ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿಯೊಂದನ್ನು ತಿರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್, ಭಾರತ ಸಂಪ್ರದಾಯವಾದಿ ಸಮಾಜವಾಗಿದ್ದು ಅವಿವಾಹಿತ ಯುವತಿಯರು ವಿವಾಹದ ಭರವಸೆ ಪಡೆಯದ ಹೊರತು ವಿನೋದಕ್ಕಾಗಿ ದೈಹಿಕ ಸಂಪರ್ಕ ಬೆಳೆಸುವುದಿಲ್ಲ ಎಂದು ಹೇಳಿದೆ (ಅಭಿಷೇಕ್ ಚೌಹಾಣ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ).
ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಸುಬೋಧ್ ಅಭಯಂಕರ್ ಅವಿವಾಹಿತ ಹುಡುಗಿಯರು ಕೇವಲ ಮೋಜಿಗಾಗಿ ಹುಡುಗರೊಂದಿಗೆ ದೈಹಿಕ ಸಂಪರ್ಕ ಬೆಳೆಸುವ ಮಟ್ಟಕ್ಕೆ ಭಾರತ ಇನ್ನೂ ತಲುಪಿಲ್ಲ ಎಂದು ಹೇಳಿದರು.
"ಭಾರತ ಸಂಪ್ರದಾಯವಾದಿ ಸಮಾಜವಾಗಿದ್ದು ಇದು ಇನ್ನೂ ಅವಿವಾಹಿತ ಹುಡುಗಿಯರು, ಭವಿಷ್ಯದಲ್ಲಿ ಮದುವೆಯ ವಚನ/ಭರವಸೆ ಇಲ್ಲದೆ ತಮ್ಮ ಧರ್ಮ ಲೆಕ್ಕಿಸದೆ, ಕೇವಲ ಮೋಜಿಗಾಗಿ ಹುಡುಗರೊಂದಿಗೆ ದೈಹಿಕ ಸಂಪರ್ಕದಲ್ಲಿ ತೊಡಗುವಂತಹ (ಮುಂದುವರೆದ ಇಲ್ಲವೇ ಕೆಳಮಟ್ಟದ) ನಾಗರಿಕತೆಯನ್ನು ತಲುಪಿಲ್ಲ. ಈ ಅಂಶವನ್ನು ಸಾಬೀತುಪಡಿಸಲು, ಪ್ರಸ್ತುತ ಪ್ರಕರಣದಂತೆ ಪ್ರತಿ ಬಾರಿಯೂ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸುವ ಅಗತ್ಯವಿಲ್ಲ" ಎಂದು ಆದೇಶದ ವೇಳೆ ನ್ಯಾಯಾಲಯ ಹೇಳಿದೆ.
ಅವಿವಾಹಿತ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸುವ ಹುಡುಗ ತನ್ನ ಕ್ರಿಯೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಅದನ್ನು ಎದುರಿಸಲು ಅವನು ಸಿದ್ಧನಾಗಿರಬೇಕು ಎಂದು ಕೂಡ ಪೀಠ ಹೇಳಿದೆ.
ಮದುವೆಯ ನೆಪದಲ್ಲಿ ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪವಿರುವ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ವಿವಾಹದ ನೆಪದಲ್ಲಿ ಆರೋಪಿಯು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 366 (ಅಪಹರಣ, ಒತ್ತೆ ಅಥವಾ ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸುವುದು) ಮತ್ತು ಪೋಕ್ಸೊ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಅರ್ಜಿದಾರ ಆರೋಪಿ ಪರ ವಕೀಲರು ವಾದ ಮಂಡಿಸಿ ಯುವತಿ ಸ್ವಇಚ್ಛೆಯಿಂದ ದೈಹಿಕ ಸಂಪರ್ಕ ಬೆಳೆಸಿದ್ದಾಳೆ ಮತ್ತು ಇಬ್ಬರೂ ಅನ್ಯಧರ್ಮೀಯರಾಗಿರುವುದರಿಂದ ಆಕೆಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದರು. ಆದರೆ ಸರ್ಕಾರಿ ವಕೀಲರು “ ಅರ್ಜಿದಾರರಾದ ಆರೋಪಿ ವಿವಾಹವಾಗುವ ನೆಪದಲ್ಲಿ ಪದೇ ಪದೇ ಅತ್ಯಾಚಾರ ಎಸಗಿರುವುದರಿಂದ ಆತನಿಗೆ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ. ಅಲ್ಲದೆ ತನಗೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಯವಾಗಿದೆ ಎಂದು ತಿಳಿಸಿದ ಆತ ಮದುವೆಯಾಗಲು ನಿರಾಕರಿಸಿದ ” ಎಂದು ವಾದಿಸಿದರು.
ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆಕೆ ಸಂಬಂಧದ ಕುರಿತು ಗಂಭೀರವಾಗಿದ್ದುದನ್ನು ಇದು ಸೂಚಿಸುತ್ತದೆ ಮತ್ತು ಆಕೆ ಕೇವಲ ಮೋಜಿಗಾಗಿ ಈ ಸಂಬಂಧ ಬೆಳೆಸಿದ್ದಳು ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿತು/ ಈ ಹಿನ್ನೆಲೆಯಲ್ಲಿ ಅಧಿಕೃತ ಸಾಕ್ಷ್ಯ ಮತ್ತು ವಾದಗಳನ್ನು ಪರಿಗಣಿಸಿದ ನ್ಯಾಯಾಲಯ ಅರ್ಜಿದಾರರಾದ ಆರೋಪಿಯ ಜಾಮೀನು ತಿರಸ್ಕರಿಸಿತು.