ವಿದೇಶಿ ಆರೋಪಿಗಳು ಜಾಮೀನು ಉಲ್ಲಂಘಿಸಿ ನಾಪತ್ತೆಯಾಗುವ ಆತಂಕಕಾರಿ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಈಚೆಗೆ ತೀವ್ರ ಕಳವಳ ವ್ಯಕ್ತಪಡಿಸಿದೆ [ಜಾರ್ಖಂಡ್ ಸರ್ಕಾರ ಮತ್ತು ಅಲೆಕ್ಸ್ ಡೇವಿಡ್ ಮತ್ತು ಎಂಯು ಹೆನ್ರಿ ಇನ್ನಿತರರ ನಡುವಣ ಪ್ರಕರಣ].
ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಪ್ರಮಾಣಿತ ಕಾರ್ಯವಿಧಾನ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿತು.
ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವಿದೇಶಿ ಪ್ರಜೆ ಅಲೆಕ್ಸ್ ಡೇವಿಡ್ ಜಾಮೀನು ಪಡೆದ ನಂತರ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೀಠ ಈ ನಿರ್ದೇಶನ ನೀಡಿದೆ.
"ಅಲೆಕ್ಸ್ ಡೇವಿಡ್ @ ಮುಹೆನ್ರಿ ಅವರು ವಿದೇಶಿ ಪ್ರಜೆಯಾಗಿದ್ದು, ಅವರು ಜಾಮೀನು ಪಡೆದು ಈಗ ನಾಪತ್ತೆಯಾಗಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಈ ವಿಚಾರವಾಗಿ ಕಾರ್ಯಪ್ರವೃತ್ತವಾಗಿದ್ದು ಪಾಲಿಸಬೇಕಾದ ಕಾರ್ಯವಿಧಾನದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವುದಾಗಿ ಕೇಂದ್ರವನ್ನು ಪ್ರತಿನಿಧಿಸುವ ವಕೀಲರಾದ ಕನು ಅಗರ್‌ವಾಲ್ ಅವರು ತಿಳಿಸಿದ್ದಾರೆ. ನ್ಯಾಯಾಲಯದೆದುರು ಬರುತ್ತಿರುವುದು ಇದೊಂದೇ ಪ್ರಕರಣವಲ್ಲ. ಹೀಗಾಗಿ ಅಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಬೇಕು ಮತ್ತು ಪಾಲಿಸಬೇಕಾದ ಕಾರ್ಯವಿಧಾನ ಇಲ್ಲದಿದ್ದರೆ ಅದನ್ನು ರೂಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಸೈಬರ್ ವಂಚನೆ ಪ್ರಕರಣದಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಜಾರ್ಖಂಡ್ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿದೆ.
ಸುನೀತಾ ಘೋಷ್ ಎಂಬುವವರೊಂದಿಗೆ ದೂರುದಾರರು ಗಿಡಮೂಲಿಕೆ ತೈಲ ಪೂರೈಕೆ ವ್ಯವಹಾರದಲ್ಲಿ ತೊಡಗಿದ್ದರು. ಆರಂಭದಲ್ಲಿ ಎರಡು ಲೀಟರ್ ಎಣ್ಣೆಯನ್ನು ಮಾದರಿಯಾಗಿ ಪಡೆಯಲು ಸುನಿತಾ ಘೋಷ್ ಎಂಬುವವರ ಖಾತೆಗೆ ₹3.44 ಲಕ್ಷ ವರ್ಗಾಯಿಸಿದ್ದರು. ಬಳಿಕ 150 ಲೀಟರ್ ಎಣ್ಣೆಗೆ ₹30 ಲಕ್ಷ ಠೇವಣಿ ಇಟ್ಟಿದ್ದರು. ಇನ್ನೂ ₹ 50 ಲಕ್ಷ ಠೇವಣಿ ಇಡುವಂತೆ ಕೇಳಿದಾಗ, ದೂರುದಾರರು ಅನುಮಾನಗೊಂಡು ಸುನಿತಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಸುನಿತಾ ಅವರೊಟ್ಟಿಗೆ ಅವರ ಬಳಿ ಉದ್ಯೋಗಿಯಾಗಿದ್ದ ಡೇವಿಡ್ ಅವರನ್ನೂ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ನಂತರ ದೀರ್ಘಾವಧಿಯ ಸೆರೆವಾಸದ ಹಿನ್ನೆಲೆಯಲ್ಲಿ ಜಾರ್ಖಂಡ್ ಹೈಕೋರ್ಟ್ ಡೇವಿಡ್‌ಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಜಾರ್ಖಂಡ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆರೋಪಿ- ಮೇಲ್ಮನವಿದಾರ ಜಾಮೀನು ಪಡೆದಿದ್ದು, ಈಗ ನಾಪತ್ತೆಯಾಗಿದ್ದಾರೆ ಎಂದು ಅದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ವಿದೇಶಿ ಪ್ರಜೆಗಳು ಜಾಮೀನು ಪಡೆದು ನಾಪತ್ತೆಯಾಗುವ ಪ್ರಕರಣಗಳು ಪುನರಾವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಆಗ ಕೇಂದ್ರವನ್ನು ಪ್ರತಿನಿಧಿಸುವ ವಕೀಲ ಕನು ಅಗರ್‌ವಾಲ್ ಸರ್ಕಾರ ಈ ವಿಷಯದ ಕುರಿತು ಕಾರ್ಯೋನ್ಮುಖವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅಂತಹ ಪ್ರಕರಣಗಳಲ್ಲಿ ಪಾಲಿಸಬೇಕಾದ ಕಾರ್ಯವಿಧಾನದ ಬಗ್ಗೆ ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 26ರಂದು ನಡೆಯಲಿದೆ.