ವಿ ಕೆ ಸಕ್ಸೇನಾ ಮಾನಹಾನಿ ಪ್ರಕರಣ: ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಆದರೆ, ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಅವರಿಗೆ ವಿಧಿಸಲಾದ ₹1 ಲಕ್ಷ ದಂಡವನ್ನು ನ್ಯಾಯಾಲಯ ರದ್ದುಗೊಳಿಸಿತು.
Medha Patkar, VK Saxena and Supreme Court
Medha Patkar, VK Saxena and Supreme Court
Published on

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2000ನೇ ಇಸವಿಯಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಆದರೆ ಅವರಿಗೆ ವಿಧಿಸಿದ್ದ ₹1 ಲಕ್ಷ ದಂಡವನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ರದ್ದುಗೊಳಿಸಿತು.

Also Read
ಮಾನಹಾನಿ ಪ್ರಕರಣ: ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಮೇಧಾ ಪಾಟ್ಕರ್ ವಿರುದ್ಧ 2001ನೇ ಇಸವಿಯಲ್ಲಿ ವಿ ಕೆ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾಗ ಪ್ರಕರಣ ದಾಖಲಿಸಿದ್ದರು. 2000ನೇ ಇಸವಿಯಲ್ಲಿ, ಸಕ್ಸೇನಾ ನೇತೃತ್ವದ ಸಂಘಟನೆ ಮೇಧಾ ಅವರ ನರ್ಮದಾ ನದಿಗೆ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವುದನ್ನು ವಿರೋಧಿಸುವ 'ನರ್ಮದಾ ಬಚಾವೋ ಆಂದೋಲನ'ದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಜಾಹೀರಾತಿನ ಶೀರ್ಷಿಕೆ 'ಶ್ರೀಮತಿ ಮೇಧಾ ಪಾಟ್ಕರ್ ಮತ್ತು ಅವರ ನರ್ಮದಾ ಬಚಾವೋ ಆಂದೋಲನದ ನೈಜ ಮುಖ' ಎಂಬುದಾಗಿತ್ತು.

ಜಾಹೀರಾತು ಪ್ರಕಟವಾದ ನಂತರ, ಪಾಟ್ಕರ್ ಸಕ್ಸೇನಾ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದರು. 'ದೇಶಭಕ್ತನ ನಿಜವಾದ ಸಂಗತಿಗಳು - ಜಾಹೀರಾತಿಗೆ ಪ್ರತಿಕ್ರಿಯೆ' ಎಂಬ ಪತ್ರಿಕಾ ಟಿಪ್ಪಣಿಯಲ್ಲಿ, ಸಕ್ಸೇನಾ ಸ್ವತಃ ಮಾಲೆಗಾಂವ್‌ಗೆ ಭೇಟಿ ನೀಡಿ, ನರ್ಮದಾ ಬಚಾವೋ ಆಂದೋಲನವನ್ನು ಹೊಗಳಿದ್ದಾರೆ ಮತ್ತು ನರ್ಮದಾ ಬಚಾವೋ ಆಂದೋಲನಕ್ಕಾಗಿ ಲೋಕ ಸಮಿತಿಗೆ ₹40,000 ಚೆಕ್ ಮೂಲಕ ಪಾವತಿಸಿದ್ದಾರೆ ಎಂದು ಆರೋಪಿಸಿದ್ದರು. ಲಾಲ್‌ಭಾಯ್ ಸಮೂಹ ಸಂಸ್ಥೆಯಿಂದ ಬಂದ ಚೆಕ್ ಬೌನ್ಸ್ ಆಗಿದೆ ಎಂದು ಸಹ ತಿಳಿಸಲಾಗಿತ್ತು.

ಹೀಗಾಗಿ ಸಕ್ಸೇನಾ 2001ರಲ್ಲಿ ಅಹಮದಾಬಾದ್‌ ನ್ಯಾಯಾಲಯದಲ್ಲಿ ಪಾಟ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2003ರಲ್ಲಿ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲಾಯಿತು.

ಮೇ-ಜುಲೈ 2024ರಲ್ಲಿ, ಮೇಧಾ ಪಾಟ್ಕರ್ ಅವರನ್ನು ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತಲ್ಲದೆ  ₹10 ಲಕ್ಷ ಪರಿಹಾರವನ್ನು ಸಕ್ಸೇನಾ ಅವರಿಗೆ ನೀಡುವಂತೆ ಆದೇಶಿಸಿತ್ತು.

ಮೇಲ್ಮನವಿ ನ್ಯಾಯಾಲಯ  ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಶಿಕ್ಷೆಯನ್ನು ಮಾರ್ಪಡಿಸಿದ್ದ ಅದು ಪಾಟ್ಕರ್ ಅವರನ್ನು ₹25,000 ಮೊತ್ತದ ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಒದಗಿಸಿ, ₹10 ಲಕ್ಷದ ಬದಲಿಗೆ ₹1 ಲಕ್ಷ ಪರಿಹಾರ ಮೊತ್ತ ನೀಡುವಂತೆ ಸೂಚಿಸಿತ್ತು. ಇದನ್ನು ಮೇಧಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Also Read
ಮಾನಹಾನಿ ಪ್ರಕರಣ: ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ಆದೇಶ

ದೆಹಲಿ ಹೈಕೋರ್ಟ್ ಕೂಡ ಶಿಕ್ಷೆಯನ್ನು ಎತ್ತಿಹಿಡಿದಿತ್ತು . ಆದರೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ  ವಿಧಿಸಿದ್ದ ಷರತ್ತನ್ನು ಮಾರ್ಪಡಿಸಿ ಆನ್‌ಲೈನ್‌ ಮೂಲಕ ಅಥವಾ ವಕೀಲರ ಮೂಲಕ ಹಾಜರಾದರೆ ಸಾಕು ಎಂದಿತ್ತು. ಈ ತೀರ್ಪನ್ನು ಕಡೆಗೆ ಮೇಧಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮೇಧಾ ಪಾಟ್ಕರ್‌ ಪರವಾಗಿ ಹಿರಿಯ ವಕೀಲ ಸಂಜಯ್‌ ಪಾರೀಖ್‌ ವಾದ ಮಂಡಿಸಿದ್ದರು. ಹಿರಿಯ ವಕೀಲ ಮಣಿಂದರ್ ಸಿಂಗ್‌, ಮತ್ತವರ ತಂಡ ವಿ ಕೆ ಸಕ್ಸೇನಾ ಅವರನ್ನು ಪ್ರತಿನಿಧಿಸಿತ್ತು.

Kannada Bar & Bench
kannada.barandbench.com