
ಪರಿಸರ ಸೂಕ್ಷ್ಮ ದೆಹಲಿ ರಿಜ್ ಪ್ರದೇಶದಲ್ಲಿ ಅನಧಿಕೃತ ಮರಗಳ ಹನನಕ್ಕೆ ಸಂಬಂಧಿಸಿದಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಆರೋಪಿ ಸ್ಥಾನದಲ್ಲಿದ್ದ ಮಹತ್ವದ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಪ್ರತಿಯೊಬ್ಬ ಅಧಿಕಾರಿಗೂ ₹25,000 ದಂಡ ವಿಧಿಸಿದೆ.
ಡಿಡಿಎ ಅಧಿಕಾರಿಗಳು ಆ ಪ್ರದೇಶದಲ್ಲಿ ಮರ ಕಡಿಯಲು ಅವಕಾಶ ನೀಡುವ ಮೊದಲು ಸುಪ್ರೀಂ ಕೋರ್ಟ್‌ನ ಅನುಮತಿ ಪಡೆಯದೆ ಸ್ಪಷ್ಟವಾಗಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ತಿಳಿಸಿತು. 1996ರಲ್ಲಿ ನೀಡಲಾಗಿದ್ದ ತೀರ್ಪಿನನ್ವಯ ಹಾಗೆ ಅನುಮತಿ ಪಡೆಯುವುದು ಅಗತ್ಯವಾಗಿತ್ತು.
"ಪ್ರತಿವಾದಿಯ (ಡಿಡಿಎ) ಕೃತ್ಯವು ದುರುದ್ದೇಶಪೂರಿತವಾಗಿದ್ದು, ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವ್ಯಾಪ್ತಿಗೆ ಬರುತ್ತದೆ. ಇದು ಸಾಂಸ್ಥಿಕ ತಪ್ಪು ನಡೆಯಾಗಿದ್ದು ಆಡಳಿತಾತ್ಮಕ ಅತಿಕ್ರಮಣದ ಪ್ರಕರಣವಾಗಿದೆ. ಇದು ಹೊಣೆಗಾರಿಕೆಯ ಬಗ್ಗೆ ಬಲವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
ಮರಗಳನ್ನು ಕಡಿದಿರುವುದು ನಿಜವಾಗಿಯೂ ತಪ್ಪು ನಿರ್ಣಯದ ಫಲಶೃತಿಯಾಗಿದೆ. ಮತ್ತೊಂದೆಡೆ ಅರೆಸೇನಾ ಸಿಬ್ಬಂದಿಯ ಆಸ್ಪತ್ರೆಗೆ ದಾರಿ ಮಾಡಿಕೊಡುವ ಸದುದ್ದೇಶದಿಂದ ಹೀಗೆ ಮಾಡಲಾಗಿದೆ ಎಂದ ನ್ಯಾಯಾಲಯ ಮೃದು ಧೋರಣೆ ತಳೆದು ಪ್ರಕರಣ ಮುಕ್ತಾಯಗೊಳಿಸಿತು.
ಡಿಡಿಎ ಮಾಜಿ ಉಪಾಧ್ಯಕ್ಷ ಸುಭಾಶಿಶ್ ಪಾಂಡಾ ಅವರು ಹುದ್ದೆಯಲ್ಲಿ ಮುಂದುವರೆಯುತ್ತಿಲ್ಲ ಮತ್ತು ಈ ಹಿಂದೆ ಪೂರ್ಣಾವಧಿ ಸದಸ್ಯರಾಗಿರಲಿಲ್ಲ ಎಂದ ನ್ಯಾಯಾಲಯ ಅವರ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿತು.
ಇಂದಿನ ತೀರ್ಪಿನಿಂದಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿ ಕೆ ಸಕ್ಸೇನಾ ಅವರು ನಿರಾಳಗೊಳ್ಳುವಂತಾಗಿದೆ. ಎಲ್‌ಜಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕಕ್ಷಿದಾರರಲ್ಲದಿದ್ದರೂ, ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠ ಮರಗಳನ್ನು ಕಡಿಯುವಲ್ಲಿ ದೆಹಲಿ ಎಲ್‌ಜಿ ಪಾತ್ರವಿರುವ ಬಗ್ಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಸ್ತುತ ಸಿಜೆಐ ಗವಾಯಿ ಅವರು ಕೂಡ ಆ ಪೀಠದ ಭಾಗವಾಗಿದ್ದರು.
ನಂತರ ನಿವೃತ್ತ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನಂತರ ಲೆ. ಗವರ್ನರ್ ಅವರಿಂದ ವಿವರಣೆ ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಎಲ್‌ಜಿ ಸಕ್ಸೇನಾ ಅವರು ಮರ ಕಡಿಯಲು ನ್ಯಾಯಾಲಯದ ಪೂರ್ವಾನುಮತಿ ಪಡೆಯುವ ಅವಶ್ಯಕತೆಯ ಬಗ್ಗೆ ಮರ ಕಡಿಯುವ ಪ್ರಕ್ರಿಯೆ ಪ್ರಾರಂಭವಾಗುವವರೆಗೂ ತಮಗೆ ತಿಳಿಸಿರಲಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದರು.