ಪ್ರಜ್ವಲ್‌ಗೆ ಜೀವನ ಪರ್ಯಂತ ಸೆರೆವಾಸ: ಧರ್ಮವನ್ನು ನಾಶಪಡಿಸುವವರೇ ನಾಶವಾಗುತ್ತಾರೆ ಎಂದ ವಿಶೇಷ ನ್ಯಾಯಾಲಯ

ಡಿಎನ್‌ಎ ವಿಶ್ಲೇಷಣಾ ವರದಿ ರೂಪದಲ್ಲಿ ತಜ್ಞರು ಸೂಕ್ತವಾದ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದು, ಸಂತ್ರಸ್ತೆಯ ಸೀರೆ, ಇತರೆ ಉಡುಪುಗಳ ಮೇಲೆ ದೊರೆತಿರುವ ಕಲೆಗಳು ಪ್ರಜ್ವಲ್‌ ವಂಶವಾಹಿಗೆ ಹೊಂದಿಕೆಯಾಗಿವೆ ಎಂದಿರುವ ನ್ಯಾಯಾಲಯ.
Prajwal Revanna
Prajwal Revanna
Published on

ಮನೆಕೆಲಸದ ಮಹಿಳೆಯ ಮೇಲಿನ ಪದೇಪದೇ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಶನಿವಾರ ಜೀವನ ಪರ್ಯಂತ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು “ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಯಾರು ಅದನ್ನು ನಾಶಪಡಿಸಲು ಯತ್ನಿಸುತ್ತಾರೋ ಅವರೇ ನಾಶವಾಗುತ್ತಾರೆ” ಎಂದು ಹೇಳಿದೆ.

ವಿಶೇಷ ತನಿಖಾ ದಳವು (ಎಸ್‌ಐಟಿ) ವೈಜ್ಞಾನಿಕ ವಿಧಾನದ ಮೂಲಕ ತನಿಖೆ ನಡೆಸಿದ ರಾಜ್ಯದ ಮೊದಲ ಪ್ರಕರಣ ಇದೇ ಎನಿಸುತ್ತದೆ ಎಂದು ಸುದೀರ್ಘವಾದ 480 ೪೮೦ ಪುಟಗಳ ತೀರ್ಪಿನಲ್ಲಿ ವಿಶೇಷ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಹೇಳಿದ್ದಾರೆ.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

ತೀರ್ಪಿನ ಪ್ರಮುಖಾಂಶಗಳು ಇಂತಿವೆ:

  1. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಯಾರು ಅದನ್ನು ನಾಶಪಡಿಸಲು ಯತ್ನಿಸುತ್ತಾರೋ ಅವರೇ ನಾಶವಾಗುತ್ತಾರೆ. ಹೀಗಾಗಿ, ನಾವು ಧರ್ಮವನ್ನು ನಾಶಪಡಿಸಬಾರದು. ಹಾಗೆ ಮಾಡುವುದರಿಂದ ನಾವು ನಾಶ ಹೊಂದುವುದಿಲ್ಲ ಎಂದು ನ್ಯಾಯಮೂರ್ತಿ ಡಾ. ಎಂ ರಾಮ ಜೋಯಿಷ್‌ ಅವರು ರಾಜನೀತಿಯಲ್ಲಿ ಹೇಳಿರುವ ವಿಚಾರಗಳನ್ನು ಪೀಠ ಪ್ರಸ್ತಾಪಿಸಿದೆ.

