ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಬಣದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಸಾಗಿ ಬಂದ ಹಾದಿ

ನ್ಯಾಯಮೂರ್ತಿ ರೆಡ್ಡಿ ಅವರು ಎನ್‌ಡಿಎ ಅಭ್ಯರ್ಥಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲರಾದ ಸಿ ಪಿ ರಾಧಾಕೃಷ್ಣನ್ ವಿರುದ್ಧ ಸ್ಪರ್ಧಿಸಲಿದ್ದಾರೆ.
Justice B Sudershan Reddy
Justice B Sudershan Reddy
Published on

ಉಪರಾಷ್ಟ್ರಪತಿ ಚುನಾವಣೆಯ ತನ್ನ ಅಭ್ಯರ್ಥಿಯನ್ನಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರನ್ನು  ಭಾರತದ ರಾಷ್ಟ್ರೀಯ ಅಭಿವೃದ್ದಿಗಾಗಿ ಒಳಗೊಳ್ಳುವಿಕೆ ಒಕ್ಕೂಟ (ಇಂಡಿಯಾ) ಮಂಗಳವಾರ ನಾಮನಿರ್ದೇಶನ ಮಾಡಿದೆ.

ಸುದರ್ಶನ್‌ ರೆಡ್ಡಿ ಅವರು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಭ್ಯರ್ಥಿ ಹಾಗೂ ಮಹಾರಾಷ್ಟ್ರದ ಈಗಿನ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ವಿರುದ್ಧ ಸ್ಪರ್ಧಿಸಲಿದ್ದಾರೆ.

Also Read
ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ

ಸುದರ್ಶನ್‌ ರೆಡ್ಡಿ ಅವರ ಹೆಸರು ಪ್ರಕಟಿಸಿದ ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉಪರಾಷ್ಟ್ರಪತಿ ಚುನಾವಣೆ ಸೈದ್ಧಾಂತಿಕ ಹೋರಾಟವಾಗಿದ್ದು, ನ್ಯಾ. ರೆಡ್ಡಿ ಅವರು ಭಾರತದ ಅತ್ಯಂತ ವಿಶಿಷ್ಟ ಮತ್ತು ಪ್ರಗತಿಪರ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರು ಎಂದು ಹೇಳಿದರು.

ನ್ಯಾ. ರೆಡ್ಡಿ ಅವರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ನಿರಂತರ ಮತ್ತು ದಿಟ್ಟ ಪ್ರತಿಪಾದಕರು. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯನ್ನು ಆಳವಾಗಿ ರೂಪಿಸಿದ ಮೌಲ್ಯಗಳನ್ನು ಮತ್ತು ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಆಧಾರವಾಗಿರುವ ಮೌಲ್ಯಗಳನ್ನು ಅವರು ಸಂಪೂರ್ಣವಾಗಿ ಪ್ರತಿನಿಧಿಸುತ್ತಾರೆ. ಇಂದು ಈ ಎಲ್ಲಾ ಮೌಲ್ಯಗಳು ದಾಳಿಗೆ ಒಳಗಾಗಿರುವುದರಿಂದ ಚುನಾವಣೆಯಲ್ಲಿ ಹೋರಾಡಲು ಮೈತ್ರಿಕೂಟದ ಸಾಮೂಹಿಕ ಮತ್ತು ದೃಢ ನಿಶ್ಚಯದ ಸಂಕಲ್ಪ ಇದಾಗಿದೆ ಎಂದು ಖರ್ಗೆ ವಿವರಿಸಿದ್ದಾರೆ.

ಸೆಪ್ಟೆಂಬರ್ 9 ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಜುಲೈ 21, 2025ರಂದು ದಿಢೀರನೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.

ನ್ಯಾ. ರೆಡ್ಡಿ ಅವರು ಸಾಗಿ ಬಂದ ಹಾದಿ

ನ್ಯಾಯಮೂರ್ತಿ ರೆಡ್ಡಿ ಜುಲೈ 8, 1946ರಲ್ಲಿ ಜನಿಸಿದರು.1971ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು. ಅದೇ ವರ್ಷ, ಅವರು ಆಂಧ್ರಪ್ರದೇಶದ ವಕೀಲರ ಪರಿಷತ್‌ನಲ್ಲಿ ನ್ಯಾಯವಾದಿಯಾಗಿ ನೋಂದಾಯಿಸಿಕೊಂಡರು.

ಅವರು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳ ವಕೀಲಿಕೆ ಮಾಡಿದ್ದಾರೆ. 1988-90ರ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿ ಮತ್ತು  1990ರಲ್ಲಿ 6 ತಿಂಗಳು ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ರೆಡ್ಡಿ ಅವರು ಕೆಲಸ ಮಾಡಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ. 

Also Read
ಎನ್‌ಡಿಎ ಅಭ್ಯರ್ಥಿ, ಹಿರಿಯ ನ್ಯಾಯವಾದಿ ಜಗದೀಪ್ ಧನಕರ್ ನೂತನ ಉಪರಾಷ್ಟ್ರಪತಿ

ಅವರನ್ನು ಮೇ 2, 1995ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಯಿತು. ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಡಿಸೆಂಬರ್ 5, 2005ರಂದು ಪದೋನ್ನತಿ ಪಡೆದದ್ದುದು.

ಜನವರಿ 2007ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ಗೆ  ಪದೋನ್ನತಿಗೊಂಡ ಅವರು  ಜುಲೈ 8, 2011ರಂದು ನಿವೃತ್ತರಾದರು.

Kannada Bar & Bench
kannada.barandbench.com