ಜನಸಾಮಾನ್ಯರ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್: ಸಿಜೆಐ ಎನ್ ವಿ ರಮಣ

"ನ್ಯಾ. ಶಾಂತನಗೌಡರ್‌ ಅವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇಶದ ಅತ್ಯುನ್ನತ ವೈದ್ಯರನ್ನೆಲ್ಲರೂ ಸಂಪರ್ಕಿಸುವ ಪ್ರಯತ್ನ ಮಾಡಿದೆವು. ಪುತ್ರ ಶಿವಪ್ರಸಾದ್‌ ಕೊನೆಯವರೆಗೂ ಸರ್ವ ಪ್ರಯತ್ನ ಮಾಡಿದರು. ಆದರೆ, ಅದು ಫಲ ನೀಡಲಿಲ್ಲ" ಎಂದ ಸಿಜೆಐ ರಮಣ.
Justice Mohan Shantanagoudar
Justice Mohan Shantanagoudar
Published on

“ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್‌ ಅವರ ನಿಧನದಿಂದ ದೇಶ ಜನಸಾಮಾನ್ಯರ ನ್ಯಾಯಮೂರ್ತಿಯೊಬ್ಬರನ್ನು ಕಳೆದುಕೊಂಡಿದೆ” ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನುಡಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಶನಿವಾರ ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಏಪ್ರಿಲ್‌ನಲ್ಲಿ ನಿಧನರಾದ ಮೋಹನ್‌ ಎಂ. ಶಾಂತನಗೌಡರ್‌ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ದೇಶದ ನ್ಯಾಯಶಾಸ್ತ್ರಕ್ಕೆ ನ್ಯಾ. ಮೋಹನ್‌ ಕೊಡುಗೆ ಅನನ್ಯ. ರೈತರೂ ಬಳಕೆದಾರರೇ ಎಂಬ ತೀರ್ಪು ಹಾಗೂ ಇತರ ಹಲವು ಜನಪರ ಕಾಳಜಿಯ ತೀರ್ಪು ನೀಡಿದ ನ್ಯಾ. ಶಾಂತನಗೌಡರ್‌ ಅವರ ತೀರ್ಪುಗಳಲ್ಲಿ ಸರಳತೆ, ಸಾಮಾನ್ಯ ಜ್ಞಾನ, ಅನುಭವ, ಪ್ರಾಯೋಗಿಕ ಅರಿವು ಹೇರಳವಾಗಿ ಕಾಣಬಹುದು. ಬಡವರು ಮತ್ತು ಅಶಕ್ತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ನ್ಯಾ. ಶಾಂತನಗೌಡರ್‌, ಜನರ ಬದುಕು ಮತ್ತು ಸ್ವಾತಂತ್ರ್ಯದ ಬಗ್ಗೆ ಹೆಚ್ಚು ಆಸ್ಥೆವಹಿಸುತ್ತಿದ್ದರು” ಎಂದು ಹೇಳಿದರು.

"ವಿಚಾರಣೆಗೆ ಸರ್ವ ಸನ್ನದ್ಧವಾಗಿ ಬರುತ್ತಿದ್ದರು. ಕಾನೂನು ತಿಳಿವಳಿಕೆ ಅವರಲ್ಲಿ ಅಪಾರವಾಗಿತ್ತು. ಅನಾರೋಗ್ಯದ ನಡುವೆಯೂ ವಿಚಾರಣೆಗೆ ಹಾಜರಾಗುತ್ತಿದ್ದರು. ಆರೋಗ್ಯದ ಬಗ್ಗೆ ಗಮನಕೊಡಿ ಎಂದರು ಕೇಳುತ್ತಿರಲಿಲ್ಲ. ಕೊನೆಯವರೆಗೂ ಅವರ ಕರ್ತವ್ಯ ಬದ್ಧತೆ ಬದಲಾಗಲಿಲ್ಲ. ನ್ಯಾ. ಶಾಂತನಗೌಡರ್‌ ಅವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇಶದ ಅತ್ಯುನ್ನತ ವೈದ್ಯರನ್ನೆಲ್ಲರೂ ಸಂಪರ್ಕಿಸುವ ಪ್ರಯತ್ನ ಮಾಡಿದೆವು. ಅವರ ಪುತ್ರ ಶಿವಪ್ರಸಾದ್‌ ಕೊನೆಯವರೆಗೂ ಅವರನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿದರು. ಆದರೆ, ಅದು ಫಲ ನೀಡಲಿಲ್ಲ" ಎಂದರು.