  2. ಬೃಹದರಣ್ಯಕ ಉಪನಿಷತ್‌ನಲ್ಲಿನ ಅಂಶವನ್ನು ಉಲ್ಲೇಖಿಸಿರುವ ನ್ಯಾಯಾಲಯವು ಕಾನೂನು (ಧರ್ಮ) ರಾಜರ ರಾಜ. ಯಾರೂ ಕಾನೂನಿಗಿಂತ (ಧರ್ಮ) ಮಿಗಿಲಲ್ಲ; ರಾಜನ ಶಕ್ತಿಯ ನೆರವು ಹೊಂದಿರುವ ಕಾನೂನು (ಧರ್ಮ) ಬಲಿಷ್ಠರಿಂದ ಬಡವರನ್ನು ರಕ್ಷಿಸುತ್ತದೆ. ನಾಗರಿಕ ಸಮಾಜದಲ್ಲಿ ಯಾವುದೇ ರೀತಿಯ ಅತ್ಯಾಚಾರವು ಹೇಸಿಗೆಯಾಗಿದ್ದು, ಇದು ಸಂತ್ರಸ್ತೆಗೆ ಆಕೆಯ ಸಾಮಾನ್ಯ ಜೀವನವನ್ನು ನಿರಾಕರಿಸುತ್ತದೆ. ಹಾಲಿ ಪ್ರಕರಣದಲ್ಲಿ ದೇಶಾದ್ಯಂತ ಅಶ್ಲೀಲ ವಿಡಿಯೋಗಳು ಹಂಚಿಕೆಯಾಗಿದ್ದು, ಹಲವಾರು ಜನರು ಅವುಗಳನ್ನು ವೀಕ್ಷಿಸಿದ್ದಾರೆ. ಈ ದುಷ್ಕೃತ್ಯದಿಂದ ಸಂತ್ರಸ್ತೆಯ ಅಪಾರ ಯಾತನೆ ಅನುಭವಿಸುವಂತಾಗಿದೆ. ಸಾಮಾಜಿಕ ಸುವ್ಯವಸ್ಥೆ ಮತ್ತು ಘಾತಕ ಶಕ್ತಿಗಳು ಸಮಾಜದ ಸಂರಚನೆಯನ್ನು ನಾಶಪಡಿಸುತ್ತವೆ. ಕಾನೂನು ಅದರ ವಿರುದ್ಧ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ.

  3. ವಂಶವಾಹಿ (ಡಿಎನ್‌ಎ) ವಿಶ್ಲೇಷಣಾ ವರದಿ ರೂಪದಲ್ಲಿ ತಜ್ಞರು ಸೂಕ್ತವಾದ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದು, ಸಂತ್ರಸ್ತೆಯ ಸೀರೆ ಮತ್ತು ಇತರೆ ಉಡುಪುಗಳ ಮೇಲೆ ದೊರೆತಿರುವ ಕಲೆಗಳು ಪ್ರಜ್ವಲ್‌ ರೇವಣ್ಣ ಅವರ ವಂಶವಾಹಿಗೆ ಹೊಂದಿಕೆಯಾಗಿವೆ. ದೇಶಾದ್ಯಂತ ಹಂಚಿಕೆಯಾಗಿರುವ ಡಿಜಿಟಲ್‌ ರೂಪದಲ್ಲಿರುವ ಅಶ್ಲೀಲ ವಿಡಿಯೊಗಳನ್ನು ತಿರುಚಲಾಗಿಲ್ಲ. ವಿಡಿಯೊದಲ್ಲಿರುವ ಮಹಿಳೆ ಮತ್ತು ಪುರುಷರ ಧ್ವನಿಯು ಪ್ರಜ್ವಲ್‌ ಮತ್ತು ಸಂತ್ರಸ್ತೆ ಧ್ವನಿಗೆ ಹೊಂದಿಕೆಯಾಗಿರುವುದರಿಂದ ಅನುಮಾನಕ್ಕೆ ಆಸ್ಪದವಿಲ್ಲದೇ ಪ್ರಾಸಿಕ್ಯೂಷನ್‌ ಕೃತ್ಯವನ್ನು ಸಾಬೀತುಪಡಿಸಿದೆ.

  4. ಬಲವಂತವಾಗಿ ಸಂಭೋಗ ನಡೆಸುವಾಗ ಪ್ರಜ್ವಲ್‌ ರೇವಣ್ಣ ಮಾಡಿರುವ ವಿಡಿಯೋ ಸಹ ಅಸಲಿ ಎಂಬುದನ್ನು ಪ್ರಾಸಿಕ್ಯೂಷನ್‌ ಯಾವುದಕ್ಕೂ ಅನುಮಾನವಿಲ್ಲದಂತೆ ಸಾಬೀತುಪಡಿಸಿದೆ. ಪ್ರಾಸಿಕ್ಯೂಷನ್‌ ಸಾಕ್ಷಿ ಕಾರ್ತಿಕ್‌ (ಪ್ರಜ್ವಲ್‌ ಮಾಜಿ ಕಾರು ಚಾಲಕ) ತಮ್ಮ ವಿವೊ ಮೊಬೈಲ್‌ಗೆ ಆನಂತರ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಜೆ4 ಮೊಬೈಲ್‌ಗೆ ವರ್ಗಾಯಿಸಿದ್ದಾರೆ ಎಂಬುದು ದೃಢವಾಗಿದೆ.

