ಕೆಪಿಎಸ್‌ಸಿ ನೇಮಕಾತಿ ಹಗರಣ: ಎಸ್‌ಐಟಿ ರಚನೆ, ಹೊಸದಾಗಿ ತನಿಖೆಗೆ ನಿರ್ದೇಶಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಎಸ್‌ಐಟಿ ಸದಸ್ಯರ ಕುರಿತಾದ ಆಕ್ಷೇಪಣೆಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರ ಸಲ್ಲಿಸಬಹುದು. ಅಲ್ಲದೇ, ಎಸ್‌ಐಟಿಗೆ ಪರ್ಯಾಯ ಹೆಸರುಗಳನ್ನೂ ಸೂಚಿಸಬಹುದಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌.
Supreme Court and KPSC
Supreme Court and KPSC
Published on: 

ಕರ್ನಾಟಕ ಲೋಕ ಸೇವಾ ಆಯೋಗದಲ್ಲಿನ ಪಶು ವೈದ್ಯಾಧಿಕಾರಿ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ನಡೆಸಲು ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಗುರುವಾರ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಕರ್ನಾಟಕ ಹೈಕೋರ್ಟ್‌ ಸೆಪ್ಟೆಂಬರ್‌ 21ರಂದು ಐವರು ಐಪಿಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ್ದ ಎಸ್‌ಐಟಿಗೆ ಆಕ್ಷೇಪಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಮನೋಜ್‌ ಮಿಶ್ರಾ ಮತ್ತು ವಿಜಯ್‌ ಬಿಷ್ಣೋಯ್‌ ಅವರ ವಿಭಾಗೀಯ ಪೀಠ ನಡೆಸಿತು.

Justice Manoj Misra and Justice Vijay Bishnoi
Justice Manoj Misra and Justice Vijay Bishnoi

“ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮತ್ತು ಹೊಸದಾಗಿ ತನಿಖೆ ನಡೆಸಲು ಆದೇಶಿಸಿರುವ ಹೈಕೋರ್ಟ್‌ನ ಎರಡು ನಿರ್ದೇಶನಗಳಿಗೆ ತಡೆ ನೀಡಲಾಗಿದೆ. ಹೈಕೋರ್ಟ್‌ ಆದೇಶದ ಅನ್ವಯ ರಚಿಸಲಾಗಿರುವ ಎಸ್‌ಐಟಿ ಸದಸ್ಯರ ಕುರಿತಾದ ಆಕ್ಷೇಪಣೆಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರ ಸಲ್ಲಿಸಬಹುದು. ಅಲ್ಲದೇ, ಎಸ್‌ಐಟಿಗೆ ಪರ್ಯಾಯ ಹೆಸರುಗಳನ್ನೂ ಸೂಚಿಸಬಹುದಾಗಿದೆ” ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ.

ಅಲ್ಲದೇ, ವಿಚಾರಣೆಯನ್ನು ಅಕ್ಟೋಬರ್‌ 12ಕ್ಕೆ ಮುಂದೂಡಲಾಗಿದೆ.

ಗಂಭೀರವಾದ ಆರೋಪಗಳನ್ನು ಪರಿಗಣಿಸಿ, ವಿಧಾನ ಸೌಧ ಠಾಣೆಯಲ್ಲಿ ದಾಖಲಾಗಿರುವ ಎರಡು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೈಕೋರ್ಟ್‌ ಎಸ್‌ಐಟಿಯನ್ನು ರಚಿಸಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ದಾಖಲಿಸಿದೆ.

ಅಪರಾಧ ತನಿಖಾ ದಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಯು ಮುಕ್ತಾಯ ಹಂತದಲ್ಲಿದ್ದು, ಸಿಐಡಿಯನ್ನು ಬದಲಿಸಬೇಕಾದ ಕುರಿತು ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ. ಸಿಐಡಿಯು ಪಕ್ಷಪಾತಿ, ಅಸಮರ್ಥ ಅಥವಾ ಸಕ್ರಿಯವಾಗಿಲ್ಲದ ಕುರಿತು ಯಾವುದೇ ಆರೋಪಗಳಿಲ್ಲದಿರುವಾಗ ಹೊಸದಾಗಿ ತನಿಖೆ ನಡೆಸುವುದಕ್ಕೆ ಯಾವುದೇ ಸಮರ್ಥನೆ ನೀಡಲಾಗಿಲ್ಲ ಎಂದು ರಾಜ್ಯ ಸರ್ಕಾರ ಆಕ್ಷೇಪಿಸಿದೆ.

ಎಸ್‌ಐಟಿಗೆ ನೇಮಿಸಿರುವ ಕೆಲವು ಅಧಿಕಾರಿಗಳ ಹೆಸರಿಗೂ ರಾಜ್ಯ ಸರ್ಕಾರ ಆಕ್ಷೇಪಿಸಿದೆ. 50 ಕೈಗಾರಿಕಾ ವಿಸ್ತರಣಾಧಿಕಾರಿಗಳ ನೇಮಕ ಮತ್ತು 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಎರಡೂ ಭಿನ್ನ ಪ್ರಕರಣಗಳಾಗಿದ್ದು, ಅವುಗಳನ್ನು ಒಟ್ಟಾಗಿ ಸೇರಿಸಿ ತನಿಖೆ ನಡೆಸಬೇಕಾಗಿಲ್ಲ. ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣದಲ್ಲಿ ಸಿಐಡಿಯು ಬಹುತೇಕ ತನಿಖೆ ಪೂರ್ಣಗೊಳಿಸಿದೆ. ಓಎಂಆರ್‌, ಡಿಜಿಟಲ್‌ ಸಾಧನಗಳ ಜಫ್ತಿ, ಅಕ್ರಮ ವರ್ಗಾವಣೆಯ ಜಫ್ತಿ ಮತ್ತು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಾರ ವಾದಿಸಿದೆ.

ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಮತ್ತು ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಯನ್ನು ಬಂಧಿಸಲಾಗಿದೆ. ಹೊಸದಾಗಿ ತನಿಖೆ ನಡೆಸುವುದರಿಂದ ಈಗಾಗಲೇ ನಡೆಸಲಾಗಿರುವ ತನಿಖೆಗೆ ಅಡ್ಡಿಯಾಗಲಿದ್ದು, ಬಂಧನ ಮತ್ತು ಜಾಮೀನು ಪ್ರಕ್ರಿಯೆಗೆ ಅಡಚಣೆಯಾಗಲಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮತ್ತು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದಿಸಿದರು.

Kannada Bar & Bench
kannada.barandbench.com