
ವಿವಾದದ ಸ್ವರೂಪ ಪಡೆದುಕೊಂಡಿದ್ದ ʼಚುಟಿಯಾರಾಂʼ (CHUTIYARAM) ಹೆಸರನ್ನು ವಾಣಿಜ್ಯ ಚಿಹ್ನೆ ಕಾಯಿದೆ-1999ರ 30ನೇ ವರ್ಗದಡಿ ನೋಂದಣಿ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ದೆಹಲಿ ವಾಣಿಜ್ಯ ಚಿಹ್ನೆ ಕಚೇರಿ ಮಂಗಳವಾರ ಹಿಂಪಡೆದಿದೆ.
ಮಂಗಳವಾರದ ಆದೇಶದಲ್ಲಿ ತಾನು ತಪ್ಪಾಗಿ ಚುಟಿಯಾರಾಂ ಹೆಸರನ್ನು ಒಪ್ಪಿಕೊಂಡಿದ್ದಾಗಿಯೂ ಅದು ಕಾಯಿದೆಯ ಸೆಕ್ಷನ್ 9 ಮತ್ತು 11 ರ ಅಡಿಯಲ್ಲಿ ಆಕ್ಷೇಪಣೆಗಳಿಗೆ ಒಳಪಟ್ಟಿರುವುದಾಗಿಯೂ ಕಚೇರಿ ತಿಳಿಸಿದೆ.
ತಪ್ಪಾಗಿ ಅರ್ಜಿ ಪುರಸ್ಕರಿಸಲಾಗಿತ್ತು. ಟ್ರೇಡ್ ಮಾರ್ಕ್ಸ್ ಕಾಯ್ದೆ, 1999 ರ ಸೆಕ್ಷನ್ 9/11 ರ ಅಡಿಯಲ್ಲಿ ನೋಂದಣಿಗೆ ಅಗತ್ಯವಾದ ಮಾನದಂಡ ಪೂರೈಸದ ಹಿನ್ನೆಲೆಯಲ್ಲಿ ಚಿಹ್ನೆ ನೋಂದಾಯಿಸಿದ್ದಕ್ಕಾಗಿ ರಿಜಿಸ್ಟ್ರಿಗೆ ಆಕ್ಷೇಪಣೆ ಸಲ್ಲಿಸಬಹುದು. ಆದ್ದರಿಂದ ವಾಣಿಜ್ಯ ಚಿಹ್ನೆ ನಿಯಮಾವಳಿ- 2017ರ ನಿಯಮ 38 ರೊಂದಿಗೆ ಸಹವಾಚನ ಮಾಡಲಾದ ಕಾಯಿದೆಯ ಸೆಕ್ಷನ್ 19ರ ಪ್ರಕಾರ ಅರ್ಜಿ ಪುರಸ್ಕರಿಸಿರುವುದನ್ನು ಹಿಂಪಡೆಯಲು ರಿಜಿಸ್ಟ್ರಾರ್ ಮುಂದಾಗಿದ್ದು ಅರ್ಜಿಯ ಕುರಿತು ವಿಚಾರಣೆ ನಿಗದಿಪಡಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ಚುಟಿಯಾರಾಂ ಹೆಸರನ್ನು ಎರಡು ವಾರಗಳ ಹಿಂದೆ ಅಂಗೀಕರಿಸಿತ್ತು. ಹೆಸರು ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ (ವ್ಯಾಪಾರ ಚಿಹ್ನೆ ಪತ್ರಿಕೆ) ಪ್ರಕಟವಾದ ಒಂದು ದಿನದ ಬಳಿಕ ತನ್ನ ನಿರ್ಧಾರ ಹಿಂಪಡೆದಿದೆ.
ಅರ್ಜಿಯನ್ನು ಪುರಸ್ಕರಿಸಿರುವುದು ಕಚೇರಿಯ ಅನುಮೋದನಾ ಪ್ರಕ್ರಿಯೆ ಮತ್ತು ಸಂಭಾವ್ಯ ಕಾನೂನು ಪರಿಣಾಮಗಳ ಬಗ್ಗೆ ಬೌದ್ಧಿಕ ಆಸ್ತಿ ಕಾನೂನು ವೃತ್ತಿಪರರಲ್ಲಿ ಚರ್ಚೆ ಹುಟ್ಟು ಹಾಕಿತ್ತು.