ನ್ಯಾ. ಶಾಂತನಗೌಡರ್‌ ಹೆಸರು ಶಾಶ್ವತಗೊಳಿಸಲು ಕ್ರಮ: ಬೊಮ್ಮಾಯಿ

“ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್‌ ಬದುಕು, ಸಾಧನೆ, ಅವರ ತೀರ್ಪುಗಳು, ನ್ಯಾಯದಾನದ ಕುರಿತ ಅವರ ವಿಚಾರಗಳನ್ನು ಶಾಶ್ವತಗೊಳಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ” ಎಂದು ನುಡಿದರು.

“ಅವಿಭಜಿತ ಧಾರವಾಡ ಜಿಲ್ಲೆಯ ಗ್ರಾಮೀಣ ಹಿನ್ನೆಲೆಯಿಂದ ಬಂದ ನ್ಯಾಯಮೂರ್ತಿ ಶಾಂತನಗೌಡ ಅವರು ಅತ್ಯುನ್ನತ ಹುದ್ದೆಗೇರಿದರೂ ತಮ್ಮ ಸರಳತೆ, ಸೌಜನ್ಯದ ನಡವಳಿಕೆಯನ್ನು ಕಾಯ್ದುಕೊಂಡಿದ್ದರು. ಸಮಾಜದಲ್ಲಿ ಜೀವಂತವಾಗಿರುವ ಹಾಗೂ ಜೀವಂತಿಕೆ ಇರುವ ವ್ಯಕ್ತಿಗಳೆಂಬ ಎರಡು ವರ್ಗಗಳಿವೆ. ನ್ಯಾಯಮೂರ್ತಿ ಶಾಂತನಗೌಡರು ಜೀವಂತಿಕೆಯುಳ್ಳ ವ್ಯಕ್ತಿಯಾಗಿದ್ದರು. ಜೊತೆಗಿದ್ದವರಲ್ಲೂ ಜೀವಂತಿಕೆ ಮೂಡುವಂತೆ ಮಾಡುತ್ತಿದ್ದರು. ಧಾರವಾಡದಲ್ಲಿ ವಕೀಲರಾಗಿದ್ದಾಗಲೇ ಅವರು ನನಗೆ ಪರಿಚಿತರು. ನಮ್ಮ ತಂದೆ ಮತ್ತು ಅವರ ತಂದೆ ಸ್ನೇಹಿತರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದಾಗಲೂ ಅದೇ ಆತ್ಮೀಯತೆ, ಸರಳತೆಯನ್ನು ಉಳಿಸಿಕೊಂಡಿದ್ದರು” ಎಂದು ನೆನಪಿಸಿಕೊಂಡರು.

“ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಹೊಂದಿದಾಗ ಅವಿಭಜಿತ ಧಾರವಾಡ ಜಿಲ್ಲೆಯ ವಕೀಲರ ಸಂಘಗಳಿಗೆ ಭೇಟಿ ನೀಡಿ, ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ತಮ್ಮ ಹಳೆಯ ಸಹೋದ್ಯೋಗಿಗಳೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿ, ಬಂದಿದ್ದರು. ಹೀಗೆ ಉನ್ನತ ಹುದ್ದೆಗೇರಿದ್ದರೂ ತಮ್ಮ ಬೇರನ್ನು ಮರೆಯದ ವಿಶಿಷ್ಟ ವ್ಯಕ್ತಿತ್ವ ಅವರದಾಗಿತ್ತು” ಎಂದು ಸ್ಮರಿಸಿದರು.