  5. ಸಂತ್ರಸ್ತೆ ಮತ್ತು ಪ್ರಜ್ವಲ್‌ ಅವರ ಆರ್ಥಿಕ ಪರಿಸ್ಥಿತಿಯನ್ನು ನ್ಯಾಯಾಲಯ ಪರಿಗಣಿಸಿದ್ದು, ಸಂತ್ರಸ್ತೆಯು ಬಡ ದಿನಗೂಲಿ ಕಾರ್ಮಿಕಳಾಗಿದ್ದು, ಈ ದುಷ್ಕೃತ್ಯದಿಂದ ಆಕೆ ಯಾತನೆ ಅನುಭವಿಸುವಂತಾಗಿದೆ. ಇದರಿಂದ ಆಕೆಯು ಪುರುಷ ಪ್ರಧಾನವಾದ ಸಮಾಜದಲ್ಲಿ ದಿನಗೂಲಿ ಗಳಿಸಿಕೊಳ್ಳುವುದು ಕಷ್ಟಕರವಾಗಿದೆ. ಅಪಾರ ಯಾತನೆಗೆ ಗುರಿಯಾಗಿರುವ ಆಕೆಗೆ ಇಂಥ ಸಂದರ್ಭದಲ್ಲಿ ವಿಸ್ತೃತ ನೆಲೆಯಲ್ಲಿ ಸೂಕ್ತ ಪರಿಹಾರ ಕೊಡಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಪ್ರಜ್ವಲ್‌ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿರುವುದರಿಂದ ಪರಿಹಾರ ನೀಡುವ ಹೊಣೆಯನ್ನು ಸರ್ಕಾರದ ಹೆಗಲ ಮೇಲೆ ಹಾಕಬೇಕಿಲ್ಲ ಎಂದು ನ್ಯಾಯಾಲಯ ಹೇಳಿದೆ.

  6. ಅಧಿಕಾರ ಸವಿಯುತ್ತಿರುವ ಸಂದರ್ಭದಲ್ಲಿ ಪ್ರಜ್ವಲ್‌ ವಿರುದ್ಧ ಆರೋಪ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಯ ವಿರುದ್ಧದ ಆರೋಪ ಪ್ರಶ್ನೆಯು ಗಂಭೀರ ವಿಚಾರವಾಗಿದ್ದು, ಸಮಾಜ ಬದಲಾಯಿಸಲಾಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಂಡು ಸಮಾಜ ಶಾಸನಸಭೆಯತ್ತ ನೋಡುತ್ತದೆ. ಜನರ ಕಲ್ಯಾಣಕ್ಕಾಗಿ ಕಾನೂನು ಮಾಡುವ ಅತ್ಯುನ್ನತ ಅಧಿಕಾರ ಹೊಂದಿರುವವರು ಚುನಾಯಿತ ಪ್ರತಿನಿಧಿಗಳಾಗಿದ್ದಾರೆ.

  7. ಮಹಿಳೆಗೆ ಆಕೆಯ ಘನತೆಯು ಅತ್ಯಂತ ಮೌಲ್ಯಯುತವಾದ ಆಭರಣವಾಗಿದ್ದು, ಅದನ್ನು ಆಕೆ ಸಾಯುವವರೆಗೂ ಕಾಯುತ್ತಾಳೆ. ಲೈಂಗಿಕ ಕಿರುಕುಳದಿಂದ ನೊಂದಿರುವವರ ಕುರಿತು ಉಡಾಫೆಯ ಹೇಳಿಕೆ ನೀಡುವವರ ಕುರಿತು ಸುಪ್ರೀಂ ಕೋರ್ಟ್‌ ಅತ್ಯಂತ ಗಂಭೀರ ನಿಲುವು ಕೈಗೊಂಡಿದೆ.