ಮಾರ್ಚ್ 4ರಂದು ಹಿರಿಯ ವಾಣಿಜ್ಯ ಚಿಹ್ನೆ ಪರೀಕ್ಷಕ ಬಾಲಾಜಿ ಅವರು ಹೊರಡಿಸಿದ ಚುಟಿಯಾರಾಂ ಎಂಬುದು ಆದೇಶದಲ್ಲಿ ಚುಟಿ ಮತ್ತು ರಾಮ್ ಎಂಬ ಎರಡು ಮುಕ್ತ ಪದಗಳ ಸಂಯೋಜನೆಯಾಗಿದೆ. ಒಟ್ಟಾರೆಯಾಗಿ ಇಡೀ ಪದಗುಚ್ಛ ವಿಭಿನ್ನವಾಗಿದ್ದು ಅದನ್ನು ಇತರೆ ವಾಣಿಜ್ಯ ಚಿಹ್ನೆಗಳಿಂದ ಪ್ರತ್ಯೇಕವಾಗಿ ಗುರುತಿಸಬಹುದು. ಅಲ್ಲದೆ ಈ ಗುರುತು ಆನ್ವಯಿಕ ಸರಕುಗಳಾದ ಉಪ್ಪಿನ ಅಂಶದ ಖಾದ್ಯಗಳು ಮತ್ತು ಬಿಸ್ಕೆಟ್‌ಗಳಿಗೆ ನೇರವಾಗಿ ಸಂಬಂಧಿಸಿಲ್ಲದೆ ಇರುವುದರಿಂದ 9 ನೇ ಸೆಕ್ಷನ್‌ನಡಿ ಎತ್ತಲಾಗಿದ್ದ ಆಕ್ಷೇಪವನ್ನು ಮನ್ನಿಸಿ ಚಿಹ್ನೆಯನ್ನು ಪುರಸ್ಕರಿಸಲಾಗಿದೆ ಎಂದು ತಿಳಿಸಿತ್ತು.
ಆದರೆ ಅಶ್ಲೀಲ ಅಥವಾ ಸಾರ್ವಜನಿಕ ನೈತಿಕತೆಗೆ ವಿರುದ್ಧವಾದ ಇಲ್ಲವೇ ಧಾರ್ಮಿಕ ಭಾವನೆ ಕೆರಳಿಸುವಂತಹ ವಾಣಿಜ್ಯ ಚಿಹ್ನೆಗಳ ನೋಂದಣಿಯನ್ನು ನಿಷೇಧಿಸುವ ವಾಣಿಜ್ಯ ಚಿಹ್ನೆ ಕಾಯಿದೆಯ ಸೆಕ್ಷನ್ 9(2)(c) ಅಡಿ ಈ ಬ್ರ್ಯಾಂಡ್ ಯಾಕೆ ಪರಿಶೀಲನೆಗೆ ಒಳಪಡಲಿಲ್ಲ ಎಂಬ ಬಗ್ಗೆ ಕಳವಳ ಮೂಡಿತ್ತು.
ನಾಲ್ಕು ವಿಚಾರಣೆಗಳ ನಂತರವೂ ಯಾರೂ ನಿರ್ದಿಷ್ಟ ಚಿಹ್ನೆಯ ಸಂಬಂಧ ಆಕ್ಷೇಪಣೆ ಮಂಡಿಸದೆ ಹೋದ ಕಾರಣ ಗುರುತಿಗೆ ಮಾನ್ಯತೆ ನೀಡಲಾಗಿದೆ ಎಂದು ಆದೇಶ ಹೇಳಿತ್ತು.
ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯ ಜಾಲತಾಣದಲ್ಲಿ ಶೋಧಿಸಿದಾಗ, ಅರ್ಜಿದಾರರಾದ ಸಾಧನಾ ಗೋಸ್ವಾಮಿ ಎಂಬುವರು 'ಚುಟಿಯಾವಾಲೆ' ಮತ್ತು 'ಚುಟಿಯಾಲಾಲ್' ಸಹಿತ ವಿವಿಧ ಚಿಹ್ನೆಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗಳಿಗೆ ಆಕ್ಷೇಪ ವ್ಯಕ್ತವಾಗಿದ್ದು ಆ ಹೆಸರುಗಳನ್ನು ನೀಡಿರಲಿಲ್ಲ.
ಚುಟಿಯಾರಾಂ ವಾಣಿಜ್ಯ ಚಿಹ್ನೆಯು ಆಂಗ್ಲ ಭಾಷೆಯಲ್ಲಿ ಓದಿದಾಗ 'ಟಿ' ಅಕ್ಷರವನ್ನು 'ತಿ' ಎಂದು ಸಹ ಓದಬಹುದಾಗಿದ್ದು ಅದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎನ್ನುವ ಕಾರಣದಿಂದ ವಿವಾದ ಉಂಟಾಗಿತ್ತು.
[ನಿರ್ಧಾರ ಹಿಂಪಡೆದ ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]