ಸೆನ್ಸಾರ್ ಇಲ್ಲದ ಮಾತ್ರಕ್ಕೆ ಎಲ್ಲಾ ತಂದು ತೆರೆಯ ಮೇಲೆ ಸುರಿಯುವಂತಿಲ್ಲ: ಟಿವಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ
Madurai Bench

ಸೆನ್ಸಾರ್ ಇಲ್ಲದ ಮಾತ್ರಕ್ಕೆ ಎಲ್ಲಾ ತಂದು ತೆರೆಯ ಮೇಲೆ ಸುರಿಯುವಂತಿಲ್ಲ: ಟಿವಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ

ಲೈಂಗಿಕ ಜಾಹೀರಾತುಗಳು ಮತ್ತು ಆನ್‌ಲೈನ್‌ ಗೇಮ್ ಜಾಹೀರಾತುಗಳಲ್ಲಿ ಖ್ಯಾತನಾಮರು ಕಾಣಿಸಿಕೊಳ್ಳುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಎರಡು ಪಿಐಎಲ್‌ಗಳ ವಿಚಾರಣೆ ವೇಳೆ ನ್ಯಾಯಲಯ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ಇಲೆಕ್ಟ್ರಾನಿಕ್ ಮಾಧ್ಯಮ ಅಥವಾ ಟಿವಿಯಲ್ಲಿ ಪ್ರಸಾರವಾಗುವ ವಿಚಾರಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ, ಮಾಧ್ಯಮಗಳು ಸ್ವಲ್ಪವಾದರೂ ಜವಾಬ್ದಾರಿ ತೋರಬೇಕು ಎಂದು ಅದು ಒತ್ತಿ ಹೇಳಿದೆ.

ಲೈಂಗಿಕ ಜಾಹೀರಾತುಗಳು ಮತ್ತು ಆನ್‌ಲೈನ್‌ ಗೇಮ್‌ ಜಾಹೀರಾತುಗಳಲ್ಲಿ ಖ್ಯಾತನಾಮರು ಕಾಣಿಸಿಕೊಳ್ಳುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಧೀಶರಾದ ಎನ್. ಕಿರಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೆಲ ಬೇಜವಾಬ್ದಾರಿಯುತ ವಿಷಯಗಳ ಕುರಿತು ಗಮನ ಹರಿಸಲು ವಿಚಾರಣೆ ನ್ಯಾಯಾಲಯಕ್ಕೆ ಪ್ರೇರೇಪಣೆ ನೀಡಿತು.

2008ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ತಾಜ್ ಹೋಟೆಲ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ ಉದಾಹರಣೆಯನ್ನು ಉಲ್ಲೇಖಿಸಿ “ಭಯೋತ್ಪಾದಕರು ಸಹ ಟಿವಿ ಚಾನೆಲ್ ವೀಕ್ಷಿಸುತ್ತಿದ್ದರು ಮತ್ತು ಪ್ರಸಾರದಿಂದ ಸುಳಿವು ಪಡೆಯುತ್ತಿದ್ದಾರೆ” ಎಂದು ಹೇಳಿತು.

Also Read
ಸುಶಾಂತ್ ಸಿಂಗ್ ಪ್ರಕರಣ: ತನ್ನ ದೋಷರಹಿತ ತನಿಖಾ ವರದಿಗಾರಿಕೆ ಅಧಿಕಾರಿಗಳಿಗೆ ಸಹಾಯ ಮಾಡಿದೆ ಎಂದ 'ರಿಪಬ್ಲಿಕ್' ಟಿವಿ

"ಟಿವಿಯ ಮೇಲೆ ಸ್ವಲ್ಪವಾದರೂ ನಿಯಂತ್ರಣ ಇರಬೇಕು. ... ಭಯೋತ್ಪಾದಕರು ಸಹ ಟಿವಿ ನೋಡುತ್ತಿದ್ದರು... ತಾಜ್ ಮೇಲೆ ದಾಳಿ ನಡೆದಾಗ ... ಭಯೋತ್ಪಾದಕರು ಅದರಿಂದ ಸುಳಿವು ಪಡೆದು ಹೋಟೆಲ್ ಮೇಲೆ ದಾಳಿ ಮಾಡುತ್ತಿದ್ದರು ... ಅವು (ಮಾಧ್ಯಮ) ಕೆಲ ಜವಾಬ್ದಾರಿ ಹೊಂದಿರಬೇಕು. ಅವುಗಳಿಗೆ ಸೆನ್ಸಾರ್‌ಶಿಪ್‌ ಇಲ್ಲದಿರುವುದರಿಂದ, ಅವರು ಸರ್ವಸ್ವವನ್ನೂ ಪರದೆಯ ಮೇಲೆ ತಂದು ಸುರಿಯಲು ಸಾಧ್ಯವಿಲ್ಲ!… ನಿನ್ನೆ ಕರ್ನಾಟಕದಲ್ಲಿ ಹುಡುಗಿಯೊಬ್ಬಳ ಬರ್ಬರ ಕೊಲೆ ನಡೆಯಿತು. ಅದನ್ನು ಟಿವಿಯಲ್ಲಿ ತೋರಿಸಲಾಯಿತು. ಮಕ್ಕಳ ಮೇಲೆ (ಇದು) ಏನು ಪರಿಣಾಮ ಬೀರುತ್ತದೆ? ಅದನ್ನು ಪರದೆಯ ಮೇಲೆ ತೋರಿಸಬಾರದೆಂಬ ಜವಾಬ್ದಾರಿ ಇರಬೇಕು,” ಎಂದು ನ್ಯಾಯಪೀಠ ಹೇಳಿದೆ.