  8. ನನ್ನ ದೃಷ್ಟಿಯಲ್ಲಿ ಪದೇಪದೇ ಸಂತ್ರಸ್ತೆಯ ಜೊತೆ ಬಲವಂತವಾಗಿ ಸಂಭೋಗ ನಡೆಸುವುದು ಕೊಲೆಗಿಂತಲೂ ಹೇಯ ಪಾತಕ ಕೃತ್ಯವಾಗಿದೆ. ಕೊಲೆ ನಡೆದರೆ ವ್ಯಕ್ತಿ ಒಮ್ಮೆ ಸಾಯುತ್ತಾನೆ. ಆದರೆ, ಲೈಂಗಿಕ ಕೃತ್ಯವಾದ ಅತ್ಯಾಚಾರದಂಥ ಪ್ರಕರಣದಲ್ಲಿ ಆಕೆಯ ಜೀವನದುದ್ದಕ್ಕೂ ನರಳುವಂತಾಗುತ್ತದೆ. ಇದರಿಂದ ಆಕೆ ಪ್ರತಿಯೊಂದು ಕ್ಷಣದಲ್ಲೂ ಯಾತನೆ ಅನುಭವಿಸುವಂತಾಗುತ್ತದೆ. ಸಮಾಜದಲ್ಲಿ ಮನೆಕೆಲಸದವರು ಮತ್ತು ಇತರೆ ಮಹಿಳೆಯರನ್ನು ಉಪೇಕ್ಷೆಯಿಂದ ಕಂಡು, ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಅವರ ಮೇಲೆ ಲೈಂಗಿಕ ಅಪರಾಧ ಎಸಗುವುದು ದುಷ್ಕೃತ್ಯವಾಗಿದ್ದು, ಅದನ್ನು ಅಷ್ಟು ಸುಲಭವಾಗಿ ಬದಿಗೆ ಸರಿಸಲಾಗದು ಮತ್ತು ಅಂಥ ನಡತೆಯನ್ನು ಸಾಮಾನ್ಯ ಎಂದು ಪರಿಗಣಿಸಲಾಗದು.

  9. ಆರೋಪಿಯ ಕೃತ್ಯವನ್ನು ಹಾಲಿ ಪ್ರಕರಣದಲ್ಲಿ ವಿಸ್ತೃತ ನೆಲೆಯಲ್ಲಿ ಸಮಾಜವನ್ನು ಮುಖ್ಯ ಸಂತ್ರಸ್ತೆ ಎಂದು ಪರಿಗಣಿಸಬೇಕಿದೆ.

  10. ಅಧಿಕಾರಸ್ಥರು ಮತ್ತು ಬಲಾಢ್ಯರು ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಅತ್ಯಂತ ಉದಾಹರಣೆಯಾಗುವಂಥ ಪ್ರಕರಣ ಇದಾಗಿದ್ದು, ತನ್ನ ಕುಟುಂಬ ಸದಸ್ಯರು ಮತ್ತು ತಾತನನ್ನು (ಎಚ್‌ ಡಿ ದೇವೇಗೌಡ) ನೋಡಿಕೊಳ್ಳಲು ಪ್ರಜ್ವಲ್‌ಗೆ ವಿನಾಯಿತಿ ನೀಡಬೇಕು ಎಂಬುದು ಒಪ್ಪಿತವಲ್ಲ. ಪ್ರಜ್ವಲ್‌ ತಾತನವರು ರಾಜ್ಯಸಭಾ ಸದಸ್ಯರಾಗಿದ್ದು, ಅವರ ತಂದೆ ಎಚ್‌ ಡಿ ರೇವಣ್ಣ ಅವರು ವಿಧಾನ ಸಭೆಯ ಸದಸ್ಯರಾಗಿದ್ದಾರೆ. ಇಲ್ಲಿ ನ್ಯಾಯಾಲಯವು ಸಂತ್ರಸ್ತೆ ಅನುಭವಿಸುತ್ತಿರುವ ಯಾತನೆ ಮತ್ತು ಭೀಕರತೆಯನ್ನು ಪರಿಗಣಿಸಬೇಕಿದ್ದು, ಸಮಾನತೆ ತತ್ವವನ್ನು ನ್ಯಾಯಾಲಯ ಎತ್ತಿ ಹಿಡಿಯಬೇಕಿದೆ.

