ಅತ್ಯಾಚಾರ-ಪೋಕ್ಸೊ ಪ್ರಕರಣ: ಮುರುಘಾ ಶರಣರ ಖುಲಾಸೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ

ಕಳೆದ ನವೆಂಬರ್‌ 26ರಂದು ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(3), 323, 504, 506, ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 5(I), 6 ಮತ್ತು 17ರ ಆರೋಪಗಳಿಂದ ಮುರುಘಾ ಶರಣರು ಸೇರಿ ಮೂವರನ್ನು ವಿಚಾರಣಾಧೀನ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಅತ್ಯಾಚಾರ-ಪೋಕ್ಸೊ ಪ್ರಕರಣ: ಮುರುಘಾ ಶರಣರ ಖುಲಾಸೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ
Published on

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಕ್ರಿಮಿನಲ್‌ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮರುಘಾ ಶರಣರು ಹಾಗೂ ಇತರ ಇಬ್ಬರನ್ನು ಖುಲಾಸೆಗೊಳಿಸಿರುವ ಚಿತ್ರದುರ್ಗ ಸತ್ರ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಬೇಕು ಮತ್ತು ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೋರಿ ಸಂತ್ರಸ್ತ ಬಾಲಕಿಯರು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ಪ್ರತ್ಯೇಕವಾಗಿ ಎರಡು ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ.

ಚಿತ್ರದುರ್ಗ ಗ್ರಾಮೀಣ ಪೊಲೀಸ್‌ ಠಾಣೆಯನ್ನು ಪ್ರತಿನಿಧಿಸುವ ರಾಜ್ಯ ಪ್ರಾಸಿಕ್ಯೂಷನ್‌, ಖುಲಾಸೆಗೊಂಡಿರುವ ಆರೋಪಿಗಳಾದ ಶಿವಮೂರ್ತಿ ಮುರುಘಾ ಶರಣರು, ಎಸ್‌ ರಶ್ಮಿ ಮತ್ತು ಎ ಜೆ ಪರಮಶಿವಯ್ಯ ಅವರನ್ನು ಮೇಲ್ಮನವಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಅರ್ಜಿಗಳು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಕಳೆದ ನವೆಂಬರ್‌ 26ರಂದು ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(3), 323, 504, 506, ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 5(I), 6 ಮತ್ತು 17ರ ಆರೋಪಗಳಿಂದ ಸ್ವಾಮೀಜಿ ಸೇರಿ ಮೂವರನ್ನು ವಿಚಾರಣಾಧೀನ ನ್ಯಾಯಾಲಯ ಖುಲಾಸೆಗೊಳಿಸಿತ್ತು.

Also Read
ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಖುಲಾಸೆಗೊಳಿಸಿದ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ

ಮುರುಘಾ ಶರಣರು ತಮ್ಮನ್ನು ಖಾಸಗಿ ಕೊಠಡಿಗೆ ಹಿಂಬಾಗಿಲಿನಿಂದ ಕರೆಸಿಕೊಂಡು ಚಾಕೋಲೇಟ್‌ಗಳು ಮತ್ತು ಹಣ್ಣು ಇತ್ಯಾದಿಗಳನ್ನು ತಿನ್ನಲು ನೀಡುತ್ತಿದ್ದರು. ಇದರಲ್ಲಿ ಮಾದಕ ಪದಾರ್ಥಗಳನ್ನು ಬೆರಸಲಾಗಿತ್ತು. ಇದನ್ನು ಸವಿದ ನಂತರ ತಾವು ಪ್ರಜ್ಞೆ ಕಳೆದುಕೊಂಡಾಗ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸಬಾರದು. ಬಹಿರಂಗಪಡಿಸಿದರೆ ತಮ್ಮ ತಂದೆ-ತಾಯಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬುದಾಗಿ ಸಂತ್ರಸ್ತ ಬಾಲಕಿಯರು ದೂರು ನೀಡಿದ್ದರು.

ಮಾಜಿ ಶಾಸಕ ಎಸ್‌ ಕೆ ಬಸವರಾಜನ್‌ ಮತ್ತು ಅವರ ಪತ್ನಿ ಸೌಜನ್ಯಾ ನೆರವಿನಿಂದ ಮೈಸೂರಿನ ಸರ್ಕಾರೇತರ ಸಂಸ್ಥೆ ಒಡನಾಡಿ ತಲುಪಿ, ಅವರ ನೆರವಿನಿಂದ ಮೈಸೂರಿನ ನಜಾರಾಬಾದ್‌ ಠಾಣೆಯಲ್ಲಿ ದೂರು ನೀಡಿದ್ದಾಗಿ ಅರ್ಜಿಯಲ್ಲಿ ವಿವರಿಸಲಾಗಿತ್ತು. ಆನಂತರ ಪ್ರಕರಣವು ಚಿತ್ರದುರ್ಗದ ಗ್ರಾಮೀಣ ಠಾಣೆಗೆ ವರ್ಗಾವಣೆಯಾಗಿತ್ತು.

Kannada Bar & Bench
kannada.barandbench.com