“ತಮ್ಮ ಭಾಗದಿಂದ ಬಂದ ಜನರನ್ನು ಅವರದೇ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು. ಆ ಮೂಲಕ ಅವರಿಗೆ ಹೊಂದಾಣಿಕೆ ಕಷ್ಟವಾಗದಂತೆ ಮಾಡುತ್ತಿದ್ದರು. ‘ಸಾಧಕನಿಗೆ ಸಾವು ಅಂತ್ಯವಲ್ಲ’ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ನ್ಯಾಯಮೂರ್ತಿ ಶಾಂತನಗೌಡರು ನಮ್ಮೆಲ್ಲರ ಮನದಲ್ಲಿ ಚಿರಾಯುವಾಗಿದ್ದಾರೆ” ಎಂದು ಹೇಳಿದರು.

ಶಾಂತ ಮೂರ್ತಿ ಶಾಂತನಗೌಡರ್‌

ಇದಕ್ಕೂ ಮುನ್ನ ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌ ಅಬ್ದುಲ್‌ ನಜೀರ್‌ ಅವರು “ನನ್ನ ಮತ್ತು ಶಾಂತನಗೌಡರ್‌ ಸ್ನೇಹ ತುಂಬ ಹಳೆಯದು. 2003 ಮೇ 12ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಒಟ್ಟಿಗೇ ನೇಮಕಗೊಂಡಿದ್ದೆವು. 2004ರ ಸೆಪ್ಟೆಂಬರ್‌ 24ರಂದು ಇಬ್ಬರೂ ಒಟ್ಟಿಗೆ ಕರ್ನಾಟಕನ ಕಾಯಂ ನ್ಯಾಯಮೂರ್ತಿಗಳಾದೆವು. ಬಳಿಕ ಅವರು ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾದರು. ಇಬ್ಬರೂ ಒಟ್ಟಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ 2017ರ ಫೆಬ್ರವರಿ 17ರಂದು ಪದೋನ್ನತಿಗೊಂಡಿದ್ದೆವು. ಹಲವು ಬಾರಿ ಒಟ್ಟಿಗೆ ಪೀಠ ಹಂಚಿಕೊಂಡಿದ್ದೇವೆ. ಶಾಂತನಗೌಡರ್‌ ಅತ್ಯಂತ ಶಾಂತಿಯುತವಾಗಿರುತ್ತಿದ್ದರು. ಅದಕ್ಕೆ ಶಾಂತಮೂರ್ತಿ ಶಾಂತನಗೌಡರ್‌ ಎನ್ನುತ್ತಿದ್ದೆವು” ಎಂದು ಸ್ಮರಿಸಿದರು.