  11. ನ್ಯಾಯಾಲಯವು ಕ್ರಿಮಿನಲ್‌ ವಿರುದ್ಧವಾಗಿಲ್ಲ. ಬದಲಿಗೆ ಆತನ ಎಸಗಿರುವ ಕ್ರಿಮಿನಲ್‌ ಕೃತ್ಯದ ವಿರುದ್ಧ ಮಾತ್ರ ಇದೆ. ಶಿಕ್ಷೆ ನಿಗದಿಪಡಿಸುವಾಗ ನ್ಯಾಯಾಲಯವು ಅಪರಾಧ ಎಸಗಿರುವ ವಿಧಾನವನ್ನು ಪರಿಗಣಿಸಬೇಕಿದೆ. ಶಿಕ್ಷೆ ಪ್ರಮಾಣ ನಿಗದಿಪಡಿಸುವುದಕ್ಕೆ ನಿರ್ದಿಷ್ಟವಾದ ಕಾಯಿದೆ ಇಲ್ಲ. ಪ್ರಕರಣದಲ್ಲಿನ ಕಾನೂನಿನ ಮಾನದಂಡಗಳನ್ನು ಆಧರಿಸಿ ಶಿಕ್ಷೆ ವಿಧಿಸಲಾಗಿದೆ.

  12. ಅನುಕಂಪ ತೋರುವಂತೆ ಅಪರಾಧಿ ಪ್ರಜ್ವಲ್‌ ಕೋರಿಕೆಯನ್ನು ಒಪ್ಪುಕೊಳ್ಳುವುದು ಸರಿಯಲ್ಲ. ಪ್ರಜ್ವಲ್‌ಗೆ ಏಕೆ ಹೆಚ್ಚು ಶಿಕ್ಷೆ ವಿಧಿಸಬಾರದು ಎಂಬುದಕ್ಕೆ ಯಾವುದೇ ಸಕಾರಣ ನೀಡಿಲ್ಲ.

  13. ಎಸ್‌ಐಟಿಯು ತಜ್ಞರ ನೆರವಿನಿಂದ ತನಿಖೆ ನಡೆಸಿದ್ದು, ಆರೋಪಗಳು ಮತ್ತು ದಾಖಲೆಗಳು ದೊರೆತಿರುವುದನ್ನು ಪರಿಗಣಿಸಿದರೆ ಇದು ಬೇರೆಯದೇ ರೀತಿಯಾದ ಪ್ರಕರಣವಾಗಿದೆ. ಇದರಲ್ಲಿನ ಸಮಾಜದ ಘನತೆಯುತ ಮಹಿಳೆಯರು ಪ್ರಜ್ವಲ್‌ ಜೊತೆಗಿರುವ ಅಶ್ಲೀಲ ವಿಡಿಯೊಗಳು ವೈರಲ್‌ ಆಗಿದ್ದು, ಪ್ರಾಸಿಕ್ಯೂಷನ್‌ ಮುಂದೆ ಅಸಾಮಾನ್ಯ ಕೆಲಸ ಮುಂದಿತ್ತು. ವಿಧಿ ವಿಜ್ಞಾನ ತಜ್ಞರ ನೆರವಿನಿಂದ ಡಿಜಿಟಲ್‌ ಸಾಕ್ಷಿಯ ಸಂಗ್ರಹ ಮತ್ತು ವಿಶ್ಲೇಷಣೆಯ ಕೆಲಸವನ್ನು ಸಮರ್ಥವಾಗಿ ಮಾಡಿರುವ ಎಸ್‌ಐಟಿಯ ಕೆಲಸವನ್ನು ಮೆಚ್ಚಬೇಕಿದೆ. ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಯು ಆಧುನಿಕ ತಂತ್ರಜ್ಞಾನ ವಿಧಾನವನ್ನು ಅಳವಡಿಸಿಕೊಂಡಿದೆ. ಎಸ್‌ಐಟಿಯು ವೈಜ್ಞಾನಿಕ ವಿಧಾನದ ಮೂಲಕ ತನಿಖೆ ನಡೆಸಿದ ರಾಜ್ಯದ ಮೊದಲ ಪ್ರಕರಣ ಇದೇ ಎನಿಸುತ್ತದೆ.

Also Read
ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ: ಅಪರಾಧಿ ಪ್ರಜ್ವಲ್‌ಗೆ ಜೀವನ ಪರ್ಯಂತ ಸೆರೆವಾಸ ವಿಧಿಸಿದ ವಿಶೇಷ ನ್ಯಾಯಾಲಯ
Kannada Bar & Bench
kannada.barandbench.com