಂಬಿಕೆ ದ್ರೋಹ ಮತ್ತು ವಂಚನೆ ಪ್ರಕರಣಗಳ ವಿಚಾರಣೆಗೆ ತಡೆ ನೀಡಿರುವ ನ್ಯಾಯಾಲಯವು ಇದೇ ವೇಳೆ, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯಿದೆಯ ಸೆಕ್ಷನ್ 138ರ ಪ್ರಕಾರ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಚಲನಚಿತ್ರವೊಂದರ ನಿರ್ಮಾಣಕ್ಕೆ ಅಜಯ್ ಕುಮಾರ್ ಸಿಂಗ್ ಎಂಬುವವರು ಹೂಡಿದ್ದ ಹಣವನ್ನು ಚಿತ್ರ ನಿರ್ಮಾಣವಾಗದ ಕಾರಣ ಗೂಮರ್ ಮತ್ತು ನಟಿ ಮರುಪಾವತಿಸಬೇಕಿತ್ತು. ಗೂಮರ್ ಅವರು ನೀಡಿದ ₹ 2.5 ಕೋಟಿ ಮತ್ತು 50 ಲಕ್ಷ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಸಿಂಗ್ ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು.