

ಕೇರಳದ ನ್ಯಾಯಾಂಗ ಪರೀಕ್ಷೆ ಉತ್ತೀರ್ಣರಾಗಿರುವ ಮೊದಲ ದೃಷ್ಟಿಹೀನ ವ್ಯಕ್ತಿಯಾಗಿ ತಾನ್ಯಾ ನಾಥನ್ ಅವರು ಇತಿಹಾಸ ನಿರ್ಮಿಸಿದ್ದಾರೆ. ಸಿವಿಲ್ ನ್ಯಾಯಾಧೀಶೆ (ಕಿರಿಯರ ವಿಭಾಗ) ಪರೀಕ್ಷೆಯಲ್ಲಿ ಅಂಗವಿಕಲರ ವಿಭಾಗದಲ್ಲಿ ತಾನ್ಯಾ ನಾಥನ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಶೇಕಡಾ 100 ದೃಷ್ಟಿಹೀನರಾಗಿರುವ ತಾನ್ಯಾ ನಾಥನ್ ಅವರು ಕಣ್ಣೂರು ವಿಶ್ವವಿದ್ಯಾಲಯದಿಂದ ಮೊದಲ ರ‍್ಯಾಂಕ್‌ನೊಂದಿಗೆ ಎಲ್‌ಎಲ್‌ಬಿ ಪೂರ್ಣಗೊಳಿಸಿದ್ದಾರೆ.
ನ್ಯಾಯಾಂಗ ಪರೀಕ್ಷೆ ಬರೆಯುವ ಮುನ್ನ, ಅವರು ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು.
ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ಭಾರತದಲ್ಲಿ ನ್ಯಾಯಾಂಗ ಸೇವೆಗಳಿಗೆ ನೇಮಕಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಒಂದು ವರ್ಷದೊಳಗೆ ತಾನ್ಯಾ ಅವರು ಈ ಸಾಧನೆಗೈದಿದ್ದಾರೆ.
ಕೆಲವು ರಾಜ್ಯಗಳಲ್ಲಿ ನ್ಯಾಯಾಂಗ ಸೇವೆಗಳಲ್ಲಿ ದೃಷ್ಟಿಹೀನ ಅಭ್ಯರ್ಥಿಗಳಿಗೆ ಮೀಸಲಾತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣ ಸೇರಿದಂತೆ ಹಲವು ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ 2025ರ ಮಾರ್ಚ್‌ನಲ್ಲಿ ಈ ತೀರ್ಪು ನೀಡಿತ್ತು.
ನ್ಯಾಯಾಂಗ ಸೇವೆಗಳಲ್ಲಿ ವೈಕಲ್ಯತೆಯುಳ್ಳವರು ಯಾವುದೇ ರೀತಿಯ ಭೇದಭಾವಕ್ಕೆ ಒಳಗಾಗಬಾರದು ಹಾಗೂ ಒಳಗೊಳ್ಳುವ ವ್ಯವಸ್ಥೆ ನಿರ್ಮಿಸಲು ರಾಜ್ಯವು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
“ಅಂಗವೈಕಲ್ಯವನ್ನಷ್ಟೇ ಆಧಾರವನ್ನಾಗಿ ಮಾಡಿಕೊಂಡು ಯಾವುದೇ ಅಭ್ಯರ್ಥಿಗೆ ಅವಕಾಶ ನಿರಾಕರಿಸುವಂತಿಲ್ಲ” ಎಂದು ಅದು ನುಡಿದಿತ್ತು.