“ಶಾಂತನಗೌಡರ್‌ ಅವರ ತೀರ್ಪುಗಳಲ್ಲಿ ಘನತೆ ಮತ್ತು ಮಾನವೀಯತೆ ಹೇರಳವಾಗಿ ಕಾಣಸಿಗುತ್ತದೆ. ಇದೇ ಕಾರಣಕ್ಕೆ ಏನೋ ಮಕ್ಕಳು ಕೈಬರಹದಲ್ಲಿ ಧನ್ಯವಾದ ಪತ್ರ ಬರೆದ ಇಬ್ಬರು ನ್ಯಾಯಮೂರ್ತಿಗಳಲ್ಲಿ ಶಾಂತನಗೌಡರ್‌ ಸಹ ಒಬ್ಬರು. ಮತ್ತೊಬ್ಬರು ನ್ಯಾ. ಕುರಿಯನ್‌ ಜೋಸೆಫ್‌” ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರು”ಶಾಂತನಗೌಡರ್‌ ಅವರ ಅಗಲಿಕೆ ಅವರ ಕುಟುಂಬಕ್ಕಷ್ಟೇ ಅಲ್ಲ ಇಡೀ ನ್ಯಾಯಾಂಗ ಸಮುದಾಯಕ್ಕೆ ತುಂಬಲಾರದ ನಷ್ಟ” ಎಂದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಹಾಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರು “ಏಪ್ರಿಲ್‌ 24ರಂದು ಅಕಾಲಿಕವಾಗಿ ಸಾವನ್ನಪ್ಪಿದ ನ್ಯಾ. ಶಾಂತನಗೌಡರ್‌ ಅವರ ನಿಧನದ ಸುದ್ದಿ ತಿಳಿದು ಇಡೀ ನ್ಯಾಯಾಂಗ ಸಮುದಾಯವೇ ಶಾಕ್‌ ಆಗಿತ್ತು. ಅಳುಕು ಆತಂಕ ಹೊಂದಿರದ ನ್ಯಾಯಮೂರ್ತಿ ಎಂದು ಹೆಸರು ಗಳಿಸಿದ್ದ ಅವರು ವೈಯಕ್ತಿಕ ಸ್ವಾತಂತ್ರ್ಯ‌ ಎತ್ತಿ ಹಿಡಿಯುವಲ್ಲಿ ಅಗ್ರಗಣ್ಯರಾಗಿದ್ದರು. ನ್ಯಾ. ಶಾಂತನಗೌಡರ್‌ ಅವರನ್ನು ಬೆಂಗಳೂರಿನ ಮೆಟ್ರೋಪಾಲಿಟನ್‌ ನ್ಯಾಯಾಲಯ ಉದ್ಘಾಟನೆಯ ಸಂದರ್ಭದಲ್ಲಿ ಮೊದಲಿಗೆ ಭೇಟಿ ಮಾಡಿದ್ದೆ. ಅನಾರೋಗ್ಯದಿಂದ ಬಳಲಿದ್ದ ಅವರು ಕಾರ್ಯಕ್ರಮವೊಂದರಲ್ಲಿ ಭಾಷಣ ಓದಲು ನ್ಯಾ. ಸತೀಶ್‌ ಚಂದ್ರ ಶರ್ಮಾ ಅವರಿಗೆ ಕೋರುವಂತೆ ನನಗೆ ಮನವಿ ಮಾಡಿದ್ದರು. ಅಂತೆಯೇ ನಾನು ನ್ಯಾ. ಸತೀಶ್‌ ಚಂದ್ರ ಶರ್ಮಾ ಅವರನ್ನು ಕೋರಿದ್ದೆ. ನ್ಯಾ. ಶಾಂತನಗೌಡರ್‌ ಸಹಾಯಕರಾಗಿ ಕೆಲಸ ಮಾಡಿದ್ದ ಸಿಬ್ಬಂದಿಯೊಬ್ಬರು ಈಗ ಸುಪ್ರೀಂ ಕೋರ್ಟ್‌ನಲ್ಲಿ ನನಗೂ ಸಹಾಯಕರಾಗಿದ್ದಾರೆ. ಆ ಸಿಬ್ಬಂದಿ ನ್ಯಾ. ಶಾಂತನಗೌಡರ್‌ ಅತ್ಯಂತ ಸಹಾನುಭೂತಿ ಹೊಂದಿದ್ದರು ಎಂದು ಹೇಳಿದರು” ಎಂದು ಸ್ಮರಿಸಿದರು.