ಲೈಂಗಿಕ ಜಾಹೀರಾತುಗಳ ವಿಷಯಕ್ಕೆ ಮರಳಿದ ನ್ಯಾಯಪೀಠ, "ಅನುಮತಿಯಿಲ್ಲದೆ, ಅವು ಮನೆಗೆ ಕಾಲಿಡುತ್ತವೆ. ಇಂತಹ ಜಾಹೀರಾತುಗಳನ್ನು ಸ್ಥಗಿತಗೊಳಿಸುವುದು ಸರ್ಕಾರದ ಕರ್ತವ್ಯ, ಇವೆಲ್ಲವೂ ಸಾಮಾಜಿಕ ಸಮಸ್ಯೆಗಳು. ಇದು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಅವರದು ಪ್ರಭಾವಿತರಾಗುವ ಮನಸ್ಸ," ಎಂದು ಹೇಳಿತು.

ಅಲ್ಲದೆ ಆನ್‌ಲೈನ್‌ ಗೇಮ್‌ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಖ್ಯಾತನಾಮರಿಗೆ ಅದು ಬಿಸಿ ಮುಟ್ಟಿಸಿದೆ. ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದೆ. "ಎಷ್ಟು ಜನ ವ್ಯಸನಿಗಳಾಗಿದ್ದಾರೆ? ಎಷ್ಟು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ? ನೀವು ಅವುಗಳನ್ನು ಕೌಶಲ್ಯದ ಆಟಗಳೆಂದು ಮರೆಮಾಚಬಹುದು. ಆದರೆ ವಾಸ್ತವವನ್ನು ಗಮನಿಸಬೇಕು," ಎಂದು ತಿವಿದಿದೆ.

ಟಿವಿ ಹೂರಣ ಕುರಿತಂತೆ ನ್ಯಾಯಾಲಯ ಆಡಿರುವ ಪ್ರಮುಖ ಮಾತುಗಳು:

  • ಈಗ ಇರುವ ಟೆಲಿವಿಷನ್ ನಿಯಂತ್ರಕ ಕಾರ್ಯವಿಧಾನಗಳಿಗೆ ಹಲ್ಲಿಲ್ಲ. ಟಿವಿಯ ಹೂರಣವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸುವ ಅವಶ್ಯಕತೆಯಿದೆ.

  • ಇಲೆಕ್ಟ್ರಾನಿಕ್‌ ಮಾಧ್ಯಮ ಈಗ ಅನಿವಾರ್ಯ ಸ್ಥಿತಿಯಲ್ಲಿದೆ. ಆದ್ದರಿಂದ, ಅಗತ್ಯ ನಿಯಮಗಳು ಮತ್ತು ನಿಯಮಗಳು ಜಾರಿಗೆ ಬರಬೇಕಾಗಿದೆ. ನವಜಾತ ಶಿಶು ಕೂಡ ಈಗ ಪರದೆಯತ್ತ ನೋಡುತ್ತಿದೆ.

  • ಖ್ಯಾತನಾಮರು ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿದ್ದಾರೆ. ಯಾವುದೇ ಕೆಲಸ ಒಪ್ಪುವ ಮೊದಲು ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ಪರಿಗಣಿಸಿ ಎಂದಷ್ಟೇ ನಾವು ಹೇಳಬಹುದು.

  • ಪ್ರೈಮ್‌ ಟೈಂ ವೇಳೆಯಲ್ಲಿಯೂ ವಿಚಿತ್ರ ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವಕ್ಕೆ ಅಶ್ಲೀಲತೆ ಹೊರತುಪಡಿಸಿ ಬೇರೇನೂ ಇಲ್ಲ.

  • ಚಲನಚಿತ್ರ ಹೂರಣ ಕುರಿತಂತೆ ನಿಗಾ ವಹಿಸಲು ಸೆನ್ಸಾರ್ ಬೋರ್ಡ್‌ಗಳು ಇದೆ. ಆದರೆ ಅಂತಹ ಯಾವುದೇ ಪೂರ್ವ-ಸೆನ್ಸಾರ್‌ಶಿಪ್ ಕಾರ್ಯವಿಧಾನ ಜಾಹೀರಾತುಗಳಿಗಾಗಿ ಜಾರಿಯಲ್ಲಿಲ್ಲ.

