ಅಂತಿಮ ಆದೇಶ ನೀಡದೆ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿರುವುದು ವಾಡಿಕೆಯಲ್ಲಿಲ್ಲದ ಸಂಗತಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ತನ್ನ ಆದೇಶ ಕಾಯ್ದಿರಿಸುವಾಗ ಜಾಮೀನಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಜೂನ್ 21 ರಂದು ಆದೇಶ ಹೊರಡಿಸಿದ್ದರು.
“ತಡೆ ಪ್ರಕರಣಗಳಲ್ಲಿ ತೀರ್ಪುಗಳನ್ನು ಕಾಯ್ದಿರಿಸದೆ ತಕ್ಷಣವೇ ನೀಡಲಾಗುತ್ತದೆ. ಇಲ್ಲಿ ನಡೆದಿರುವುದು ವಾಡಿಕೆಯಲ್ಲಿಲ್ಲದ ಸಂಗತಿ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ, ಅರ್ಜಿದಾರರು ಹೇಳಿರುವಂತೆ ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ತಡೆ ನೀಡುವ ಮೂಲಕ ತಪ್ಪು ಮಾಡಿದ್ದರೆ, ತಾನು ಈಗ ಅದೇ ತಪ್ಪು ಮಾಡುವುದಿಲ್ಲ ಎಂದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜೂನ್ 26, ಬುಧವಾರದಂದು ವಿಚಾರಣೆಗೆ ಮುಂದೂಡುವುದು ಸೂಕ್ತ ಎಂದಿತು. ಈ ವೇಳೆಗೆ ಜಾಮೀನಿಗೆ ತಡೆ ಕೋರಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ಅಂತಿಮ ಆದೇಶ ಪ್ರಕಟಿಸುವ ನಿರೀಕ್ಷೆಯಿದೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿಚಾರಣೆಯ ಮೊದಲ ದಿನವೇ ಜಾಮೀನಿಗೆ ತಡೆ ನೀಡಿರುವುದು ಪೂರ್ವನಿದರ್ಶನವಿಲ್ಲದೆ ಇರುವಂಥದ್ದು . ವಿಚಾರಣಾ ನ್ಯಾಯಾಲಯದ ತಡೆಯಾಜ್ಞೆಯ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಒಳಪಡಿಸುವ ಮೊದಲೇ ಹೈಕೋರ್ಟ್ ಸ್ಥಗಿತಗೊಳಿಸಿತು.
ಕೇಜ್ರಿವಾಲ್ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ವಕೀಲ ವಿಕ್ರಮ್ ಚೌಧರಿ, ಕೇಜ್ರಿವಾಲ್ ಯಾವುದೇ ಕ್ರಿಮಿನಲ್ ಹಿನ್ನಲೆಗಳನ್ನು ಹೊಂದಿಲ್ಲ ಮತ್ತು ಅವರು ದೇಶ ತೊರೆಯುವ ಅಪಾಯ ಇಲ್ಲ ಎಂದರು.
ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು, ತಡೆಯಾಜ್ಞೆ ಕೋರಿ ಇ ಡಿ ಸಲ್ಲಿಸಿರುವ ಅರ್ಜಿಯ ಕುರಿತು ನಾಳೆ ಹೈಕೋರ್ಟ್ ಆದೇಶ ನೀಡಲಿದೆ ಎಂದು ಹೇಳಿದರು. ಇ ಡಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಕೇಜ್ರಿವಾಲ್ ಅವರ ಪರ ವಾದಗಳನ್ನು ಅಲ್ಲಗಳೆದರು.