ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರವನ್ನು ವರ್ಚುವಲ್ ವ್ಯವಸ್ಥೆಯ ಮೂಲಕ ನಡೆಸುವಂತೆ ಆದೇಶಿಸಿದ್ದ ಹೈಕೋರ್ಟ್ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ (ಭಾರತೀಯ ಚುನಾವಣಾ ಆಯೋಗ ವರ್ಸಸ್ ಆಶೀಸ್ ಪ್ರತಾಪ್ ಸಿಂಗ್ ಮತ್ತು ಇತರರು).
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಧ್ಯಪ್ರದೇಶ ಹೈಕೋರ್ಟ್ ಮುಂದೆ ಪ್ರಸ್ತಾಪಿಸಿದ ಎಲ್ಲಾ ವಿಚಾರಗಳನ್ನೂ ಪರಿಗಣಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿದ್ದು, ಕಾನೂನಿನ ಅನ್ವಯ ಕ್ರಮಕೈಗೊಳ್ಳುವಂತೆ ಆದೇಶಿಸಿದೆ.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ವರ್ಚುವಲ್ ಪ್ರಚಾರ ನಡೆಸುವಂತೆ ಅಕ್ಟೋಬರ್ 20ರಂದು ಆದೇಶಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಪ್ರಧುಮನ್ ಸಿಂಗ್ ತೋಮರ್ ಮತ್ತು ಭಾರತೀಯ ಚುನಾವಣಾ ಆಯೋಗ (ಇಸಿಐ) ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ನ್ಯಾಯಪೀಠವು ಇಂದು ತನ್ನ ಆದೇಶದಲ್ಲಿ ಹೀಗೆ ಹೇಳಿದೆ:
ಹೈಕೋರ್ಟ್ ಆದೇಶವು ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಊನಗೊಳಿಸಿದೆ ಎಂದು ಆಯೋಗ ಪ್ರತಿನಿಧಿಸಿರುವ ಹಿರಿಯ ವಕೀಲ ರಾಕೇಶ್ ದ್ವಿವೇದಿ ಮತ್ತು ವಕೀಲ ಅಮಿತ್ ಶರ್ಮಾ ಹೇಳಿದರು. ಇಸಿಐ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿರಲಿಲ್ಲ ಎಂದಿದ್ದು, ಹೀಗೆ ಹೇಳಿದೆ.
“ಚುನಾವಣಾ ಆಯೋಗವಾಗಿ ನಿಮ್ಮ ಪಾತ್ರ ವಿಶಾಲವಾಗಿದೆ. ಸಂಬಂಧಪಟ್ಟವರಿಗೆ ನೀವು ಸರಿಯಾಗಿ ವಿಚಾರ ಮುಟ್ಟಿಸಬೇಕು. ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವುದರ ಜೊತೆಗೆ ಶಿಷ್ಟಾಚಾರ ಪಾಲಿಸಲಾಗುತ್ತಿದೆಯೇ ಎಂಬುದನ್ನು ನೋಡಬೇಕಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನೀವು ಮಾತ್ರ ನಡೆಸಲು ಸಾಧ್ಯ. ಈ ವಿಚಾರದಲ್ಲಿ ಹೈಕೋರ್ಟ್ ನಿರ್ಧರಿಸಲಾಗದು. ಪರಿಸ್ಥಿತಿಯನ್ನು ಹಿಡಿತಕ್ಕೆ ಪಡೆಯುವುದರ ಜೊತೆಗೆ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಟ್ಟು, ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು. ಹೈಕೋರ್ಟ್ ಮುಂದೆ ಪ್ರಸ್ತಾಪಿಸಿರುವ ವಿಚಾರಗಳನ್ನು ಪರಿಗಣಿಸುವುದರ ಜೊತೆಗೆ ನೀವು ಜವಾಬ್ದಾರಿ ಹೊರುತ್ತೀರಿ ಎಂದು ನಾವು ಹೇಳುತ್ತೇವೆ.”
ಹಲವು ರಾಜಕೀಯ ಪಕ್ಷಗಳು ಭೌತಿಕ ಪ್ರಚಾರ ಸಭೆ ಆಯೋಜಿಸುತ್ತಿರುವುದರಿಂದ ಕೋವಿಡ್ ವ್ಯಾಪಿಸುತ್ತಿದೆ ಎಂದು ಉಲ್ಲೇಖಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಆಧರಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ನಿಯಮ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳ ಪ್ರತಿನಿಧಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು. ತೋಮರ್ ಅವರನ್ನು ಹಿರಿಯ ವಕೀಲ ಮುಕುಲ್ ರೋಹ್ಟಗಿ ಪ್ರತಿನಿಧಿಸಿದ್ದರು.