ಕಂಡೇಬಾಗೂರಿನಿಂದ ಸುಪ್ರೀಂಕೋರ್ಟ್‌ವರೆಗೆ…

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು “ನ್ಯಾ. ಶಾಂತನಗೌಡರ್‌ ಅವರ ಮುಂದೆ ವಕೀಲೆಯಾಗಿ ವಾದ ಮಾಡಿದ್ದೇನೆ. ಕಿರಿಯ ಸಹೋದ್ಯೋಗಿಯಾಗಿ ಅವರ ಜೊತೆ ಕೆಲಸ ಮಾಡಿದ್ದೇನೆ. ನಮ್ಮಂಥ ಕಿರಿಯರಿಗೆ ಸಾಕಷ್ಟು ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದ್ದರು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೀಕಿನ ಕಂಡೇಬಾಗೂರು ಎಂಬ ಪುಟ್ಟ ಗ್ರಾಮದಿಂದ ಸುಪ್ರೀಂ ಕೋರ್ಟ್‌ವರೆಗಿನ ಅವರ ಪಯಣ ಅಸಾಧಾರಣ” ಎಂದು ನೆನೆದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು “ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಮಾಣ ಸಮಾರಂಭ (ಕಾನ್ವೊಕೇಷನ್‌) ನಿಗದಿಯಾಗಿತ್ತು. ಅದಕ್ಕೂ ಒಂದು ದಿನ ಮುಂಚಿತವಾಗಿ ಕೊರೊನಾದಿಂದಾಗಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ದೆಹಲಿಯಿಂದ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ನ್ಯಾ. ಶಾಂತನಗೌಡರ್‌ ಅವರು ನಾಲ್ಕು ವರ್ಷಗಳ ಬಳಿಕ ಸಮಾರಂಭ ನಡೆಯುತ್ತಿದೆ. ಏನಾದರೂ ವ್ಯವಸ್ಥೆ ಮಾಡಿ. ಸಾವಿರಾರು ಮಕ್ಕಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು. ನಾನು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ವಿಷಯ ತಿಳಿಸಿ ಕಾರ್ಯಕ್ರಮ ನಡೆಯಲು ಸಹಕರಿಸಿದೆ. ಇದರಿಂದ ಖುಷಿಗೊಂಡಿದ್ದ ನ್ಯಾ. ಶಾಂತನಗೌಡರ್‌ ಅವರು ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಮಗದೊಮ್ಮೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವ ಸುಯೋಗ ನನಗೆ ಒದಗಿಬಂದಿತ್ತು. ಆದರೆ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗದ ನೋವು ನನ್ನನ್ನು ಇಂದಿಗೂ ಕಾಡುತ್ತದೆ” ಎಂದು ಬೇಸರಿಸಿದರು.

ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರು “ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನ್ಯಾ. ಶಾಂತನಗೌಡರ್‌ ಅವರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ತಮ್ಮ ತೀರ್ಪುಗಳ ಮೂಲಕ ಗಮನಸೆಳೆದಿದ್ದರು. ಒಮ್ಮೆ ಅವರ ಭಾಷಣವನ್ನು ಓದುವ ಅವಕಾಶ ನನಗೆ ಲಭ್ಯವಾಗಿತ್ತು” ಎಂದರು.

Also Read
ನಮ್ಮದು ವಸಹಾತುಶಾಹಿ ಕಾಲದ ಕಾನೂನು ವ್ಯವಸ್ಥೆ, ನ್ಯಾಯದಾನ ವ್ಯವಸ್ಥೆಯ ಭಾರತೀಕರಣ ಸದ್ಯದ ತುರ್ತು: ಸಿಜೆಐ ಎನ್‌ ವಿ ರಮಣ

