

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ಕೇಂದ್ರ ಸರ್ಕಾರ 5 ವರ್ಷಗಳ ಕಾಲ ಹೇರಿದ್ದ ನಿಷೇಧವನ್ನು ಯುಎಪಿಎ ನ್ಯಾಯಮಂಡಳಿ ಶುಕ್ರವಾರ ಎತ್ತಿಹಿಡಿದಿದೆ.
ಕೇಂದ್ರ ಸರ್ಕಾರ ಜುಲೈ 2024 ರಲ್ಲಿ ಎಸ್‌ಎಫ್‌ಜೆ ಸಂಘಟನೆಯನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಿ ನಿಷೇಧ ವಿಧಿಸಿತ್ತು. ನ್ಯಾಯಮಂಡಳಿ ಎತ್ತಿಹಿಡಿಯದಿದ್ದರೆ ಅಂತಹ ನಿಷೇಧ ಜಾರಿಯಾಗುವುದಿಲ್ಲ ಎಂದು ಯುಎಪಿಎ ಕಾಯಿದೆಯ ಸೆಕ್ಷನ್ 4 ಹೇಳುತ್ತದೆ.
ಖಲಿಸ್ತಾನಿ ಭಯೋತ್ಪಾದಕ ಗುಂಪುಗಳಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ ಜೊತೆಗೆ ಮಾತ್ರವಲ್ಲದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜೊತೆಗಿನ ನಂಟೂ ಎಸ್‌ಎಫ್‌ಜೆಗೆ ಇರುವುದನ್ನು ಸಾಕ್ಷ್ಯಾಧಾರಗಳು ಸಾಬೀತುಪಡಿಸಿವೆ ಎಂಬುದಾಗಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಅವರ ನೇತೃತ್ವದ ನ್ಯಾಯಮಂಡಳಿ ತಿಳಿಸಿದೆ.
ಎಸ್‌ಎಫ್‌ಜೆ ಸಾಮಾಜಿಕ ಮಾಧ್ಯಮಗಳ ಮೂಲಕ ನೇಮಕ ಮಾಡಿಕೊಂಡು ಯುವಕರನ್ನು ಸಂಘಟಿಸುತ್ತಿದೆ. ಕಳ್ಳಸಾಗಾಣಿಕೆ ಜಾಲಗಳ ಮೂಲಕ ಭಯೋತ್ಪಾದಕ ಕಾರ್ಯಾಚರಣೆಗಳಿಗೆ ಹಣ ಒದಗಿಸುತ್ತಿದೆ. ಪ್ರಧಾನಿ ಸೇರಿದಂತೆ ಭಾರತೀಯ ನಾಯಕರಿಗೆ ಕೊಲೆ ಬೆದರಿಕೆ ಒಡ್ಡಿದೆ ಎಂದು ಆದೇಶ ತಿಳಿಸಿದೆ.
2019 ಮತ್ತು 2024ರ ನಡುವೆ ಎಸ್‌ಎಫ್‌ಜೆಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2019ರಲ್ಲಿ ಅದನ್ನು ಕಾನೂನುಬಾಹಿರ ಎಂದು ಘೋಷಿಸಲಾಯಿತು. ಆಗ 11 ಎಫ್‌ಐಆರ್‌ಗಳು ಅದರ ವಿರುದ್ಧ ದಾಖಲಾಗಿದ್ದವು. 2024ರ ಹೊತ್ತಿಗೆ ಸಂಘಟನೆ ವಿರುದ್ಧ 122 ಪ್ರಕರಣಗಳು ದಾಖಲಾಗಿವೆ. ಇದು ಐದು ವರ್ಷಗಳಲ್ಲಿ ಅದರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಏರಿಕೆಯಾಗಿರುವುದನ್ನು ಸೂಚಿಸುತ್ತದೆ ಎಂದು ನ್ಯಾಯಾಮಂಡಳಿ ವಿವರಿಸಿದೆ.
ಎಸ್‌ಎಫ್‌ಜೆ ಭಾರತೀಯ ಸೇನೆಯಲ್ಲಿ ಸಿಖ್ ದಂಗೆಗೆ ಕುಮ್ಮಕ್ಕು ನೀಡಿದ್ದಲ್ಲದೆ ಖಲಿಸ್ತಾನಿ ಸಿದ್ಧಾಂತ ಬೆಂಬಲಿಸಿ ವಿಧ್ವಂಸಕ ಕೃತ್ಯಗಳನ್ನು ರೂಪಿಸುತ್ತಿರುವುದು ಕಂಡುಬಂದಿದೆ. ಅದು ವಿದ್ಯುತ್ ಸ್ಥಾವರಗಳು ಮತ್ತು ರೈಲ್ವೇಗಳಂತಹ ನಿರ್ಣಾಯಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದು ಜಿ 20 ಶೃಂಗಸಭೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಧಕ್ಕೆ ತರಲು ಯತ್ನಿಸಿದೆ. ಪ್ರತ್ಯೇಕತಾವಾದಿ ಕಾರ್ಯಸೂಚಿಯನ್ನು ಇನ್ನಷ್ಟು ಹೆಚ್ಚಿಸಲು ಸೈಬರ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲು ಬೆದರಿಕೆಯೊಡ್ಡಲು ಹಾಗೂ ಭಾರತದ ಧ್ವಜ ಸುಡುವ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಪ್ರಚಾರ ನೀಡಲು ಸ್ವಯಂಚಾಲಿತ ಕರೆಗಳು ಮತ್ತು ವಿಡಿಯೋಗಳನ್ನು ಬಳಸಿದೆ ಎಂದು ನ್ಯಾಯಮಂಡಳಿ ತಿಳಿಸಿದೆ.
ಹಿರಿಯ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳನ್ನು ಒಳಗೊಂಡ 52 ಮಂದಿ ನ್ಯಾಯಮಂಡಳಿ ಎದುರು ಸಾಕ್ಷ್ಯ ನುಡಿದಿದ್ದರು. ಇದಲ್ಲದೆ ವಿಡಿಯೋಗಳು, ದಾಖಲೆಗಳು ಹಾಗೂ ಎಸ್‌ಎಫ್‌ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಖುದ್ದು ನೀಡಿರುವ ಹೇಳಿಕೆಗಳನ್ನು ಮಂಡಳಿಯು ಗಮನಿಸಿತು.
ಅಂತೆಯೇ, ಎಸ್‌ಎಫ್‌ಜೆ ಚಟುವಟಿಕೆಗಳು ಭಾರತದ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆಯ ಒಡ್ಡುತ್ತವೆ. ಜೊತೆಗೆ ಯುಎಪಿಎ ಮತ್ತು ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂದು ನಿರ್ಧರಿಸಿರುವ ನ್ಯಾಯಮಂಡಳಿ ಸಂಘಟನೆ ವಿರುದ್ಧ ಸರ್ಕಾರ ವಿಧಿಸಿದ್ದ ನಿಷೇಧವನ್ನು ಎತ್ತಿ ಹಿಡಿದಿದೆ.
ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ಡಿ ಸಂಜಯ್ ಮತ್ತು ವಕೀಲ ರಜತ್ ನಾಯರ್ ವಾದ ಮಂಡಿಸಿದ್ದರು.