  • ಪ್ರಕರಣ ನ್ಯಾಯಾಲಯದಲ್ಲಿರುವಾಗಲೂ ಲೈಂಗಿಕ ಜಾಹೀರಾತುಗಳು ಪ್ರಸಾರವಾಗುತ್ತಿರುತ್ತವೆ.

Also Read
[ಟಿಆರ್‌ಪಿ ಹಗರಣ] ಡಿ.15 ರವರೆಗೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾನ್‌ಚಂದಾನಿ ಮುಂಬೈ ಪೊಲೀಸ್ ವಶಕ್ಕೆ

ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿಗೆ ಸಂಬಂಧಿಸಿದಂತೆ ಖ್ಯಾತನಾಮರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸುವಂತೆ ಮನವಿ

ವಿಚಾರಣೆ ವೇಳೆ ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡ ಖ್ಯಾತನಾಮರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸುವಂತೆ ವಿವಿಧ ವಕೀಲರು ಮನವಿ ಮಾಡಿದರು. ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಪರವಾಗಿ ಹಾಜರಾದ ವಕೀಲ ಸಿ ಮಣಿಶಂಕರ್‌ ತಮಿಳುನಾಡು ಸರ್ಕಾರ ಈಗಾಗಲೇ ರಾಜ್ಯದಲ್ಲಿ ಆನ್‌ಲೈನ್ ಆಟ ಮತ್ತು ಜೂಜಾಟವನ್ನು ನಿಷೇಧಿಸುವ ಸುಗ್ರೀವಾಜ್ಞೆ ಪ್ರಕಟಿಸಿದೆ ಎಂದರು.

ಎಂಪಿಎಲ್ ಜೂಜಿನ ಆಟಕ್ಕಿಂತ ಕೌಶಲ್ಯದ ಆಟ ಎಂದು ಪುನರುಚ್ಚರಿಸಿದ ಅವರು ಏಕರೀತಿಯ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಈಗ ತಮಿಳುನಾಡಿಗೆ ಬಂದಿರುವುದರಿಂದ, ನ್ಯಾಯಾಲಯದ ಮುಂದೆ ಅರ್ಜಿಗಳಿಗೆ ಹೇಳಲು ಏನೂ ಉಳಿದಿಲ್ಲ ಎಂದು ವಾದಿಸಿದರು.

ಆನ್‌ಲೈನ್ ಸ್ಪೋರ್ಟ್ಸ್ ಫ್ಯಾಂಟಸಿ ಗೇಮ್ ಡ್ರೀಮ್ 11 ಅನ್ನು ಕನಿಷ್ಠ ಮೂರು ಹೈಕೋರ್ಟ್‌ಗಳು ಎತ್ತಿಹಿಡಿದಿವೆ ಎಂದು ಹಿರಿಯ ವಕೀಲ ಪಿ.ಎಸ್.ರಾಮನ್ ಗಮನಸೆಳೆದರು. ಇದು ಕೌಶಲ್ಯದ ಆಟ ಮತ್ತು ಜೂಜಾಟವಲ್ಲ ಎಂದು ಅವರು ಪ್ರತಿಪಾದಿಸಿದರು.

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ನಟಿ ತಮನ್ನಾ ಭಾಟಿಯಾ ಪರವಾಗಿ ಪರ ಹಿರಿಯ ವಕೀಲ ವಿ ಕಾರ್ತಿಕ್‌ ಜಂಟಿ ಹೇಳಿಕೆಗಳನ್ನು ಸಲ್ಲಿಸಿದರು.

ಸುಗ್ರೀವಾಜ್ಞೆಯ ಪರಿಣಾಮ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರಂಗಳು ತಮಿಳುನಾಡಿನಿಂದು ಹೊರಬಂದಿರುವ ಕಾರಣ ರಿಟ್‌ಅರ್ಜಿಯ ಉದ್ದೇಶ ಈಡೇರಿದ್ದು ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ರೋಹಟ್ಗಿ ತಿಳಿಸಿದರು.

ಆದರೆ, ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಶ್ರೀಚರಣ್ ರಂಗರಾಜನ್ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವ್ಯಾಪ್ತಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಮತ್ತು ಈ ವಿಷಯದಲ್ಲಿ ಸೆಲೆಬ್ರಿಟಿಗಳನ್ನೂ ಹೊಣೆಗಾರರನ್ನಾಗಿ ಮಾಡಬೇಕಾಗಿದೆ ಎಂದು ವಾದ ಮಂಡಿಸಿದರು.

No stories found.
Kannada Bar & Bench
kannada.barandbench.com