

ದೇಶದ ವಿವಿಧೆಡೆ ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪಿಸುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಪೂರ್ಣ ಪೀಠ 2010ರಲ್ಲಿಯೇ ತಿರಸ್ಕರಿಸಿದ್ದು ಅದಕ್ಕೆ ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿತ್ತು ಎಂಬುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಬಾಪಿ ಹಲ್ದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ವಿಚಾರವನ್ನು 2010 ಫೆಬ್ರವರಿ 18ರಂದು ನಡೆದ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠದ ಕಲಾಪದ ವೇಳೆ ಪರಿಶೀಲಿಸಿ, ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸಲು ಯಾವುದೇ ನ್ಯಾಯಸಮ್ಮತ ಕಾರಣ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು ಎಂದು ಹೇಳಿದ್ದಾರೆ.
ಸಂವಿಧಾನದ 130ನೇ ವಿಧಿಯ ಪ್ರಕಾರ ಕಾಲಾನುಕಾಲಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳು ರಾಷ್ಟ್ರಪತಿಗಳ ಸಮ್ಮತಿಯ ಮೇರೆಗೆ ಸುಪ್ರೀಂ ಕೋರ್ಟ್‌ನ ದೆಹಲಿಯಲ್ಲಿ ಅಥವಾ ಇತರ ಸ್ಥಳ ಅಥವಾ ಸ್ಥಳಗಳಲ್ಲಿ ಕಲಾಪವನ್ನು ನಡೆಸುತ್ತಾರೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ರಾಚನಿಕ ಬದಲಾವಣೆಗಳನ್ನು ಶಿಫಾರಸು ಮಾಡಿದ್ದ ವಿವಿಧ ಕಾನೂನು ಆಯೋಗದ ವರದಿಗಳನ್ನು ಕೇಂದ್ರ ಇದೇ ವೇಳೆ ಪ್ರಸ್ತಾಪಿಸಿತು. ಹತ್ತನೇ ಆಯೋಗವು ಸುಪ್ರೀಂ ಕೋರ್ಟ್‌ಅನ್ನು ಎರಡು ಭಾಗಗಳಾಗಿ ವಿಂಗಡಿಸಿ ದೆಹಲಿಯಲ್ಲಿ ಸಾಂವಿಧಾನಿಕ ನ್ಯಾಯಾಲಯವನ್ನೂ ಮತ್ತೊಂದು ವಿಭಾಗವಾದ ಮೇಲ್ಮನವಿ ನ್ಯಾಯಾಲಯ ಅಥವಾ ಫೆಡರಲ್ ನ್ಯಾಯಾಲಯದ ಪೀಠಗಳನ್ನು ದೇಶದ ವಿವಿಧೆಡೆಗಳಲ್ಲಿ ಸ್ಥಾಪಿಸುವ ಸಲಹೆಯನ್ನು ನೀಡಲಾಗಿತ್ತು. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಅಂದರೆ ದೆಹಲಿ, ಚೆನ್ನೈ ಅಥವಾ ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಮೇಲ್ಮನವಿ ಇಲ್ಲವೇ ಫೆಡರಲ್ ನ್ಯಾಯಾಲಯಗಳ ಸ್ಥಾಪನೆಗೆ ಪ್ರಸ್ತಾಪಿಸಲಾಗಿತ್ತು. ಅದನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು ಎಂದು ತಿಳಿಸಿದೆ.
ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದ ಇದೇ ರೀತಿಯ ಪ್ರಕರಣ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ಉತ್ತರದಲ್ಲಿ ವಿವರಿಸಲಾಗಿದೆ. ಈ ಸಂಬಂಧ ರಿಟ್ ಅರ್ಜಿಯನ್ನು 2016ರಲ್ಲಿ ಸಲ್ಲಿಸಲಾಯಿತು. ಜುಲೈ 13, 2016 ರಂದು, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸುವುದು ಸೂಕ್ತವೆಂದು ಪರಿಗಣಿಸಿತು ಎಂದು ಸಚಿವರು ಹೇಳಿದರು.