ಎರಡು ಬಾರಿ ಕೆಎಸ್‌ಬಿಸಿ ಅಧ್ಯಕ್ಷರು

ಕೆಎಸ್‌ಬಿಸಿ ಅಧ್ಯಕ್ಷ ಎಲ್‌ ಶ್ರೀನಿವಾಸ್‌ ಬಾಬು ಅವರು “ಎರಡು ಬಾರಿ ಕೆಎಸ್‌ಬಿಸಿ ಅಧ್ಯಕ್ಷರಾಗಿದ್ದ ಅವರು ವಕೀಲರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಮೊದಲಿಗೆ ಧಾರವಾಡದಲ್ಲಿ ವಕೀಲ ಐ ಜಿ ಹಿರೇಗೌಡರ್‌ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ನ್ಯಾ. ಶಾಂತನಗೌಡರ್‌ ಅವರಲ್ಲಿನ ಅಸಾಧಾರಣ ಪ್ರತಿಭೆಯನ್ನು ಮನಗಂಡಿದ್ದ ಹಿರೇಗೌಡರ್‌ ಬೆಂಗಳೂರಿಗೆ ತೆರಳುವಂತೆ ಸಲಹೆ ಮಾಡಿದ್ದರು. ಅದರಂತೆ ಬೆಂಗಳೂರಿಗೆ ಪಯಣಿಸಿದ್ದ ಅವರು ಮುಂದೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದ ಹಿರಿಯ ವಕೀಲ ಶಿವರಾಜ್‌ ಪಾಟೀಲ್‌ ಅವರ ಬಳಿ ಪ್ರಾಕ್ಟೀಸ್‌ ಮಾಡಿದ್ದರು. ಆನಂತರ ಸ್ವತಂತ್ರವಾಗಿ ಪ್ರಾಕ್ಟೀಸ್‌ ಮಾಡಿ, ಹಂತಹಂತವಾಗಿ ಮೇಲೆ ಬಂದ ಅವರು 2003ರಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಆನಂತರ ಹಿಂದೆ ನೋಡಿದ್ದೇ ಇಲ್ಲ. ಎಷ್ಟೇ ಎತ್ತರಕ್ಕೆ ಬೆಳೆದರೂ ಸರಳತೆ, ಸಜ್ಜನಿಕೆಯಿಂದ ವಿಮುಖರಾಗಿರಲಿಲ್ಲ. ಹೈಕೋರ್ಟ್‌ ಧಾರವಾಡ ಪೀಠ ಅಸ್ತಿತ್ವಕ್ಕೆ ಬರುವಲ್ಲಿ ನ್ಯಾ. ಶಾಂತನಗೌಡರ್‌ ಅವರ ಪಾತ್ರ ಸ್ಮರಣೀಯ” ಎಂದರು.

"ತಂತ್ರಜ್ಞಾನದ ಬಗ್ಗೆ ಅರಿಯಲು ಸಾಕಷ್ಟು ಉತ್ಸುಕತೆಯನ್ನು ನ್ಯಾ. ಶಾಂತನಗೌಡರ್‌ ಹೊಂದಿದ್ದರು. ರೈತರು ದೇಶದ ಬೆನ್ನೆಲುಬು ಎಂದು ನಂಬಿದ್ದ ಅವರು ಕೃಷಿಕರ ಪರವಾದ ತೀರ್ಪುಗಳನ್ನು ನೀಡಿದ್ದಾರೆ. ಸರಳತೆಯನ್ನು ರೂಢಿಸಿಕೊಂಡಿದ್ದ ಅವರು ಜನರಿಗೆ ಸಹಾಯ ಮಾಡುವುದರಲ್ಲಿ ಸಂತೋಷ ಕಾಣುತ್ತಿದ್ದರು" ಎಂದರು.

ನ್ಯಾ. ಶಾಂತನಗೌಡರ್‌ ಅವರ ಪುತ್ರ ಶಿವಪ್ರಸಾದ್‌ ಮಾತನಾಡಿ "ನನ್ನ ತಂದೆಯೇ ನನ್ನ ಹೀರೊ. ಏನಾದರೂ ಬರಲಿ ನಾನು ನಿನ್ನೊಂದಿಗೆ ಇರುತ್ತೇನೆ. ಭರವಸೆ ಕಳೆದುಕೊಳ್ಳಬೇಡ ಎಂದು ಹೇಳುತ್ತಿದ್ದರು" ಎಂದರು. ನ್ಯಾ. ಶಾಂತನಗೌಡರ್‌ ಅವರ ಪತ್ನಿ ಸುನೀತಾ, ಪುತ್ರಿ ಪೂಜಾ ಮತ್ತಿತರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com